ADVERTISEMENT

‘ಭೂ ಸವಕಳಿಗೆ ಬದು ನಿರ್ಮಿಸಿ’

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2021, 3:53 IST
Last Updated 9 ಆಗಸ್ಟ್ 2021, 3:53 IST
ಕಗ್ಗಲಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ನಡೆದ ಸಾಮಾಜಿಕ ಲೆಕ್ಕ ಪರಿಶೋಧನಾ ಸಭೆಯಲ್ಲಿ ಕೃಷಿ ಅಧಿಕಾರಿ ಸಿಂಧು ಮಾತನಾಡಿದರು
ಕಗ್ಗಲಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ನಡೆದ ಸಾಮಾಜಿಕ ಲೆಕ್ಕ ಪರಿಶೋಧನಾ ಸಭೆಯಲ್ಲಿ ಕೃಷಿ ಅಧಿಕಾರಿ ಸಿಂಧು ಮಾತನಾಡಿದರು   

ಕನಕಪುರ: ಮುಂಗಾರು ಪ್ರಾರಂಭವಾಗಿರುವುದರಿಂದ ರಾಗಿ ಬಿತ್ತನೆ ಮಾಡುವವರಿಗೆ ಸೂಕ್ತ ಸಮಯವಾಗಿದೆ. ಇಲಾಖೆಯಿಂದ ಉಚಿತವಾಗಿ ಬಿತ್ತನೆ ರಾಗಿ ನೀಡಲಾಗುತ್ತಿದ್ದು, ರೈತರು ಬಳಕೆ ಮಾಡಿಕೊಳ್ಳಬೇಕು ಎಂದು ಕೃಷಿ ಅಧಿಕಾರಿ ಸಿಂಧು ಮನವಿ ಮಾಡಿದರು.

ತಾಲ್ಲೂಕಿನ ಹಾರೋಹಳ್ಳಿ ಹೋಬಳಿಯ ಕಗ್ಗಲಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ 2019-20, 2020-21ನೇ ಸಾಲಿನಲ್ಲಿ ನರೇಗಾ ಯೋಜನೆಯಡಿ ಆಗಿರುವ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಶನಿವಾರ ನಡೆದ ಸಾಮಾಜಿಕ ಲೆಕ್ಕ ಪರಿಶೋಧನಾ ಸಭೆಯಲ್ಲಿ ಮಾತನಾಡಿದರು.

ಮಳೆಗಾಲವಾಗಿರುವುದರಿಂದ ಜಮೀನಿನಲ್ಲಿ ಬಿದ್ದ ಮಳೆ ನೀರು ಹೊರಗೆ ಹರಿದು ವ್ಯರ್ಥವಾಗುತ್ತದೆ. ಜಮೀನಿನ ಮೇಲ್ಮೈ ಮಣ್ಣು ಸವಕಳಿಯಾಗುತ್ತದೆ. ಆ ಕಾರಣದಿಂದ ರೈತರು ನರೇಗಾ ಯೋಜನೆಯಡಿ ತಮ್ಮ ಜಮೀನುಗಳಲ್ಲಿ ಕಂದಕ ಬದು ನಿರ್ಮಾಣ ಮಾಡಿಕೊಳ್ಳಬೇಕು. ಇದರಿಂದ ಭೂಮಿಯಲ್ಲಿ ಅಂತರ್ಜಲ ಹೆಚ್ಚಳವಾಗುತ್ತದೆ. ನರೇಗಾದಲ್ಲಿ ಕೂಲಿ ಹಣವೂ ಸಿಗಲಿದೆ ಎಂದು ತಿಳಿಸಿದರು.

ADVERTISEMENT

ರೈತರಿಗೆ ಅನುಕೂಲವಾಗುವಂತೆ ಇಲಾಖೆಯಿಂದ ಕೃಷಿ ಯಂತ್ರಧಾರೆಯಡಿ ಕೃಷಿ ಯಂತ್ರೋಪಕರಣಗಳನ್ನು ಕಡಿಮೆ ದರದಲ್ಲಿ ಬಾಡಿಗೆಗೆ ನೀಡಲಾಗುತ್ತದೆ. ಹೋಬಳಿ ವ್ಯಾಪ್ತಿಯಲ್ಲೇ ಕೃಷಿ ಯಂತ್ರಧಾರೆಯಿದ್ದು ನೋಂದಾಯಿಸಿಕೊಳ್ಳುವ ಮೂಲಕ ನಿಮಗೆ ಬೇಕಾದ ಕೃಷಿ ಯಂತ್ರಗಳನ್ನು ಪಡೆಯಬಹುದಾಗಿದೆ ಎಂದು ಹೇಳಿದರು.

ಸಾಮಾಜಿಕ ಲೆಕ್ಕ ಪರಿಶೋಧನೆಯ ತಾಲ್ಲೂಕು ಸಂಯೋಜಕಿ ಕಮಲಮ್ಮ, 2019ರಿಂದ 2021 ರವರೆಗೆ ನರೇಗಾ ಯೋಜನೆಯಡಿ ನಡೆದಿದ್ದ ಕಾಮಗಾರಿಗಳ ಕಡತದ ಲೆಕ್ಕ ಪರಿಶೋಧನೆ ನಡೆಸಿ ಸಭೆಯಲ್ಲಿ ವರದಿ ಮಂಡಿಸಿದರು. ಸಿಡಿಪಿಒ ದಿನೇಶ್‌, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಿದ್ದಮುಗಲೇಗೌಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.