ADVERTISEMENT

ಯಾದಗಿರಿ: ಸಾರ್ವಜನಿಕ ಬಳಕೆಗೆ ಮೀಸಲಿಟ್ಟ ನಿವೇಶನಗಳು ವಿವಿಧ ಸಮುದಾಯಗಳಿಗೆ ಹಂಚಿಕೆ

ಟಿ.ನಾಗೇಂದ್ರ
Published 13 ಸೆಪ್ಟೆಂಬರ್ 2025, 5:18 IST
Last Updated 13 ಸೆಪ್ಟೆಂಬರ್ 2025, 5:18 IST
ಶಹಾಪುರ ನಗರದ ರಾಕಂಗೇರಾ ಬಡಾವಣೆಯಲ್ಲಿ ₹ 1.50 ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗುತ್ತಿರುವ ಮಹರ್ಷಿ ವಾಲ್ಮೀಕಿ ಭವನ
ಶಹಾಪುರ ನಗರದ ರಾಕಂಗೇರಾ ಬಡಾವಣೆಯಲ್ಲಿ ₹ 1.50 ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗುತ್ತಿರುವ ಮಹರ್ಷಿ ವಾಲ್ಮೀಕಿ ಭವನ   

ಶಹಾಪುರ: ನಗರಸಭೆಯ ವ್ಯಾಪ್ತಿಯಲ್ಲಿ ವಿವಿಧ ಸರ್ವೆ ನಂಬರ್‌ಗಳಲ್ಲಿ ಸಾರ್ವಜನಿಕ ಉದ್ದೇಶಕ್ಕಾಗಿ ಮೀಸಲಿಟ್ಟ ನಿವೇಶನಗಳನ್ನು ವಿವಿಧ ಸಮುದಾಯಗಳಿಗೆ ಹಂಚಿಕೆ ಮಾಡಿದೆ. ಈಗಾಗಲೇ ವಾಲ್ಮೀಕಿ ಭವನ ಕಟ್ಟಡ ಕಾಮಗಾರಿ ಮುಕ್ತಾಯದ ಹಂತಕ್ಕೆ ಬಂದಿದ್ದು, ಉಳಿದ ಭವನಗಳ ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ.

ನಗರದ ವೀರಶೈವ ಸಮಾಜದ ಭವನ ನಿರ್ಮಾಣಕ್ಕೆ ₹ 2 ಕೋಟಿ, ಕುರುಬ ಸಮಾಜ ಭವನ ನಿರ್ಮಾಣ, ಸಿಂಪಿ ಸಮಾಜ ಅಭಿವೃದ್ಧಿ ಟ್ರಸ್ಟ್‌ಗೆ ₹ 50 ಲಕ್ಷ, ಅಂಜನಾ (ಪಟೇಲ) ಸೇವಾ ಸಂಘಕ್ಕೆ ಹಾಗೂ ಅಂಬಾಭವಾನಿ ದೇವಸ್ಥಾನ ಟ್ರಸ್ಟ್‌ಗೆ ತಲಾ  ₹ 25 ಲಕ್ಷ, ಅಲ್ಪಸಂಖ್ಯಾತರ ಭವನ ನಿರ್ಮಾಣಕ್ಕೆ ₹ 2 ಕೋಟಿ ಅನುದಾನ ಒದಗಿಸಿದೆ. ಅಲ್ಲದೆ, ಅಂಬಿಗರ ಚೌಡಯ್ಯ ಭವನ ನಿರ್ಮಾಣಕ್ಕೆ 2 ಎಕರೆ ಜಮೀನು, ಸೇವಾಲಾಲ್ (ಬಂಜಾರ) ಹಾಗೂ ಕ್ರೈಸ್ತ ಸಮುದಾಯಕ್ಕೆ ತಲಾ 1 ಎಕರೆ ಜಮೀನು ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಮಾಹಿತಿ ನೀಡಿದರು.

ಕನ್ನಡ ಸಾಹಿತ್ಯ ಪರಿಷತ್ ಭವನ, ಗೃಹ ರಕ್ಷಕದಳ, ಹೂಗಾರ ಸಮಾಜ, ಈಡಿಗ ಸಮಾಜ, ಸಗರನಾಡು ಶಿಕ್ಷಣ ಸಂಸ್ಥೆ, ಭಗತಸಿಂಗ್ ಸಂಸ್ಥೆ, ಸ್ಪಂದನಾ ಚಾರಿಟೆಬಲ್ ಟ್ರಸ್ಟ್ ಸೇರಿದಂತೆ ಅತಿ ಹಿಂದುಳಿದ ಹಾಗೂ ಸಣ್ಣ ಸಮುದಾಯಕ್ಕೂ ಆದ್ಯತೆ ನೀಡಲಾಗಿದೆ. ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ADVERTISEMENT

ಸಾರ್ವಜನಿಕ ಉಪಯೋಗಕ್ಕಾಗಿ ಮೀಸಲಿಟ್ಟ ನಿವೇಶನಗಳನ್ನು ಸರಿಯಾದ ನಿರ್ವಹಣೆ ಇಲ್ಲದೆ ಅಕ್ಕಪಕ್ಕದವರು ಆ ಜಾಗವನ್ನು ಒತ್ತುವರಿ ಮಾಡಿಕೊಂಡು ಸ್ವಂತ ಬಳಕೆಗೆ ಉಪಯೋಗಿಸುವುದನ್ನು ಮನಗಂಡು ಸಮುದಾಯಗಳಿಗೆ ಹಂಚಿಕೆ ಮಾಡಿದರೆ ಅನುಕೂಲವಾಗುತ್ತದೆ. ಈ ಉದ್ದೇಶದಿಂದ ಕಾನೂನು ನಿಯಮದ ಪ್ರಕಾರ ಜಿಲ್ಲಾಧಿಕಾರಿಯ ಪರವಾನಿಗೆ ಪಡೆದುಕೊಂಡು ನಿವೇಶಗಳನ್ನು ಹಂಚಿಕೆ ಮಾಡಲಾಗಿದೆ ಎನ್ನುತ್ತಾರೆ ನಗರಸಭೆಯ ಅಧಿಕಾರಿ ಒಬ್ಬರು.

ನಮ್ಮ ಕ್ಷೇತ್ರ ಸರ್ವಜನಾಂಗದ ಶಾಂತಿ ತೋಟವಾಗಿದೆ. ಎಲ್ಲಾ ಸಮುದಾಯಗಳಿಗೆ ಸಮಾನ ಹಂಚಿಕೆಯನ್ನು ಅನುದಾನ ಮಾಡಿದ್ದೇನೆ. ಜನಪರ ಕೆಲಸಗಳನ್ನು ಜನತೆ ಸದ್ಬಳಕೆ ಮಾಡಿಕೊಳ್ಳಬೇಕು.
- ಶರಣಬಸಪ್ಪ ದರ್ಶನಾಪುರ, ಜಿಲ್ಲಾ ಉಸ್ತುವಾರಿ ಸಚಿವ
‘ಸಮುದಾಯ ಭವನ ಟ್ರಸ್ಟಿಗೆ ನೀಡಬಾರದು’
ಆಯಾ ಸಮುದಾಯದ ಪಾಲಿಗೆ ಪವಿತ್ರ ಸ್ಥಳದಂತೆ ಭಾವಿಸಿ ಸಮುದಾಯ ಭವನವನ್ನು ಎಂದಿಗೂ ಟ್ರಸ್ಟ್ ವ್ಯಾಪ್ತಿಗೆ ನೀಡಬಾರದು. ಇದರಿಂದ ಕೆಲ ವ್ಯಕ್ತಿಗಳ ಸ್ವತ್ತು ಆಗುತ್ತದೆ. ಸಮುದಾಯ ಭವನದಿಂದ ಬಡ ಜನತೆಗೆ ಮತ್ತು ಧಾರ್ಮಿಕ ಸಭೆ ಸಮಾರಂಭ ನಡೆಸಲು ಅನುಕೂಲ ಆಗಬೇಕು. ಸಮುದಾಯ ನಿರ್ಮಾಣಗೊಳ್ಳುವುದರಿಂದ ಗರ್ವದ ಪ್ರತೀಕವಾಗಿ ನಮ್ಮದು ಎಂಬ ಭಾವನೆ ಬರುತ್ತದೆ. ಅದರ ನಿರ್ವಹಣೆ ಮಾಡುವುದು ದೊಡ್ಡ ಸವಾಲಿನ ಕೆಲಸ’ ಎನ್ನುತ್ತಾರೆ ಮುಸ್ಲಿಂ ಸಮದಾಯದ ಮುಖಂಡ ಯೂಸೂಫ್ ಸಿದ್ದಿಕಿ.
‘ಸಭೆ ನಡೆಸಲು ಬಳಕೆಯಾಗಲಿ’
‘ನಗರದ ಪ್ರದೇಶದಲ್ಲಿ ದುಬಾರಿ ಬಾಡಿಗೆ ನೀಡಿ ಸಮುದಾಯದ ಸಭೆ ಮದುವೆ ಹಾಗೂ ಇನ್ನಿತರ ಕಾರ್ಯಕ್ರಮ ನಡೆಸಲು ತೊಂದರೆ ಆಗುತ್ತದೆ. ಸಮುದಾಯ ಭವನದ ನಿರ್ಮಾಣದಿಂದ ಅಂತಹ ತಾಪತ್ರೆ ತಪ್ಪುತ್ತದೆ. ನಮ್ಮದು ಎಂಬ ಭಾವನೆಯಿಂದ ಆಯಾ ಸಮದಾಯದವರು ಒಗ್ಗೂಡಲಿಕ್ಕೆ ಉತ್ತಮ ವೇದಿಕೆಯೂ ಆಗುತ್ತದೆ. ನಿರ್ವಹಣೆಯು ಸಜ್ಜನರ ಕೈಯಲ್ಲಿ ಇದ್ದರೆ ಉತ್ತಮವಾಗಿ ಬೆಳೆವಣಿಗೆ ಆಗುತ್ತದೆ. ಅದನ್ನು ವ್ಯಾಪಾರ ಮನೋಭಾವದಿಂದ ನೋಡಬಾರದು’ ಎನ್ನುತ್ತಾರೆ ತಾಲ್ಲೂಕು ವಾಲ್ಮೀಕಿ ಸಂಘದ ಅಧ್ಯಕ್ಷ ಮರೆಪ್ಪ ಪ್ಯಾಟಿ ಶಿರವಾಳ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.