ADVERTISEMENT

ಅನುದಾನ ಬಿಡುಗಡೆಗೆ ಕಮಿಷನ್: ಈಶ್ವರ ಖಂಡ್ರೆ ಆರೋಪ

ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2022, 16:20 IST
Last Updated 18 ಏಪ್ರಿಲ್ 2022, 16:20 IST
ಈಶ್ವರ ಖಂಡ್ರೆ
ಈಶ್ವರ ಖಂಡ್ರೆ   

ಯಾದಗಿರಿ: ‘ರಾಜ್ಯಕ್ಕೆ ದೇಶದಲ್ಲಿ ಒಳ್ಳೆಯ ಹೆಸರಿತ್ತು. ಐಟಿ ಕ್ಷೇತ್ರದಲ್ಲಿ ಛಾಪು ಮೂಡಿಸಿತ್ತು. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ರಾಜ್ಯವು ಭ್ರಷ್ಟಾಚಾರದಲ್ಲಿ ಹೆಸರು ಮಾಡಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆರೋಪಿಸಿದರು.

‘ಹೆಚ್ಚುವರಿ ಅನುದಾನ ತರಲು ಶೇ 10ರಷ್ಟು ಕಮಿಷನ್ ಕೊಡಬೇಕು. ಕಮಿಷನ್ ದಂಧೆ ನಡೆಸುತ್ತಿರುವ ಬಿಜೆಪಿ ಸರ್ಕಾರವು ಜನರಿಗೆ ವಂಚಿಸುತ್ತಿದೆ. ಮಠ, ಆಶ್ರಮಗಳಿಗೆ ಅನುದಾನ ಬಿಡುಗಡೆ ಮಾಡಲು ಶೇ 30ರಷ್ಟು ಕಮಿಷನ್ ಕೊಡಬೇಕಿದೆ. ಇದು ಅತ್ಯಂತ ನಾಚಿಕೆಗೇಡಿನ ವಿಚಾರ’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಟೀಕಿಸಿದರು.

‘ಬಿಜೆಪಿ ಸರ್ಕಾರವು ಸಂಪೂರ್ಣವಾಗಿ ಭ್ರಷ್ಟಾಚಾರದಲ್ಲಿ ತೊಡಗಿದ್ದು, ಸಚಿವರು ಶೇ 40ರಷ್ಟು ಕಮಿಷನ್ ಪಡೆಯುವಲ್ಲಿ ಮಗ್ನರಾಗಿದ್ದಾರೆ. ಕೆಪಿಸಿಸಿ ಸೂಚನೆ ಮೇರೆಗೆ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಪ್ರತಿಭಟನೆ ಹಾಗೂ ಜನಜಾಗೃತಿ ರ್‍ಯಾಲಿ ಏರ್ಪಡಿಸಲಾಗಿದೆ. ಸರ್ಕಾರದ ವಿರುದ್ಧ ನಿರಂತರವಾಗಿ ಪ್ರತಿಭಟನೆ ಮುಂದುವರೆಯಲಿದೆ’ ಎಂದು ಹೇಳಿದರು.

‘ಗುತ್ತಿಗೆದಾರ ಸಂತೋಷ್‌ ಪಾಟೀಲ ಆತ್ಮಹತ್ಯೆಗೆ ರಾಜ್ಯ ಸರ್ಕಾರವೇ ನೇರ ಕಾರಣವಾಗಿದೆ. ಬಿಲ್ ಪಾವತಿಗೆ ಶೇ 40ರಷ್ಟು ಕಮಿಷನ್ ಕೇಳುತ್ತಿರುವ ಬಗ್ಗೆ ಸಂತೋಷ್ ಪಾಟೀಲ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದರೂ ಯಾವುದೇ ಪ್ರಯೋಜನವಾಗಿಲ್ಲ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗಿಲ್ಲ’ ಎಂದು ಅವರು ಟೀಕಿಸಿದರು.

ಶಾಸಕ ಶರಣಬಸಪ್ಪಗೌಡ ದರ್ಶನಾಪುರ, ಡಿಸಿಸಿ ಅಧ್ಯಕ್ಷ ಮರಿಗೌಡ ಹುಲಕಲ್, ಮಾಜಿ ಎಂಎಲ್‌ಸಿಗಳಾದ ಶರಣಪ್ಪ ಮಟ್ಟೂರು, ಚೆನ್ನಾರೆಡ್ಡಿ ಪಾಟೀಲ ತುನ್ನೂರು, ಮಾಣಿಕರೆಡ್ಡಿ ಕುರಕುಂದಿ, ಮಂಜುಳಾ ಗೂಳಿ, ಚಿದಾನಂದಪ್ಪ ಕಾಳಬೆಳಗುಂದಿ, ಶರಣು ಮೋದಿ, ಶ್ರೀನಿವಾಸರೆಡ್ಡಿ ಕಂದಕೂರು ಇದ್ದರು.

ADVERTISEMENT

***

ಸಿಬಿಐ ತನಿಖೆ ನಡೆಸಿ
ಪಿಎಸ್‌ಐ ನೇಮಕಾತಿಯಲ್ಲಿ ನಡೆದಿರುವ ಅಕ್ರಮ ಬಯಲಿಗೆಳೆಯಲು ಸಿಬಿಐ ತನಿಖೆ ನಡೆಸುವಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆಗ್ರಹಿಸಿದರು.

546 ಹುದ್ದೆಗಳಲ್ಲಿ, 107 ಹುದ್ದೆಗಳನ್ನು ಕಲ್ಯಾಣ ಕರ್ನಾಟಕ ಭಾಗಕ್ಕೆ ಹಾಗೂ ಉಳಿದ 438 ಹುದ್ದೆಗಳನ್ನು ಇತರೆ ವೃಂದಕ್ಕೆ ಮೀಸಲಿಡಲಾಗಿತ್ತು. 56,000 ಉದ್ಯೋಗಾಕಾಂಕ್ಷಿಗಳು ದೈಹಿಕ ಹಾಗೂ ಲಿಖಿತ ಪರೀಕ್ಷೆ ಬರೆದಿದ್ದರು. ಪರೀಕ್ಷೆಯಲ್ಲಿ ನಡೆದಿರುವ ಅಕ್ರಮ ಕುರಿತು ಕಾಂಗ್ರೆಸ್ ಪಕ್ಷ ಸರ್ಕಾರದ ಗಮನಕ್ಕೆ‌ ತಂದಾಗ ನೇಮಕಾತಿ ಪ್ರಕ್ರಿಯೆ ತಡೆ ಹಿಡಿಯಲಾಗಿದೆ ಎಂದು ಒತ್ತಾಯಿಸಿದರು.

ಪಿಎಸ್‌ಐ ನೇಮಕಾತಿ‌ಯಲ್ಲಿ ಕೋಟಿಗಟ್ಟಲೇ ಅಕ್ರಮ ವ್ಯವಹಾರ ನಡೆದಿದೆ. ರಾಜ್ಯ ಸರ್ಕಾರ ಪ್ರಕರಣವನ್ನು ಸಿಐಡಿಗೆ ವಹಿಸಿದೆ. ಆದರೆ, ಪ್ರಮುಖರನ್ನು ಬಚಾವ್ ಮಾಡಿ ಸಣ್ಣವರನ್ನು ಬಂಧನ ಮಾಡಲಾಗುತ್ತಿದೆ. ಹೀಗಾಗಿ, ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.