ಶಹಾಪುರ (ಯಾದಗಿರಿ ಜಿಲ್ಲೆ): ತಾಲ್ಲೂಕಿನ ಶಿರವಾಳ ಗ್ರಾಮದಲ್ಲಿ ವಾಲ್ಮೀಕಿ ಹಾಗೂ ಕಬ್ಬಲಿಗ ಸಮಾಜದ ಯುವಕರ ನಡುವೆ ಸೋಮವಾರ ಘರ್ಷಣೆಯಾಗಿದ್ದು, ನಾಲ್ವರು ಗಾಯಗೊಂಡಿದ್ದಾರೆ.
ಭಾನುವಾರ ಮೊಹರಂ ಆಚರಣೆಯ ವೇಳೆ ‘ಅಲಾಯಿ ದೇವರು ನಮ್ಮ ಬಡಾವಣೆಯಲ್ಲಿ ಕೂಡಿಸಿರುವಾಗ ಅನ್ಯ ಜಾತಿ ಅವರು ಆಗಮಿಸಬಾರದು’ ಎಂಬ ವಿಷಯ ಮುಂದಿಟ್ಟುಕೊಂಡು ಗ್ರಾಮದ ವಾಲ್ಮೀಕಿ ಹಾಗೂ ಕಬ್ಬಲಿಗ ಸಮುದಾಯದ ನಡುವೆ ಜಗಳವಾಗಿ ಕಲ್ಲು ತೂರಾಟವಾಗಿತ್ತು. ಭೀಮರಾಯನಗುಡಿ ಠಾಣೆಯ ಪೊಲೀಸರು ಸಾರ್ವಜನಿಕ ಸ್ಥಳದಲ್ಲಿ ಗಲಾಟೆ ಆರೋಪದ ಮೇಲೆ ಎರಡು ಗುಂಪಿನವರ ವಿರುದ್ಧ ದೂರು ದಾಖಲಿಸಿದ್ದರು.
ಅದೇ ದ್ವೇಷದ ಮುಂದುವರಿದ ಭಾಗವಾಗಿ ಸೋಮವಾರ ವಾಲ್ಮೀಕಿ ಹಾಗೂ ಕಬ್ಬಲಿಗ ಸಮುದಾಯದ ನಡುವೆ ಗಲಾಟೆ ನಡೆದಿದೆ. ಅದರಲ್ಲಿ ವಾಲ್ಮೀಕಿ ಸಮುದಾಯದ ನಾಲ್ವರು ಗಾಯಗೊಂಡಿದ್ದು, ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎಂದು ಗ್ರಾಮದ ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.
‘ಎರಡು ಸಮದಾಯಗಳ ಮುಖಂಡರು ಸಭೆ ನಡೆಸಿದ್ದಾರೆ. ‘ಮೊಹರಂ ಆಚರಣೆಯ ಬಣ್ಣ ಲೇಪಿಸುವುದು ಬೇಡ. ವೈಯಕ್ತಿಕ ಕಾರಣಕ್ಕೆ ಯುವಕರು ಗಲಾಟೆ ಮಾಡಿಕೊಂಡಿದ್ದಾರೆ’ ಎಂದು ದೂರು ಹಾಗೂ ಪ್ರತಿದೂರು ದಾಖಲಿಸಿ, ವಿವಾದ ಇತ್ಯರ್ಥಕ್ಕೆ ಯತ್ನಿಸಿದ್ದಾರೆ’ ಎಂದು ಮೂಲಗಳು ತಿಳಿಸಿದ್ದಾರೆ.
ಗ್ರಾಮದಲ್ಲಿ ಬೂದಿ ಮುಚ್ಚಿದ ಕೆಂಡದಂಥ ವಾತಾವರಣವಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಒಂದು ಪೊಲೀಸ್ ವ್ಯಾನ್ ನಿಯೋಜಿಸಲಾಗಿದೆ. ಗ್ರಾಮಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಭೀಮರಾಯನಗುಡಿಯಲ್ಲಿ ಪೊಲೀಸ್ ಠಾಣೆಯಲ್ಲಿ ದೂರುಗಳು ದಾಖಲಾಗಿವೆ.
ಮೊಹರಂ ವೇಳೆ ಗಲಾಟೆಯಾಗಿಲ್ಲ. ಯುವಕರು ವೈಯಕ್ತಿಕ ಕಾರಣಕ್ಕೆ ಹೊಡೆದಾಡಿಕೊಂಡಿದ್ದರಿಂದ ದೂರು– ಪ್ರತಿ ದೂರು ದಾಖಲಾಗಿವೆ. ಗ್ರಾಮದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆಮಹಾತೇಂಶ ಪಾಟೀಲ ಭೀಮರಾಯನಗುಡಿ ಪಿಎಸ್‌ಐ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.