ADVERTISEMENT

ಕೋವಿಡ್‌ ಮುನ್ನೆಚ್ಚರಿಕೆಯೊಂದಿಗೆ 6, 7, 8 ತರಗತಿಗಳು ಆರಂಭ

ಪ್ರೌಢ ಶಾಲೆಯಲ್ಲಿ ಶೇ 55.50, ಹಿರಿಯ ಪ್ರಾಥಮಿಕ ಶಾಲೆಯ ಶೇ 60.08ರಷ್ಟು ಹಾಜರಾತಿ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2021, 4:43 IST
Last Updated 23 ಫೆಬ್ರುವರಿ 2021, 4:43 IST
ಯಾದಗಿರಿಯ ಸ್ಟೇಷನ್‌ ಬಜಾರ್ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಹಾಜರಾಗಿದ್ದ ವಿದ್ಯಾರ್ಥಿಗಳು
ಯಾದಗಿರಿಯ ಸ್ಟೇಷನ್‌ ಬಜಾರ್ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಹಾಜರಾಗಿದ್ದ ವಿದ್ಯಾರ್ಥಿಗಳು   

ಯಾದಗಿರಿ: ನಗರ ಸೇರಿದಂತೆ ಜಿಲ್ಲೆಯಲ್ಲಿ ಸೋಮವಾರ 6, 7, 8 ಪೂರ್ಣ ಪ್ರಮಾಣದ ತರಗತಿಗಳು ಆರಂಭವಾದವು. ಈಗಾಗಲೇ 9, 10ನೇ ತರಗತಿಗಳು ಆರಂಭಗೊಂಡಿದ್ದವು.

ಶಾಲಾ ಮಕ್ಕಳಿಗೆ ಕೈಗೆ ಸ್ಯಾನಿಟೈಸರ್‌ ದ್ರವ ಸಿಂಪಡಿಸಲಾಯಿತು. ಅಂತರ ಕಾಪಾಡಲು ಸೂಚಿಸಲಾಗಿತ್ತು. ಮಕ್ಕಳನ್ನು ಕಂಡ ಶಿಕ್ಷಕರ, ಶಿಕ್ಷಕರು ಖುಷಿಪಟ್ಟರು. ವಿದ್ಯಾಗಮದಲ್ಲಿ ಒಂದು ಅವಧಿ ಮಾತ್ರ ಪಾಠ ನಡೆಯುತಿತ್ತು. ಆದರೆ, ಈಗ ಪೂರ್ಣ ಪ್ರಮಾಣದಲ್ಲಿ ಶಾಲೆ ಆರಂಭವಾಗಿದ್ದು, ಮಕ್ಕಳು ಸಂತಸದಿಂದ ಶಾಲೆಗೆ ಆಗಮಿಸಿದ್ದರು.

ಯಾದಗಿರಿ ತಾಲ್ಲೂಕಿನ 6 ರಿಂದ 10ನೇ ತರಗತಿ ವರೆಗೆ 23,598 ವಿದ್ಯಾರ್ಥಿಗಳಲ್ಲಿ 14,180 ವಿದ್ಯಾರ್ಥಿಗಳು (60.80ರಷ್ಟು) ಹಾಜರಾಗಿದ್ದರು.

ADVERTISEMENT

ಜಿಲ್ಲೆಯ ವಿದ್ಯಾರ್ಥಿಗಳ ಹಾಜರಾತಿ ವಿವರ

ಸೋಮವಾರ ತರಗತಿಗಳು ಆರಂಭವಾಗಿದ್ದು, ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಚೆನ್ನಾಗಿದೆ. 6ನೇ ತರಗತಿಯಲ್ಲಿ 19,021 ಹೆಸರು ನೋಂದಾಯಿಸಿದ್ದರೆ 10, 874 ವಿದ್ಯಾರ್ಥಿಗಳು ಹಾಜರಾಗಿದ್ದರು.

7ನೇ ವರ್ಗದಲ್ಲಿ 18,243 ವಿದ್ಯಾರ್ಥಿಗಳಲ್ಲಿ 10,297 ಹಾಜರಾಗಿ ಶೇ 56.44 ರಷ್ಟಾಗಿತ್ತು. 8ನೇ ತರಗತಿಯಲ್ಲಿ 15,786 ರಲ್ಲಿ 1,818 ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಶೇ 57.87ರಷ್ಟು ವಿದ್ಯಾರ್ಥಿಗಳು ಶಾಲೆಗೆ ಆಗಮಿಸಿದ್ದಾರೆ.

9ನೇ ತರಗತಿಯಲ್ಲಿ ಶೇ 49.95ರಷ್ಟು, 10ನೇ ವರ್ಗದಲ್ಲಿ 10,296 ವಿದ್ಯಾರ್ಥಿಗಳಲ್ಲಿ 6,395 (ಶೇ62.11) ಹಾಜರಾಗಿದ್ದರು.

‘ನಮ್ಮ ಶಾಲೆಯಲ್ಲಿ 1ರಿಂದ 7 ನೇ ತರಗತಿ ವರೆಗೆ ಈ ಬಾರಿ 124 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಒಟ್ಟಾರೆ 481 ವಿದ್ಯಾರ್ಥಿಗಳಿದ್ದಾರೆ. 6ನೇ ವರ್ಗದಲ್ಲಿ 165 ನೋಂದಣಿ ಇದ್ದರೆ 134 ವಿದ್ಯಾರ್ಥಿಗಳು ಹಾಜರಾಗಿದ್ದರು. 7ನೇ ತರಗತಿಯಲ್ಲಿ 163 ವಿದ್ಯಾರ್ಥಿಗಳಲ್ಲಿ 124 ವಿದ್ಯಾರ್ಥಿಗಳು ಶಾಲೆಗೆ ಆಗಮಿಸಿದ್ದರು. ಒಟ್ಟಾರೆ 328 ವಿದ್ಯಾರ್ಥಿಗಳಲ್ಲಿ 70 ವಿದ್ಯಾರ್ಥಿಗಳು ಮಾತ್ರ ಸೋಮವಾರ ಗೈರಾಗಿದ್ದಾರೆ’ ಎನ್ನುತ್ತಾರೆ ಯಾದಗಿರಿಯ ಸ್ಟೇಷನ್‌ ಬಜಾರ್ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕಿ ಶಾಂತಮ್ಮ ನರಬೋಳಿ ಅವರು.

***

ಯಾದಗಿರಿ ತಾಲ್ಲೂಕಿನ ವಿದ್ಯಾರ್ಥಿಗಳ ಹಾಜರಾತಿ
ವರ್ಗ;ಶೇಕಡವಾರು
6ನೇ ತರಗತಿ;58.90
7ನೇ ತರಗತಿ;56.76
8ನೇ ತರಗತಿ;60.90
9ನೇ ತರಗತಿ;57.53
10ನೇ ತರಗತಿ;70.92
***

ಮನೆಯಿಂದಲೇ ಮಧ್ಯಾಹ್ನದ ಊಟ

ಶಾಲೆಗಳನೂ ಪೂರ್ಣ ಪ್ರಮಾಣದಲ್ಲಿ ಆರಂಭವಾಗಿವೆ. ಆದರೆ, ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ತಯಾರಿ ಇಲ್ಲ. ಊಟ, ನೀರು ವಿದ್ಯಾರ್ಥಿಗಳು ಮನೆಯಿಂದಲೇ ತರಬೇಕಾಗಿದೆ.

ಕೆಲ ವಿದ್ಯಾರ್ಥಿಗಳು ಮನೆಯಿಂದಲೇ ಬುತ್ತಿ ಕಟ್ಟಿಕೊಂಡು ಬಂದಿದ್ದರೆ ಮತ್ತಷ್ಟು ವಿದ್ಯಾರ್ಥಿಗಳು ಮಧ್ಯಾಹ್ನ ಮನೆಗೆ ತೆರಳಿ ಮರಳಿ ಶಾಲೆಗೆ ಬಂದಿಲ್ಲ.

‘ಮಕ್ಕಳಿಗೆ ಬಿಸಿಯೂಟ ತಯಾರಿಸುವ ಬಗ್ಗೆ ಸರ್ಕಾರದಿಂದ ಯಾವುದೇ ಮಾರ್ಗಸೂಚಿ ಬಂದಿಲ್ಲ. ಹೀಗಾಗಿ ಮಕ್ಕಳಿಗೆ ಊಟ, ನೀರು ತರಲು ತಿಳಿದ್ದೇವೆ. ಆದರಂತೆ ವಿದ್ಯಾರ್ಥಿಗಳೇ ಊಟದ ಡಬ್ಬಿ ತಂದುಕೊಂಡಿದ್ದಾರೆ’ ಎನ್ನುತ್ತಾರೆ ಯಾದಗಿರಿ ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಕಾಂತರೆಡ್ಡಿ.

***

ಮಕ್ಕಳನ್ನು ನೋಡಿ ಖುಷಿಯಾಗಿದೆ. ಜೊತೆಗೆ ಆತಂಕವೂ ಇದೆ. ಮಕ್ಕಳ ವಿದ್ಯಾಭ್ಯಾಸ ಹಾಳಾಗುತ್ತಿತ್ತು. ಪೂರ್ಣ ಪ್ರಮಾಣದಲ್ಲಿ ಶಾಲೆ ಆರಂಭವಾಗಿದ್ದು, ಸಂತಸವುಂಟು ಮಾಡಿದೆ

-ಶಾಂತಮ್ಮ ನರಬೋಳಿ, ಮುಖ್ಯಶಿಕ್ಷಕಿ, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಸ್ಟೇಷನ್‌ ಬಜಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.