ಯಾದಗಿರಿಯಲ್ಲಿ ಸೋಮವಾರ ನಡೆದ ವಿಭಾಗ ಮಟ್ಟದ ಕ್ರೀಡಾಕೂಟದ ಕೊಕ್ಕೊದಲ್ಲಿ ನಿರತವಾದ ಮಹಿಳಾ ಆಟಗಾರರು.
ಯಾದಗಿರಿ: ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಶಾಲಾ ಶಿಕ್ಷಣ ಇಲಾಖೆ ಆಯೋಜಿಸಿದ್ದ ಕಲಬುರಗಿ ವಿಭಾಗ ಮಟ್ಟದ ದಸರಾ ಸಿ.ಎಂ. ಕಪ್ ಕ್ರೀಡಾಕೂಟದ ಗುಂಪು ಆಟಗಳಲ್ಲಿ ರಾಯಚೂರಿನ ಮಹಿಳಾ ತಂಡಗಳು ಮೇಲುಗೈ ಸಾಧಿಸಿದವು.
ಗುಂಪು ಆಟದ ಕೊಕ್ಕೊ ಮತ್ತು ಥ್ರೋಬಾಲ್ ಹಾಗೂ ಭಾರ ಎತ್ತುವ ಕಸರತ್ತು ಸ್ಪರ್ಧೆಯಲ್ಲಿ ಮಹಿಳೆಯರು ಮತ್ತು ಪುರುಷ ವಿಭಾಗದಲ್ಲಿ ಕಲಬುರಗಿ, ಯಾದಗಿರಿ, ಬೀದರ್, ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ವಿಜಯನಗರದ 640ಕ್ಕೂ ಹೆಚ್ಚು ಕ್ರೀಡಾಪಟುಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು.
ಕೊಕ್ಕೊ ಪುರುಷರ ವಿಭಾಗದಲ್ಲಿ ಯಾದಗಿರಿ ಪ್ರಥಮ ಸ್ಥಾನ ಪಡೆದಿದ್ದರೆ, ಕಲಬುರಗಿ ತಂಡಯು ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಥ್ರೋಬಾಲ್‌ನಲ್ಲಿ ಪ್ರಥಮ ಸ್ಥಾನ ಕೊಪ್ಪಳದ ಪಾಲಾದರೆ, ದ್ಚಿತೀಯ ಸ್ಥಾನ ಯಾದಗಿರಿ ಪಡೆಯಿತು. ಮಹಿಳೆಯರ ಕೊಕ್ಕೊ ಮತ್ತು ಥ್ರೋಬಾಲ್‌ನಲ್ಲಿ ರಾಯಚೂರು ತಂಡಗಳು ಪ್ರಥಮ ಸ್ಥಾನ ಪಡೆದು ಗೆಲುವಿನ ನಗೆ ಬೀರಿದವು. ಎರಡನೇ ಸ್ಥಾನದಲ್ಲಿ ಕ್ರಮವಾಗಿ ಕೊಪ್ಪಳ ಮತ್ತು ಬಳ್ಳಾರಿ ಪಡೆದುಕೊಂಡವು.
‘ವಿಭಾಗ ಮಟ್ಟದಲ್ಲಿ ಗೆದ್ದವರು ಸೆಪ್ಟೆಂಬರ್ 22ರಿಂದ 25ರವರೆಗೆ ಮೈಸೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವರು’ ಎಂದು ಯುವ ಜನಸೇವಾ ಹಾಗೂ ಕ್ರೀಡಾ ಅಧಿಕಾರಿ ರಾಜು ಬಾವಿಹಳ್ಳಿ ತಿಳಿಸಿದರು.
ಭಾರ ಎತ್ತುವ ಸ್ಪರ್ಧೆಯ ಪುರುಷ ವಿಜೇತರ ವಿವರ:
55 ಕೆ.ಜಿ.: ಕಲಬುರಗಿಯ ಬಸವರಾಜ–1, ಯಾದಗಿರಿಯ ದೊಡ್ಡಪ್ಪ ನಾಯಕ್–2
61 ಕೆ.ಜಿ.: ಕಲಬುರಗಿಯ ಅಮಿತ್–1, ಶರಣಬಸಪ್ಪ –2
67 ಕೆ.ಜಿ.: ಯಾದಗಿರಿಯ ಆನಂದ–1, ಕಲಬುರಗಿಯ ಬಸವರಾಜ– 2
73 ಕೆ.ಜಿ.: ಕಲಬುರಗಿಯ ಭಗವಂತ ಹುಡ–1, ಪ್ರಕಾಶ–2
81 ಕೆ.ಜಿ.: ರಾಯಚೂರಿನ ವೀರೇಶ–1, ಕಲಬುರಗಿಯ ಸಂಗಮೇಶ–2
89 ಕೆ.ಜಿ.: ಕಲಬುರಗಿಯ ಸೈಫನ್–1, ಬೀದರ್‌ನ ಸುಮಿತ್ ಬಿ.ಸ್ವಾಮಿ–2
96 ಕೆ.ಜಿ.: ರಾಯಚೂರಿನ ವಿನೋದ್ ಕುಮಾರ್–1, ಕಲಬುರಗಿಯ ಮಲ್ಲಿಕಾರ್ಜುನ–2
102 ಕೆ.ಜಿ.: ಬಸವರಾಜ ಪೂಜಾರಿ–1, ಕಲಬುರಗಿಯ ಮರಿಯಪ್ಪ–2
109 ಕೆ.ಜಿ.: ಬೀದರ್‌ನ ಬಸವರಾಜ ಸ್ವಾಮಿ–1, ಕಲಬುರಗಿಯ ವಿಜಯ್‌ಕುಮಾರ್–2
109+ ಕೆ.ಜಿ.: ರಾಯಚೂರಿನ ವೆಂಕಟೇಶ–1, ಅಮರ್‌ಗುಂಡಪ್ಪ–2
ಮಹಿಳಾ ವಿಜೇತರು: 45 ಕೆ.ಜಿ.:
ಬೀದರ್ ಸ್ವಾತಿ ಬಿ.ಸ್ವಾಮಿ–1, ರಾಯಚೂರಿನ ಭಾರತಿ–2
49 ಕೆ.ಜಿ.: ಯಾದಗಿರಿಯ ಡಾ.ಶ್ವೇತಾ ಜಾಕ್–1, ರಾಣಿ–2
55 ಕೆ.ಜಿ.: ಬೀದರ್‌ನ ಸುರೇಖಾ –1 (ಒಬ್ಬರೇ ಸ್ಪರ್ಧೆ)
71, 76 ಹಾಗೂ 81 ಕೆ.ಜಿ. ವಿಭಾಗದಲ್ಲಿ ಕಲಬುರಗಿಯ ಕಾವೇರಿ ಮತ್ತು ಸಲೇಹಾ, ಬೀದರ್‌ನ ಅಂಬಿಕಾ ಪ್ರಥಮ ಸ್ಥಾನ ಪಡೆದರು.
‘ಆರೋಗ್ಯ ವೃದ್ಧಿಗೆ ಸಹಕಾರಿ’ ‘ಕ್ರೀಡಾಕೂಟಗಳು ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಗೆ ಸಹಕಾರಿಯಾಗಿವೆ’ ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಹೇಳಿದರು. ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ‘ವಿದ್ಯಾರ್ಥಿಗಳು ಸೋಲು– ಗೆಲುವು ಬಗ್ಗೆ ಯೋಚಿಸದೆ ಉತ್ಸಾಹದಿಂದ ಕ್ರೀಡಾಕೂಟಗಳಲ್ಲಿ ಭಾಗವಹಿಸಬೇಕು. ಸೋಲನ್ನು ಸವಾಲಾಗಿ ಸ್ವೀಕರಿಸಬೇಕು. ಆಸಕ್ತಿಯಿಂದ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಗೆಲುವು ಸಾಧಿಸಬೇಕು’ ಎಂದರು. ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಾಬುರಾವ್ ಕಾಡ್ಲೂರ್ ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಜಿಲ್ಲಾ ಪಂಚಾಯಿತಿ ಸಿಇಒ ಲವೀಶ್ ಒರಡಿಯಾ ದೈಹಿಕ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಹಣುಮಂತ ಹೊಸಮನಿ ತಾಲೂಕ ಅಧ್ಯಕ್ಷ ಮೌನೇಶ್ ಉಪಸ್ಥಿತರಿದ್ದರು.
ಮೋಸದಾಟದ ಆರೋಪ: ಅರ್ಧಕ್ಕೆ ಎದ್ದು ಹೋದ ಆಟಗಾರರು ಕೊಕ್ಕೊ ಪುರುಷರ ವಿಭಾಗದಲ್ಲಿ ಮೋಸದಾಟ ನಡೆದಿದೆ ಎಂದು ತೀರ್ಪುಗಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕೊಪ್ಪಳ ತಂಡದ ಆಟಗಾರರು ಕಲಬುರಗಿ ವಿರುದ್ಧ ಪಂದ್ಯದಿಂದ ಅರ್ಧಕ್ಕೆ ಎದ್ದು ಅಂಕಣದಿಂದ ಹೊರಹೋದರು. ‘ಮೊದಲ ಸುತ್ತಿನಲ್ಲಿ ಮೇಲುಗೈ ಸಾಧಿಸಿದ್ದು ಎರಡನೇ ಸುತ್ತಿನಲ್ಲಿ ಎದುರಾಳಿ ಕಲಬುರಗಿ ತಂಡ ಮುನ್ನಡೆ ಪಡೆದಿತ್ತು. ಆಟಗಾರರು ತಪ್ಪು ಮಾಡದೆ ಇದ್ದರೂ ಅಂಪೈರ್‌ಗಳು ಪದೇ ಪದೇ ರೀ ಕೊಕ್ಕೊ ಕೊಟ್ಟು ಪಾಯಿಂಟ್‌ಗಳಿಸುವ ಅವಕಾಶ ಕಸಿದುಕೊಂಡರು. ಜತೆಗೆ ಒಂದು ನಿಮಿಷ ಕಡಿಮೆ ಸಮಯ ಕೊಟ್ಟು ಎದುರಾಳಿ ತಂಡದ ಪರವಾಗಿದ್ದರು’ ಎಂದು ಕೊಪ್ಪಳ ತಂಡದ ಉಸ್ತುವಾರಿ ನಾಗರಾಜ ಆರೋಪಿಸಿದರು. ಇದಕ್ಕೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕ್ರೀಡಾ ಅಧಿಕಾರಿ ರಾಜು ಬಾವಿಹಳ್ಳಿ ‘ಕೊಪ್ಪಳ ತಂಡದವರು ಅಂಪೈರ್‌ಗಳ ತಾರತಮ್ಯದ ಬಗ್ಗೆ ನನ್ನ ಗಮನಕ್ಕೆ ತರಲಿಲ್ಲ. ಸೋಲಿನ ಕೊನೆಯ ಗಳಿಗೆಯಲ್ಲಿ ಎದ್ದು ಹೋರಗೆ ಹೋಗಿದ್ದಾರೆ ಎಂದು ಅಂಪೈರ್‌ಗಳು ಹೇಳಿದ್ದಾರೆ’ ಎಂದರು.
ಊಟ ಸಿಗದೆ ಸಾಂಬಾರ್ ಕುಡಿದ ಆಟಗಾರರು ಕ್ರೀಡಾಕೂಟಕ್ಕೆ ಬಂದಿದ್ದ ಕೆಲವರಿಗೆ ಊಟ ಸಿಗಲಿಲ್ಲ. ಆಟದಿಂದ ದಣಿದಿದ್ದ ಕೆಲವರು ಸಾಂಬಾರ್ ಕುಡಿದು ಹೊಟ್ಟೆ ತುಂಬಿಸಿಕೊಂಡು ಆಯೋಜಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಆಟಗಳನ್ನು ಸರಿಯಾಗಿ ಆಡಿಸಲಿಲ್ಲ. ಉಳಿದುಕೊಳ್ಳಲು ಕನಿಷ್ಠ ವ್ಯವಸ್ಥೆಯೂ ಮಾಡಲಿಲ್ಲ. ತಗ್ಗು ಗುಂಡಿನ ಕ್ರೀಡಾಂಗಣದಲ್ಲಿ ಆಟವಾಡಿಸಿದರು. ಕೊನೆಗೆ ಹೊಟ್ಟೆ ತುಂಬ ಅನ್ನವೂ ಕೊಡಲಿಲ್ಲ ಎಂದು ಆಟಗಾರೊಬ್ಬರು ಬೇಸರ ಹೊರಹಾಕಿದ. ‘ಕ್ರೀಡಾಪಟುಗಳು ಮಾತ್ರವಲ್ಲದೇ ಬೇರೆಯವರು ಬಂದು ಊಟ ಮಾಡಿದ್ದಾರೆ. ಹೀಗಾಗಿ ಕೆಲವರಿಗೆ ಊಟ ಸಿಗಲಿಲ್ಲ. ಇಂತಹ ಕ್ರೀಡಾಕೂಟಗಳು ನಡೆದಾಗ ಇಂತಹದ್ದು ಸಾಮಾನ್ಯ’ ಎಂದು ರಾಜು ಬಾವಿಹಳ್ಳಿ ಸಮರ್ಥಿಸಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.