ADVERTISEMENT

ವೈದ್ಯಕೀಯ ಕಾಲೇಜಿಗಾಗಿ ನಿರಂತರ ಹೋರಾಟ

ಮುಖ್ಯಮಂತ್ರಿ ಹೇಳಿಕೆ ವಿರುದ್ಧ ಶಾಸಕ ವೆಂಕಟರೆಡ್ಡಿ ಮುದ್ನಾಳ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 24 ಜೂನ್ 2019, 16:22 IST
Last Updated 24 ಜೂನ್ 2019, 16:22 IST
ವೆಂಕಟರೆಡ್ಡಿ ಮುದ್ನಾಳ
ವೆಂಕಟರೆಡ್ಡಿ ಮುದ್ನಾಳ   

ಯಾದಗಿರಿ: ‘ಜಿಲ್ಲೆಗೆ ಮುಖ್ಯಮಂತ್ರಿ ಕುಮಾಸ್ವಾಮಿಯವರು ಅವಮಾನಿಸಿದ್ದಾರೆ. ವೈದ್ಯಕೀಯ ಕಾಲೇಜು ಜಿಲ್ಲೆಗೆ ಅವಶ್ಯವಿಲ್ಲ ಎನ್ನುವ ಧಾಟಿಯಲ್ಲಿ ಸಿಎಂ ಹೇಳಿದ್ದು ಸರಿಯಲ್ಲ. ವೈದ್ಯಕೀಯ ಕಾಲೇಜಿಗಾಗಿ ಹೋರಾಟ ಮಾಡಲಾಗುವುದು’ ಎಂದು ಶಾಸಕ ವೆಂಕಟರೆಡ್ಡಿ ಮುದ್ನಾಳ ತಿಳಿಸಿದರು.

‌ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವೈದ್ಯಕೀಯ ಕಾಲೇಜಿಗಾಗಿ ₹600 ಕೋಟಿ ವೆಚ್ಚ ಮಾಡುವ ಬದಲು 300 ಹಾಸಿಗೆ ಸುಸಜ್ಜಿತ ಆಸ್ಪತ್ರೆ ನೀಡಲಾಗುವುದು ಎಂದು ಹೇಳಿದ್ದು ಸರಿಯಲ್ಲ. ಕಾಲೇಜಿಗಾಗಿ ಜಿಲ್ಲೆಯ ಸುರಪುರ ಶಾಸಕ ಸೇರಿ ಇನ್ನಿತರ ಶಾಸಕರ ನಿಯೋಗ ಮುಖ್ಯಮಂತ್ರಿ ಬಳಿ ಕರೆದೊಯ್ಯಲಾಗುವುದು ಎಂದು ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಜಿಲ್ಲೆಗೆ ವೈದ್ಯಕೀಯ ಕಾಲೇಜು ನೀಡುವುದರಿಂದ ಸ್ಥಳೀಯರಿಗೆ ಉಪಯೋಗವಾಗುವುದಿಲ್ಲ ಎಂಬ ಹೇಳಿಕೆ ಹಾಸ್ಯಾಸ್ಪದ. ವೈದ್ಯಕೀಯ ಕಾಲೇಜು ಬರುವುದರಿಂದ ಈ ಭಾಗದ ವಿದ್ಯಾರ್ಥಿಗಳಿಗೆ ಉಪಯೋಗವಾಗಲಿದೆ. ಹೈದರಾಬಾದ ಕರ್ನಾಟಕ 371 (ಜೆ) ಅನ್ವಯ ಇಲ್ಲಿಯ ವಿದ್ಯಾರ್ಥಿಗಳಿಗೆ ಆದ್ಯತೆ ಸಿಗಲಿದೆ. ಇದರಿಂದ ರಾಯಚೂರು, ಕಲಬುರ್ಗಿ ಇನ್ನಿತರ ಜಿಲ್ಲೆಗಳಿಗೆ ತೆರಳುವುದು ತಪ್ಪಲಿದೆ’ ಎಂದು ಅವರು ತಿಳಿಸಿದರು.

ADVERTISEMENT

‘ಹಿಂದಿನ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ವೈದ್ಯಕೀಯ ಕಾಲೇಜು ಘೋಷಿಸಲಾಗಿತ್ತು. ಆದರೆ, ಅದನ್ನು ಅನುಷ್ಠಾನಕ್ಕೆ ತರುವಲ್ಲಿ ಕಾಳಜಿ ತೋರದ ಕಾರಣ ಈವರೆಗೆ ನೆನೆಗುದಿಗೆ ಬಿದ್ದಿದೆ. ಹೀಗಾಗಿ ಅದನ್ನು ಜಾರಿಗೆ ತರಲು ಬೆಳಗಾವಿ ಅಧಿವೇಶನದಲ್ಲಿ ಈ ಬಗ್ಗೆ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿದರೂ ಪ್ರಯೋಜನವಾಗಲಿಲ್ಲ. ಈಗ ಆರ್ಥಿಕ ಕೊರತೆ ಇದೆ. ಮುಂದಿನ ಬಾರಿ ನೋಡೋಣ ಎಂದಿದ್ದರೆ ಒಪ್ಪಿಕೊಳ್ಳಬಹುದಿತ್ತು. ಆದರೆ, ಈ ಭಾಗದವರಿಗೆ ಉಪಯುಕ್ತ ಇಲ್ಲ ಎನ್ನುವುದು ಸರಿಯಲ್ಲ. ಕಾಲೇಜು ಪ್ರಾರಂಭಕ್ಕೆ ಶೀಘ್ರ ಹಣ ಮಂಜೂರು ಮಾಡಬೇಕು’ ಎಂದು ಒತ್ತಾಯಿಸಿದರು.

‘ಯಾದಗಿರಿಯಲ್ಲಿ ಬಿಜೆಪಿ ಶಾಸಕರು ಇರುವುದರಿಂದ ವೈದ್ಯಕೀಯ ಕಾಲೇಜು ತಪ್ಪಿಸಲು ರಾಜಕೀಯ ಪಿತೂರಿ ನಡೆದಿದೆ. ಮುಖ್ಯಮಂತ್ರಿಗೆ ಉದ್ದೇಶಪೂರ್ವಕವಾಗಿ ತಪ್ಪು ಮಾರ್ಗದರ್ಶನ ನೀಡಲಾಗುತ್ತಿದೆ. ಕಾಲೇಜಿಗೆ ಅನುದಾನ ನೀಡುವ ಬಗ್ಗೆ ತಪ್ಪು ಮಾರ್ಗದರ್ಶನ ಮಾಡಿದ್ದಾರೆ. ಹೀಗಾಗಿ ಇದನ್ನು ಸರಿಪಡಿಸಬೇಕು’ ಎಂದರು.

ಶರಣಗೌಡ ಬಾಡಿಯಾಳ, ಚನ್ನರೆಡ್ಡಿಗೌಡ ಬಿಳ್ಹಾರ, ಖಂಡಪ್ಪ ದಾಸನ್, ವೆಂಕಟರೆಡ್ಡಿ ಅಬ್ಬೆತುಮಕೂರ, ಹಣಮಂತ ಇಟಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.