ADVERTISEMENT

ಕೃಷಿ ಕಾಯ್ದೆಗಳಿಂದ ರೈತರಿಗೆ ಅನುಕೂಲ: ಡಾ.ಶರಣಭೂಪಾಲರೆಡ್ಡಿ

ಬಿಜೆಪಿಯಿಂದ ರೈತಪರ ಕಾಯ್ದೆ ಜಾರಿ:ನಾಯ್ಕಲ್

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2020, 3:52 IST
Last Updated 23 ಸೆಪ್ಟೆಂಬರ್ 2020, 3:52 IST
ಡಾ.ಶರಣಭೂಪಾಲರಡ್ಡಿ ನಾಯ್ಕಲ್
ಡಾ.ಶರಣಭೂಪಾಲರಡ್ಡಿ ನಾಯ್ಕಲ್   

ಯಾದಗಿರಿ: ಕೇಂದ್ರ ಬಿಜೆಪಿ ಸರ್ಕಾರ ರೈತರ ಪರವಾದ ಕಾಯ್ದೆಗಳನ್ನು ಜಾರಿಗೆ ತರುವ ಮೂಲಕ ರೈತರ ಹಿತ ಕಾಪಾಡುತ್ತಿದೆ. ಆದರೆ, ವಿರೋಧ ಪಕ್ಷಗಳಿಗೆ ವಿರೋಧಿಸುವುದೇ ಕೆಲಸವಾಗಿದೆ ಎಂದುಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಶರಣಭೂಪಾಲರೆಡ್ಡಿ ಹೇಳಿದರು.

ಕೃಷಿ ಮತ್ತು ಕೃಷಿ ಕ್ಷೇತ್ರದ ಸುಧಾರಣೆಗೆ ಸಂಬಂಧಿಸಿದಂತೆ ಎರಡು ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿ ಅನುಮೋದನೆ ಪಡೆದುಕೊಂಡಿದೆ. ಗುರುವಾರ ಲೋಕಸಭೆಯಲ್ಲಿ ಮತ್ತು ಭಾನುವಾರ ರಾಜ್ಯಸಭೆಯಲ್ಲಿ ರೈತರ ಕುರಿತಾದ ಎರಡು ಮಸೂದೆಗಳಿಗೆ ಅನುಮೋದನೆ ದೊರೆತಿದೆ. ಈ ಕಾಯ್ದೆಗಳಲ್ಲಿ ರೈತರಿಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಕೇಂದ್ರ ಕೃಷಿ ಸಚಿ ನರೇಂದ್ರ ಸಿಂಗ್‌ ತೋಮರ್‌ ತಿಳಿಸಿದ್ದಾರೆ. ಆದರೆ, ರೈತರಿಗೆ ಅನುಕೂಲವಾಗುವುದನ್ನು ಪ್ರತಿಪಕ್ಷಗಳು ಟೀಕಿಸುತ್ತವೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ರೈತರು ಕೃಷಿ ಉತ್ಪನ್ನ ಮಾರಾಟ ಹಾಗೂ ಖರೀದಿಗೆ ಈ ಮೊದಲು ಬೇರೆ ರಾಜ್ಯಕ್ಕೆ ತೆರಳಲು ಸಂಕಷ್ಟ ಅನುಭವಿಸುತ್ತಿದ್ದರು. ಈಗ ಇದು ನಿವಾರಣೆ ಆಗಲಿದೆ ಎಂದರು.

ADVERTISEMENT

ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ ಕಾಯ್ದೆ,ರೈತರ (ಕಲ್ಯಾಣ ಮತ್ತು ರಕ್ಷಣೆ) ಬೆಲೆ ಭರವಸೆ ಮತ್ತು ಸೇವಾ ಒಪ್ಪಂದ ಮಸೂದೆಯಿಂದದೇಶದ ಕೃಷಿ ವಲಯದಲ್ಲಿ ಕ್ರಾಂತಿ ತರಲಿವೆ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ತಿಳಿಸಿದ್ದಾರೆ. ಜೊತೆಗೆ ಕನಿಷ್ಠ ಬೆಂಬಲ ದರ ವ್ಯವಸ್ಥೆಯು ಮುಂದೆಯೂ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ರೈತರು ಆತಂಕ ಪಡುವ ಅವಶ್ಯವಿಲ್ಲ ಎಂದು ತಿಳಿಸಿದರು.

ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ದೇವೇಂದ್ರನಾಥ್ ನಾದ್‌, ರೈತ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಶೇಖರ್ ದೊರೆ, ಜಿಲ್ಲಾ ರೈತಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಶಂಕರ್ ಕರಣಿಗಿ, ಶರಣಗೌಡ ಪಾಟೀಲ ಮದರಕಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.