ADVERTISEMENT

ಬರ ಪರಿಹಾರೋಪಾಯಕ್ಕೆ ಇನ್ನಷ್ಟು ಚುರುಕು

ಬರ ನಿರ್ವಹಣೆಗೆ ಜಿಲ್ಲಾಡಳಿತದ ಜತೆ ಕೈಜೋಡಿಸಲು ರೈತರಿಗೆ ಡಿಸಿ ಮನವಿ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2018, 6:30 IST
Last Updated 17 ನವೆಂಬರ್ 2018, 6:30 IST
ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್
ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್   

ಯಾದಗಿರಿ: ‘ಜಿಲ್ಲೆಯಲ್ಲಿ ಬರ ಪರಿಹಾರೋಪ ಕಾರ್ಯ ನಡೆದಿದ್ದರೂ, ನ.17ರಂದು ಕೇಂದ್ರದ ಬರ ಅಧ್ಯಯನ ತಂಡ ಬರ ಸಮೀಕ್ಷೆ ನಡೆಸುವ ಮೂಲಕ ಪರಿಪರಿಹಾರ ಕಾರ್ಯವನ್ನು ಮತ್ತಷ್ಟು ಚುರುಕುಗೊಳಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಎಂ. ಕೂರ್ಮರಾವ್ ತಿಳಿಸಿದರು.

ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,‘ರೈತರಿಗೆ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಕೃಷಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಹೋಬಳಿ ಮಟ್ಟದಲ್ಲಿ ಆಂದೋಲನದ ರೂಪದಲ್ಲಿ ಬರ ಪರಿಹಾರ ಕಾರ್ಯ ನಡೆಸುತ್ತಿದ್ದಾ. ಈ ಕಾರ್ಯದಲ್ಲಿ ಮೇವು ಸಂರಕ್ಷಣೆ, ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ, ಬೆಳೆ ಸಮೀಕ್ಷೆ, ಬೆಳೆ ಹಾನಿ, ಪರ್ಯಾಯ ಬೆಳೆ ಪದ್ಧತಿಗಳು, ಅಚ್ಚುಕಟ್ಟು ಪ್ರದೇಶದಲ್ಲಿ ನಿಷೇಧಿತ ಭತ್ತ ಬೆಳೆ, ರೈತರ ಸಾಲಮನ್ನಾ ಕುರಿತು ಅರಿವು ಮೂಡಿಸಲಾಗಿದೆ’ ಎಂದು ವಿವರಿಸಿದರು.

‘ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ತಾಲ್ಲೂಕಿಗೆ ₹25 ಲಕ್ಷ ಬರ ನಿರ್ವಹಣೆ ಅನುದಾನ ಟಾಸ್ಕ್‌ಫೋರ್ಸ್‌ಗೆ ಬಿಡುಗಡೆಯಾಗಿದೆ. ಮೇವಿನ ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗಿದ್ದು, ಜಿಲ್ಲೆಯಲ್ಲಿ ನೀರಾವರಿ ಪ್ರದೇಶವಿರುವ ಕ್ಷೇತ್ರಗಳಲ್ಲಿ ಭತ್ತವನ್ನು ಬೆಳೆದ ರೈತರು ಹುಲ್ಲು ಸುಡದಂತೆ ಅರಿವು ಮೂಡಿಸಲಾಗಿದೆ’ ಎಂದರು.

ADVERTISEMENT

ಬೆಳೆ ಸಮೀಕ್ಷೆ ಆಕ್ಷೇಪಣೆಗೆ ಅವಕಾಶ:

ಜಿಲ್ಲೆಯ 2018ರ ಮುಂಗಾರು ಋತುವಿನಲ್ಲಿ ರೈತರು ತಮ್ಮ ಜಮೀನಿನಲ್ಲಿನ ಬೆಳೆ ಮಾಹಿತಿಯನ್ನು ಸ್ಥಳೀಯ ವಿದ್ಯಾವಂತ ಯುವಕರನ್ನು ತೊಡಗಿಸಿಕೊಂಡು, ಮೊಬೈಲ್ ತಂತ್ರಾಂಶದ ಮೂಲಕ ಮಾಹಿತಿಯನ್ನು ಈಗಾಗಲೇ ಸಂಗ್ರಹಿಸಲಾಗಿದೆ. ರೈತರು ತಮ್ಮ ಜಮೀನಿನಲ್ಲಿ ಬೆಳೆದ ಮಾಹಿತಿಯನ್ನು ‘ಬೆಳೆ ದರ್ಶಕ್‌’ ಆ್ಯಾಪ್ ಅನ್ನು ಗೂಗಲ್‌ನ ಪ್ಲೇ ಸ್ಟೋರ್ ಎಂದು ನಮೂದಿಸಿ ಡೌನ್‌ಲೋಡ್ ಮಾಡಿಕೊಂಡು ಆಕ್ಷೇಪಣೆಗಳಿದ್ದಲ್ಲಿ ತಾಲ್ಲೂಕು ಕಚೇರಿಯಲ್ಲಿ ಲಿಖಿತವಾಗಿ ನ.30ರ ವರೆಗೆ ಸಲ್ಲಿಸಿ ಸರಿಪಡಿಸಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

‘ತಾಲ್ಲೂಕು ಆಡಳಿತ ಈ ಬೆಳೆ ಮಾಹಿತಿಯನ್ನು ಪರಿಶೀಲಿಸುತ್ತದೆ. ಸರ್ಕಾರವು ಈ ಬೆಳೆಗಳ ಮಾಹಿತಿಯನ್ನು ಬೆಳೆ ವಿಮೆ, ಕನಿಷ್ಠ ಬೆಂಬಲ ಬೆಲೆ, ಬೆಳೆನಷ್ಟ ಪರಿಹಾರ ಇತ್ಯಾದಿ ಯೋಜನೆಗಳಲ್ಲಿ ಉಪಯೋಗಿಸುವ ಸಾಧ್ಯತೆ ಬಗ್ಗೆ ಪರಿಶೀಲಿಸುತ್ತದೆ. ಆದ್ದರಿಂದ ಸರ್ಕಾರ ದಾಖಲಿಸಿರುವ ರೈತರ ಜಮೀನಿನಲ್ಲಿ ಬೆಳೆದ ಮಾಹಿತಿಯನ್ನು ರೈತರು ಪರಿಶೀಲಿಸಿಕೊಳ್ಳುವುದು ಅತಿ ಮಹತ್ವದ್ದಾಗಿದೆ’ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ, ಜಂಟಿ ಕೃಷಿ ನಿರ್ದೇಶಕಿ ಆರ್. ದೇವಿಕಾ, ಜಿಲ್ಲಾ ಸಂಖ್ಯಾ ಸಂಗ್ರಹಣಾ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.