ADVERTISEMENT

ಯಾದಗಿರಿ| ಮಳೆ, ಪ್ರವಾಹದಿಂದ ಬೆಳೆ ಹಾನಿ: ಅಧ್ಯಯನಕ್ಕೆ ಕೇಂದ್ರ ತಂಡ ಭೇಟಿ

​ಪ್ರಜಾವಾಣಿ ವಾರ್ತೆ
Published 14 ಜನವರಿ 2026, 6:08 IST
Last Updated 14 ಜನವರಿ 2026, 6:08 IST
ಯಾದಗಿರಿಗೆ ಮಂಗಳವಾರ ಅತಿವೃಷ್ಟಿ ಹಾಗೂ ಮೂಲಸೌಕರ್ಯ ಹಾನಿಯ ಸಮೀಕ್ಷೆಗಾಗಿ ಭೇಟಿ ನೀಡಿದ ದೆಹಲಿಯ ತಂಡದೊಂದಿಗೆ ಜಿಲ್ಲಾ ಅಧಿಕಾರಿಗಳು ಜಮೀನಿನತ್ತ ಸಾಗಿದರು 
ಯಾದಗಿರಿಗೆ ಮಂಗಳವಾರ ಅತಿವೃಷ್ಟಿ ಹಾಗೂ ಮೂಲಸೌಕರ್ಯ ಹಾನಿಯ ಸಮೀಕ್ಷೆಗಾಗಿ ಭೇಟಿ ನೀಡಿದ ದೆಹಲಿಯ ತಂಡದೊಂದಿಗೆ ಜಿಲ್ಲಾ ಅಧಿಕಾರಿಗಳು ಜಮೀನಿನತ್ತ ಸಾಗಿದರು    

ಯಾದಗಿರಿ: ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಸುರಿದ ವ್ಯಾಪಕ ಮಳೆ, ಭೀಮಾ ನದಿ ಪ್ರವಾಹದಿಂದ ಹಾಳಾದ ಬೆಳೆಗಳ ಹಾಗೂ ಮೂಲಸೌಕರ್ಯ ಹಾನಿಯ ಸರ್ವೇಕ್ಷಣೆಗಾಗಿ ಮಂಗಳವಾರ ಜಿಲ್ಲೆಗೆ ಭೇಟಿ ನೀಡಿದ ಕೇಂದ್ರದ ಅಧ್ಯಯನ ತಂಡವು ತರಾತುರಿಯಲ್ಲಿ ಸಮೀಕ್ಷೆ ನಡೆಸಿ ತೆರಳಿತು.

ಕೇಂದ್ರ ಸರ್ಕಾರದ ಹಣಕಾಸು ಸಚಿವಾಲಯದ ವೆಚ್ಚ ಇಲಾಖೆ ಜಂಟಿ ನಿರ್ದೇಶಕ ಮಹೇಶ್ ಕುಮಾರ್ ನೇತೃತ್ವದ ತಂಡ ಸಮೀಕ್ಷೆ ನಡೆಸಿತು. ತಂಡದಲ್ಲಿ ರಾಜ್ಯ ಪ್ರಕೃತಿ ವಿಕೋಪದ ನಿರ್ವಹಣಾ ಪ್ರಾಧಿಕಾರದ ಆಯುಕ್ತ ಹೊಣ್ಣಂಬ. ಎಸ್ ಹಾಗೂ ಇಸ್ರೋ ವಿಜ್ಞಾನಿ ಆಕಾಶ ಮೋಹನ್ ಉಪಸ್ಥಿತರಿದ್ದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಹಾನಿಯ ಸಂಬಂಧ ಮಾಹಿತಿಯನ್ನು ಪಡೆದು ನಗರ ಸಮೀಪದಲ್ಲಿನ ಗ್ರಾಮಗಳ ಜಮೀನಿಗೆ ಭೇಟಿ ನೀಡಿತು. ನಾಯ್ಕಲ್ ಗ್ರಾಮದ ರಸ್ತೆ ಬದಿಯಲ್ಲಿ ಅಳವಡಿಸಿದ್ದ ಪ್ರವಾಹ ಹಾಗೂ ಬೆಳೆ ಹಾನಿ ಸಂಬಂಧಿತ ಫೋಟೊಗಳನ್ನು ವೀಕ್ಷಿಸಿತು. ಅಧಿಕಾರಿಗಳು ಅವುಗಳ ಬಗ್ಗೆ ವಿವರಣೆ ನೀಡಿದರು.

ADVERTISEMENT

ಬಳಿಕ ದೂಳು ಮಯವಾದ ರಸ್ತೆಯಲ್ಲಿ ಸಾಗಿ ಭೀಮಾ ನದಿ ತೀರಕ್ಕೆ ಭೇಟಿ ನೀಡಿದರು. ನದಿ ತೀರದ ದೂರದಲ್ಲಿ ಆಂಧ್ರ ಮೂಲದವರ ಅಧೀನದ ಗದ್ದೆಗಳಲ್ಲಿ ಹೊಸದಾಗಿ ಅಳವಡಿಸಿದ್ದ ವಿದ್ಯುತ್ ಪರಿವರ್ತಕಗಳನ್ನು (ಟಿಸಿ) ಪರಿಶೀಲನೆ ನಡೆಸಿದರು. ಪ್ರವಾಹಕ್ಕೆ ಸಿಲುಕಿ ಹಾಳಾದ ಟಿಸಿ, ವಿದ್ಯುತ್ ವೈರ್, ಹೊಸ ಟಿಸಿಗಳನ್ನು ದೂರದ ಎತ್ತರದ ಪ್ರದೇಶದಲ್ಲಿ ಅಳವಡಿಕೆ ಮಾಡಿರುವ ಬಗ್ಗೆ ಜೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದರು.

ಆ ನಂತರ ಹಾಲಗೇರಾ ಗ್ರಾಮದಲ್ಲಿ ಅತಿವೃಷ್ಟಿಯಿಂದ ಹಾನಿಯಾದ ಹತ್ತಿ ಬೆಳೆಯ ಬೀಳು ಬಿದ್ದ ಜಮೀನಿಗೆ ಭೇಟಿ ನೀಡಿದರು. ಹತ್ತಿಯ ಒಣ ಕಡ್ಡಿಗಳನ್ನು ಪರಿಶೀಲಿಸಿದರು. ಕೆಲವು ನಿಮಿಷಗಳ ಅಲ್ಲಿಂದ ಹೊರಟು ಭೀಮಾ ನದಿಯ ಹಳೇ ಸೇತುವೆಗೆ ಬಂದರು. ಪ್ರವಾಹದ ವೇಳೆ ನದಿ ನೀರು ಎರಡೂ ದಡದಲ್ಲಿ ವಿಸ್ತರಿಸಿಕೊಂಡಿದ್ದರು ಬಗ್ಗೆ ನೆರೆದಿದ್ದ ಅಧಿಕಾರಿಗಳು ಮಾಹಿತಿ ಕೊಟ್ಟರು. 

‌ಭೇಟಿಗೆ ನಿಗದಿಯಾಗಿದ್ದ ವಡಗೇರಾದ ಕುಡಿಯುವ ನೀರು, ಶಿವನೂರಿನ ಜಲಾವೃತ್ತ ಪ್ರದೇಶ, ಗುಡೂರಿನ ಸರ್ಕಾರಿ ಶಾಲೆ, ಅನ್ನೂರಿನ ಹತ್ತಿ, ತೊಗರಿ ಜಮೀನು, ಸವೂರಿನ ಭತ್ತದ ಗದ್ದೆ ಹಾಗೂ ಮುಸ್ಟೂರಿನ ಆರೋಗ್ಯ ಕೇಂದ್ರದತ್ತ ತೆರಳಲಿಲ್ಲ. ಭೇಟಿ ಕೊಟ್ಟ ಸ್ಥಳಗಳಲ್ಲಿ ಕೆಲವು ನಿಮಿಷಗಳಿದ್ದ ತಂಡ, ಅಧ್ಯಯನ ಕಾರ್ಯ ಮುಗಿಸಿ ಜಿಲ್ಲೆಯಿಂದ ಹೈದರಾಬಾದ್‌ನತ್ತ ತೆರಳಿತು.

ಅಧ್ಯಯನ ತಂಡವು ಹಾನಿಗೀಡಾದ ಬೆಳೆಗಳ ರೈತರನ್ನು ಭೇಟಿಯಾಗದೆ ತರಾತರಿ ಪರಿಶೀಲನೆ ಮಾಡಿ, ಮಿಂಚಿನ ವೇಗದಲ್ಲಿ ತೆರಳಿದರು ಎಂದು ರೈತರು ಬೇಸರ ವ್ಯಕ್ತಪಡಿಸಿದ್ದಾರೆ.

ಭೇಟಿಯ ವೇಳೆ ಕೇಂದ್ರದ ತಂಡಕ್ಕೆ ಜಿಲ್ಲಾಧಿಕಾರಿ ಹರ್ಷಲ್ ಭೋಯರ್, ಸಹಾಯಕ ಆಯುಕ್ತ ಶ್ರೀಧರ್ ಗೋಟುರ್, ಕೃಷಿ ಜಂಟಿ ನಿರ್ದೇಶಕ ರತೇಂದ್ರನಾಥ ಸುಗೂರ, ಜೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ರಾಘವೇಂದ್ರ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾನಿಯ ಬಗೆಗೆ ಸಂಕ್ಷಿಪ್ತ ವಿವರಣೆ ನೀಡಿದರು. 

ಶೇ 34.63ರಷ್ಟು ಬೆಳೆ ಹಾನಿ

ಸೆಪ್ಟೆಂಬರ್ ತಿಂಗಳಲ್ಲಿನ ದಾಖಲೆ ಪ್ರಮಾಣದ ಭೀಮಾ ನದಿಗೆ ಹರಿದು ಬಂದು ನೀರು ಮಳೆಯಿಂದಾಗಿ ಕೆರೆ ಹಳ್ಳ–ಕೊಳ್ಳಗಳು ತುಂಬಿ ಬಹುತೇಕ ಬೆಳೆಗಳು ನಾಶವಾದವು. ಜಿಲ್ಲೆಯಲ್ಲಿ ಶೇ 34.36ರಷ್ಟು ಬೆಳೆ ಹಾನಿಯಾಗಿದೆ ಎಂದು ಕೇಂದ್ರ ತಂಡಕ್ಕೆ ಅಂಕಿಅಂಶಗಳ ಸಮೇತ ಅಧಿಕಾರಿಗಳು ಮಾಹಿತಿ ನೀಡಿದರು. ಭೇಟಿ ಮುನ್ನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಈ ಬಗ್ಗೆ ಸಭೆ ನಡೆಸಲಾಯಿತು. ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದರು.  ಕಂದಾಯ ಕೃಷಿ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಜಮೀನುಗಳಿಗೆ ಜಂಟಿಯಾಗ ಭೇಟಿ ನೀಡಿ ಹಾನಿಯಾಗಿರುವ ಕುರಿತು ಪರಿಶೀಲಿಸಿ ವರದಿ ಸಲ್ಲಿಸಿದರು. ಹಾನಿಯ ವಿವರ ಪರಿಹಾರ ತಂತ್ರಾಂಶದಲ್ಲಿ ದಾಖಲಿಸಿದ್ದು ಡಿಬಿಟಿ ಮೂಲಕ ಬೆಳೆ ಪರಿಹಾರಧನ ರೈತರ ಖಾತೆಗೆ ಜಮೆ ಮಾಡಲಾಗಿದೆ. ನಿಯಮಾವಳಿಯಂತೆ ಮೂಲಸೌಕರ್ಯಗಳ ಹಾನಿಯ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ’ ಎಂದು ಕೃಷಿ ಜಂಟಿ ನಿರ್ದೇಶಕ ರತೇಂದ್ರನಾಥ ಸೂಗೂರು ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.