ADVERTISEMENT

ಮಕ್ಕಳ ಜನ್ಮದಾಖಲೆ: ಪಾಲಕರಿಗೆ ಹೊರೆಯಾದ ‘ಹಿಂಬರಹ’ ಪತ್ರ

ಟಿ.ನಾಗೇಂದ್ರ
Published 6 ಸೆಪ್ಟೆಂಬರ್ 2024, 6:28 IST
Last Updated 6 ಸೆಪ್ಟೆಂಬರ್ 2024, 6:28 IST

ಮಗು  (ಸಾಂದರ್ಭಿಕ ಚಿತ್ರ)

ಮಗು (ಸಾಂದರ್ಭಿಕ ಚಿತ್ರ)

ಶಹಾಪುರ: ಶಾಲಾ ದಾಖಲಾತಿಗಾಗಿ ಮಕ್ಕಳ ಆಧಾರ್‌ ಕಾರ್ಡ್ ಕಡ್ಡಾಯವಾಗಿ ಅಗತ್ಯವಾಗಿರುವುದರಿಂದ ಅದನ್ನು ಪಡೆದುಕೊಳ್ಳಲು ಗ್ರಾಮೀಣ ಪ್ರದೇಶದ ಪಾಲಕರು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಮಕ್ಕಳ ಶಾಲಾ ದಾಖಲಾತಿ ಕಗ್ಗಂಟಾಗಿ ಪರಿಣಮಿಸಿದೆ.

ಗ್ರಾಮೀಣ ಹಾಗೂ ನಗರ ಪ್ರದೇಶದ ಹೆಚ್ಚಿನ ಅನಕ್ಷರಸ್ಥರು ಜನನ ಪ್ರಮಾಣದ ಪಡೆದುಕೊಳ್ಳಬೇಕು ಎಂಬ ಅರಿವು ಇಲ್ಲದ ಕಾರಣ ಆಯಾ ಪ್ರದೇಶದಲ್ಲಿ ವಾಸವಾಗಿರುವ ಪಾಲಕರು ತಮ್ಮ ಮಗು ಜನಿಸಿದ ಒಂದು ವರ್ಷದ ಒಳಗೆ ಸಂಬಂಧಪಟ್ಟ ಕಚೇರಿಗೆ ತೆರಳಿ ಮಗು ಜನಿಸಿದ ದಿನವನ್ನು ನಮೂದಿಸಿಲ್ಲ. ಪ್ರಾಥಮಿಕ ಶಾಲೆಗೆ ಮಗುವನ್ನು ದಾಖಲಾತಿ ಮಾಡಲು ತೆರಳಿದರೆ ಶಾಲಾ ಮುಖ್ಯಸ್ಥರು ಕಡ್ಡಾಯವಾಗಿ ಆಧಾರ ಕಾರ್ಡ್ ಕೇಳುತ್ತಾರೆ. ಆಧಾರ ಕಾರ್ಡ್‌ ಮಾತ್ರವೇ ಜನನ ಪ್ರಮಾಣ ಪತ್ರ ಪಡೆಯಲು ಅಗತ್ಯ ದಾಖಲೆ ಎನ್ನುತ್ತಾರೆ. ಇದರಿಂದ ಪಾಲಕರಿಗೆ ತಲೆ ನೋವಾಗಿ ಪರಿಣಮಿಸಿದೆ ಎನ್ನುತ್ತಾರೆ ಶಾಲಾ ಮುಖ್ಯಸ್ಥರು.

ADVERTISEMENT

ವರ್ಷ ತುಂಬಿದ ಬಳಿಕ ಆಯಾ ಕಚೇರಿ ವ್ಯಾಪ್ತಿಯಲ್ಲಿ ಜನನ ಪತ್ರ ಸಿಗುವುದಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಜನಿಸಿದ್ದರೆ ತಹಶೀಲ್ದಾರ್‌ ಬಳಿ ಹಾಗೂ ನಗರ ವ್ಯಾಪ್ತಿಯಲ್ಲಿ ಜನಿಸಿದ್ದರೆ ನಗರಸಭೆಯ ಮೂಲಕ ’ಹಿಂಬರ’ ಪಡೆದುಕೊಂಡು ಪಾಲಕರು ನ್ಯಾಯಾಲಯಕ್ಕೆ ತೆರಳಬೇಕು. ವಕೀಲರ ಮೂಲಕ ಅರ್ಜಿ ಸಲ್ಲಿಸಬೇಕು. ವಕೀಲರ ಫೀಜು ಹಾಗೂ ನ್ಯಾಯಾಲಯಕ್ಕೆ ಅಲೆದಾಟದಿಂದ ಹಣ ವೆಚ್ಚವಾಗುತ್ತಲಿದೆ. ಗ್ರಾಮೀಣ ಹಾಗೂ ನಗರ ಪ್ರದೇಶದ ಬಡ ಜನತೆಯ ಪಾಲಕರಿಗೆ ಆಯಾ ತಾಲ್ಲೂಕು ಕಾನೂನು ಸೇವಾ ಸಮಿತಿಯ ನೆರವಿನ ಮೂಲಕ ಉಚಿತ ಜನನ ಪ್ರಮಾಣ ಪತ್ರವನ್ನು ಒದಗಿಸುವ ಬಗ್ಗೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತ ಮಾನಪ್ಪ ಹಡಪದ ಅವರು ರಾಜ್ಯ ಕಾನೂನು ಸೇವಾ ಪ್ರಾಧಿಕಾರಕ್ಕೆ ಪತ್ರ ಬರೆದು ಮನವಿ ಮಾಡಿದ್ದಾರೆ.

’ಆಯಾ ತಾಲ್ಲೂಕು ಕೇಂದ್ರದಲ್ಲಿ ಈಗಾಗಲೇ ಕಾನೂನು ಸೇವಾ ಸಮಿತಿಯು ಕಾನೂನು ಬಗ್ಗೆ ಅರಿವು ನೆರವು ನೀಡುತ್ತಲಿದೆ. ಕಾನೂನು ಚಿಕಿತ್ಸಾ ಘಟಕ ವಿಭಾಗವು ಇದೆ. ಅಲ್ಲದೇ ಸೇವಾ ಸಮಿತಿಯಲ್ಲಿ ಪ್ಯಾನಲ್ ವಕೀಲರು ಸೇವೆ ಸಲ್ಲಿಸುತ್ತಿದ್ದಾರೆ. ರಾಜ್ಯ ಕಾನೂನು ಸೇವಾ ಸಮಿತಿಯ ಅವರಿಗೆ ಗೌರವ ಧನವನ್ನು ನೀಡುತ್ತಲಿದ್ದು, ಜನನ ಪ್ರಮಾಣ ಪತ್ರವನ್ನು ಸೇವಾ ಸಮಿತಿಯ ಮೂಲಕ ಉಚಿತವಾಗಿ ವಿತರಿಸುವ ಬಗ್ಗೆ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಸುತ್ತೋಲೆ ಹೊರಡಿಸಬೇಕು’ ಎಂದು ಮಾನಪ್ಪ ಹಡಪದ ಪತ್ರದಲ್ಲಿ ಮನವಿ ಮಾಡಿದ್ದಾರೆ.

‘ಹೊಸ ಕಾಯ್ದೆ ಜಾರಿ: ಎಚ್ಚರಿಕೆ ಅಗತ್ಯ’
ಜನನ ಮತ್ತು ಮರಣ ನೋಂದಣಿ ಅಧಿನಿಯಮ ತಿದ್ದುಪಡಿ ಪ್ರಕಾರ ಮಗು ಜನಿಸಿದ 21 ದಿನದಲ್ಲಿ ಆಯಾ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗೆ ಅರ್ಜಿ ಸಲ್ಲಿಸಿದರೆ ಜನನ ಪ್ರಮಾಣ ಪತ್ರ ನೀಡುತ್ತಾರೆ. 21 ದಿನದ ನಂತರ ಪಡೆಯದೇ ಹೋದರೆ ತಹಶೀಲ್ದಾರ್‌ ಕಚೇರಿಗೆ ಅರ್ಜಿ ಸಲ್ಲಿಸಿದರೆ ಜನನ ಪ್ರಮಾಣ ಪತ್ರವನ್ನು ಒದಗಿಸಲಾಗುತ್ತದೆ. ಒಂದು ವರ್ಷ ಮೇಲ್ಪಟ್ಟು ಹೋದರೆ ನ್ಯಾಯಾಲಯಕ್ಕೆ ತೆರಳಿ ಪಡೆಯಲು ಅವಕಾಶ ಇದೆ’ ಎಂದು ತಹಶೀಲ್ದಾರ್‌ ಉಮಾಕಾಂತ ಹಳ್ಳೆ ತಿಳಿಸಿದ್ದಾರೆ.
ತಾಲ್ಲೂಕು ಕಾನೂನು ಸೇವಾ ಸಮಿತಿಯ ಮುಂದೆ ಅರ್ಜಿ ಸಲ್ಲಿಸಿ ಅಗತ್ಯ ದಾಖಲೆ ನೀಡಿದರೆ ಪ್ಯಾನಲ್ ವಕೀಲರ ಮೂಲಕ ಉಚಿತವಾಗಿ ಜನನ ಪ್ರಮಾಣ ಪತ್ರ ಪಡೆಯಬಹುದು
ಉಮಾಕಾಂತ ಹಳ್ಳೆ, ತಹಶೀಲ್ದಾರ್

ನ್ಯಾಯಾಲಯದಿಂದ ಪ್ರಮಾಣ ಪಡೆಯಲು ಪಾಲಕರು ಹೆಚ್ಚಿನ ಹಣ ನೀಡುವಂತಾಗಿದೆ. ಪ್ಯಾನಲ್ ವಕೀಲರ ಮೂಲಕ ಜನನ ಪತ್ರ ವಿತರಿಸುವ ವ್ಯವಸ್ಥೆ ಕಲ್ಪಿಸಬೇಕು

ಮಾನಪ್ಪ ಹಡಪದ, ಸಾಮಾಜಿಕ ಕಾರ್ಯಕರ್ತ, ಶಹಾಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.