ADVERTISEMENT

ಯಾದಗಿರಿ ನಗರ ಠಾಣೆ 10 ಅಡಿ ಎತ್ತರದಲ್ಲಿ ನಿರ್ಮಾಣ

ಆಗಿನ ಕಾಲದಲ್ಲಿಯೇ ಕಟ್ಟಡಕ್ಕೆ ಆವರಣ ಗೋಡೆ ನಿರ್ಮಾಣ, ಸೇದು ಬಾವಿ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2021, 7:05 IST
Last Updated 7 ಅಕ್ಟೋಬರ್ 2021, 7:05 IST
ಯಾದಗಿರಿ ನಗರ ಪೊಲೀಸ್‌ ಠಾಣೆಯಲ್ಲಿರುವ ’ಜನಸ್ನೇಹಿ’ ಪೊಲೀಸ್‌ ವ್ಯವಸ್ಥೆ
ಯಾದಗಿರಿ ನಗರ ಪೊಲೀಸ್‌ ಠಾಣೆಯಲ್ಲಿರುವ ’ಜನಸ್ನೇಹಿ’ ಪೊಲೀಸ್‌ ವ್ಯವಸ್ಥೆ   

ಯಾದಗಿರಿ: ನಗರದ ಹೃದಯ ಭಾಗದಲ್ಲಿ ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾಗಿರುವ ಈಗಿನ ನಗರ ಪೊಲೀಸ್‌ ಠಾಣೆಯನ್ನು ಭೂಮಿಯಿಂದ 10 ಅಡಿ ಎತ್ತರದಲ್ಲಿ ನಿರ್ಮಿಸಲಾಗಿದೆ.

ಪ್ರವೇಶ ದ್ವಾರದಲ್ಲಿ 7 ಮೆಟ್ಟಿಲು ಇದ್ದರೆ, ಕಟ್ಟಡದೊಳಗೆ ಪ್ರವೇಶಿಸಲು 4 ಮೆಟ್ಟಿಲುಗಳಿವೆ. ಅಷ್ಟು ಎತ್ತರದಲ್ಲಿ ಕಟ್ಟಡ ನಿರ್ಮಾಣಕ್ಕೂ ಕಾರಣಗಳಿವೆ.

ಈ ಬಗ್ಗೆ ಸಂಶೋಧಕ ಡಾ.ಭೀಮರಾಯ ಲಿಂಗೇರಿ ಅವರು ವಿವರ ನೀಡಿದ್ದಾರೆ. ‘ಬ್ರಿಟಿಷರ ಕಾಲದಲ್ಲಿ ತೆರಿಗೆ ಸಂಗ್ರಹ ಕಚೇರಿಯಾಗಿದ್ದ ಕಟ್ಟಡವನ್ನು ಯೋಜನೆ ರೂಪಿಸಿ ಕಟ್ಟಲಾಗಿದೆ. ನಂತರ ನಿಜಾಮ ಶಾಹಿ ಆಡಳಿತದಲ್ಲಿ ಪೊಲೀಸ್‌ ಠಾಣೆಯಾಗಿ ರೂಪುಗೊಂಡಿದೆ. ಪೊಲೀಸ್‌ ಠಾಣೆ ಪಕ್ಕದಲ್ಲಿ ಆಗ ಯಾವ ಕಟ್ಟಡಗಳೂ ಇರಲಿಲ್ಲ. ಅಕ್ಕಪಕ್ಕದಲ್ಲಿ ಯಾವುದೇ ಘಟನೆಗಳಾದರೂ ಎತ್ತರದಲ್ಲಿ ಕಟ್ಟಡ ಇರುವುದರಿಂದ ಅಧಿಕಾರಿ ವರ್ಗಕ್ಕೆ ತಕ್ಷಣಕ್ಕೆ ಮಾಹಿತಿ ತಿಳಿದು ಬರುತ್ತಿತ್ತು. ಇಂಥ ಐತಿಹಾಸಿಕ ಹಿನ್ನೆಲೆಯನ್ನು ಕಟ್ಟಡ ಹೊಂದಿದೆ’ ಎನ್ನುತ್ತಾರೆ ಅವರು.

ADVERTISEMENT

‘ನಗರ ಬೆಳವಣಿಗೆಯಾದಂತೆ ಪೊಲೀಸರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಹಾಗಂತ ಪಾರಂಪರಿಕ ಕಟ್ಟಡವವನ್ನು ನೆಲಸಮಗೊಳಿಸುವುದು ಎಷ್ಟು ಸರಿ. ನಗರ ಹೊರವಲಯದ ಭೀಮಾ ನದಿಗೆ ಕಟ್ಟಿರುವ ಸೇತುವೆಯೂ ಬ್ರೀಟಿಷರ ಕಾಲದಲ್ಲಿ ನಿರ್ಮಾಣ ಮಾಡಲಾಗಿದೆ. ಹೀಗಾಗಿ ಇಂಥ ಕಟ್ಟಡಗಳಿಗೆ ಯಾವುದೇ ಧಕ್ಕೆ ಬಾರದಂತೆ ನೋಡಿಕೊಳ್ಳಬೇಕು’ ಎಂದು ಆಗ್ರಹಿಸುತ್ತಾರೆ ಅವರು.

‘ಆಗಿನ ಕಾಲದಲ್ಲಿಯೇ ಆವರಣ ಗೋಡೆ ನಿರ್ಮಿಸಲಾಗಿದೆ. ಕುಡಿಯುವ ನೀರಿಗಾಗಿ ಸೇದುಬಾವಿಯನ್ನು ತೋಡಲಾಗಿದೆ. ಕಟ್ಟಡ ಆದ ನಂತರ ಮಹಾತ್ಮ ಗಾಂಧಿ ವೃತ್ತವಾಗಿದೆ. ಪಂಪ ಮಹಾಕವಿ ಮಂಟಪದಲ್ಲಿಯೇ ಅನೇಕ ಸಭೆ–ಸಮಾರಂಭಗಳು ನಡೆದಿವೆ. ಇಷ್ಟೊಂದು ಮಹತ್ವದ ಸ್ಥಾನವನ್ನು ಈ ಕಟ್ಟಡ ಒಳಗೊಂಡಿದೆ’ ಎಂದರು.

‘ನಗರಸಭೆ ವ್ಯಾಪ್ತಿಯಲ್ಲಿ ನಗರ ಪೊಲೀಸ್‌ ಠಾಣೆ ನೂತನ ಕಟ್ಟಡಕ್ಕಾಗಿ ಮಂಗಳವಾರ ಡಿವೈಎಸ್‌ಪಿ ಅವರು ಜಾಗದ ಪರಿಶೀಲನೆ ಮಾಡಿದ್ದಾರೆ. ಕೆಲ ಕಡೆ ಸಣ್ಣ ಅಳತೆ ಜಾಗವಿದೆ. ಹೀಗಾಗಿ ಅಳತೆಗೆ ಸರಿಹೊಂದುವ ಖಾಲಿ ಜಾಗದ ಎಲ್ಲ ದಾಖಲೆಗಳನ್ನು ಪರಿಶೀಲಿಸಿ ಪೊಲೀಸರಿಗೆ ನೀಡುತ್ತೇವೆ’ ಎಂದು ಯಾದಗಿರಿ ನಗರಸಭೆ ಪೌರಾಯುಕ್ತ ಭೀಮಣ್ಣ ಟಿ ನಾಯಕ ತಿಳಿಸಿದ್ದಾರೆ.

***

ಈ ಹಿಂದೆ ಯಾದಗಿರಿ ನಗರದ ಗುಡ್ಡದ ಸುತ್ತಮುತ್ತ ಮಾತ್ರ ಮನೆಗಳು ಇದ್ದವು. ಹಳೆ ನಗರದಲ್ಲಿ ಆಯಾ ಕುಲಕ್ಕೆ ತಕ್ಕಂತೆ ಜನರು ವಾಸ ಮಾಡುತ್ತಿದ್ದರು. ನಗರ ಪೊಲೀಸ್‌ ಠಾಣೆ ಐತಿಹಾಸಿಕ ಕಟ್ಟಡ ಉಳಿಸಿಕೊಳ್ಳಬೇಕು. ನೆಲಸಮ ಮಾಡುವುದಕ್ಕೆ ನಮ್ಮ ವಿರೋಧವಿದೆ.
-ಡಾ.ಭೀಮರಾಯ ಲಿಂಗೇರಿ, ಸಂಶೋಧಕ

***

ನಗರ ಪೊಲೀಸ್‌ ಠಾಣೆಗಾಗಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯವರು 25X25 ಮೀಟರ್‌ ಜಾಗವನ್ನು ಗುರುತಿಸಲು ಸೂಚಿಸಿದ್ದಾರೆ. ಈಗಾಗಲೇ 2–3 ಸಿಎ ಖಾಲಿ ಜಾಗವನ್ನು ಹುಡುಕಾಟ ನಡೆಸುತ್ತಿದ್ದೇವೆ. ಜಾಗದ ಎಲ್ಲ ದಾಖಲೆ ಪರಿಶೀಲಿಸಲಾಗುತ್ತಿದೆ.
-ಭೀಮಣ್ಣ ಟಿ ನಾಯಕ, ಯಾದಗಿರಿ ನಗರಸಭೆ ಪೌರಾಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.