ADVERTISEMENT

‘ರೈತರ ಸಮಸ್ಯೆ ಪರಿಹಾರಕ್ಕೆ ಆಧ್ಯತೆ ನೀಡಿ’- ಜಿಲ್ಲಾಧಿಕಾರಿ ಸ್ನೇಹಲ್ ಆರ್

ಗುರುಮಠಕಲ್: ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2022, 5:21 IST
Last Updated 14 ಸೆಪ್ಟೆಂಬರ್ 2022, 5:21 IST
ಗುರುಮಠಕಲ್‌ನ ಇಂದಿರಾನಗರ ಬಡಾವಣೆಯ ಸರ್ಕಾರಿ ಪ್ರಾಥಮಿಕ ಶಾಲೆಗೆ ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಶೀಲಿಸಿದರು
ಗುರುಮಠಕಲ್‌ನ ಇಂದಿರಾನಗರ ಬಡಾವಣೆಯ ಸರ್ಕಾರಿ ಪ್ರಾಥಮಿಕ ಶಾಲೆಗೆ ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಶೀಲಿಸಿದರು   

ಪ್ರಜಾವಾಣಿ ವಾರ್ತೆ

ಗುರುಮಠಕಲ್: ‘ಪ್ರಸಕ್ತ ಸಾಲಿನಲ್ಲಿ ಅಪಾರ ಬೆಳೆಹಾನಿ ಉಂಟಾಗಿದೆ. ಅದಕ್ಕೆ ಸಂಬಂಧಿಸಿದಂತೆ ಜಂಟಿ ಸಮೀಕ್ಷೆ ವರದಿಯನ್ನು ಶೀಘ್ರ ತಲುಪಿಸಬೇಕು. ರೈತರ ಸಮಸ್ಯೆ ಪರಿಹಾರಕ್ಕೆ ಆಧ್ಯತೆ ನೀಡಿ, ಉಳಿದಿರುವ ಸಮೀಕ್ಷೆ ಪೂರ್ಣಗೊಳಿಸಿ ವರದಿ ತಯಾರಿಸಿ’ ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅಧಿಕಾರಿಗಳಿಗೆ ಸೂಚಿಸಿದರು.

ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಮಂಗಳವಾರ ಸಾರ್ವಜನಿಕರತು ಅಹವಾಲು ಸ್ವಿಕರಿಸಿದ ನಂತರ ವಿವಿಧ ಇಲಾಖೆಗಳ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ADVERTISEMENT

ತಾಲ್ಲೂಕಿನಲ್ಲಿ ಒಟ್ಟು 3029 ಹೆಕ್ಟರ್ ಪ್ರದೇಶದ ಬೆಳೆ ಹಾನಿಯಾಗಿದ್ದು, ಸಮೀಕ್ಷೆ ಮಾಡಲಾಗುತ್ತಿದೆ. ಕಂದಾಯ ಸಿಬ್ಬಂದಿ ಜತೆ ಕೃಷಿ ಇಲಾಖೆ ಸಮೀಕ್ಷೆಯಲ್ಲಿ ತೊಡಗಿರುವುದಾಗಿ ಕೃಷಿ ಅಧಿಕಾರಿ ಮಲ್ಲಿಕಾರ್ಜುನ ವಾರದ ಹೇಳಿದರು.

ಪಟ್ಟಣದಲ್ಲಿ 22 ಅಂಗನವಾಡಿ ಕೇಂದ್ರಗಳಿದ್ದು, 7 ಕೇಂದ್ರಗಳಿಗೆ ಮಾತ್ರ ಸ್ವಂತ ಕಟ್ಟಡವಿದೆ. ಉಳಿದ 15 ಕೇಂದ್ರಗಳು ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಸಿಡಿಪಿಒ ವನಜಾಕ್ಷಿ ಬೆಂಡಬೆಂಬಳಿ ತಿಳಿಸಿದರು.

ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಹತ್ತಿರದ ಸರ್ಕಾರಿ ಶಾಲೆ ಅಥವಾ ಸರ್ಕಾರಿ ಕಟ್ಟಡಗಳಿರುವ ಕುರಿತು ಪರಿಶೀಲಿಸಿ ಕೂಡಲೆ ಅಂಗನವಾಡಿ ಕೇಂದ್ರಗಳಿಗೆ ಕಟ್ಟಡ ಒದಗಿಸಲು ಪುರಸಭೆಯ ಮುಖ್ಯಾಧಿಕಾರಿಗೆ ಸೂಚಿಸಿದರು.

ಜಾನುವಾರುಗಳ ಔಷಧಗಳ ದಾಸ್ತಾನು, ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿ ಶಾಲೆಗೆ ಬರುವಂತೆ ನೋಡಿಕೊಳ್ಳಬೇಕು, ಸಾಂಕ್ರಾಮಿಕಗಳು ಹರಡದಂತೆ ಕ್ರಮ ತೆಗೆದುಕೊಳ್ಳಲು, ಬಸ್ ವ್ಯವಸ್ಥೆ, ಕುಡಿಯುವ ನೀರು ಸಮಸ್ಯೆಯಾಗದಂತೆ ಎಚ್ಚರವಹಿಸಲು ತಾಕೀತು ಮಾಡಿದರು.

ಈಚೆಗೆ ಸೌದಿ ಅರೇಬಿಯಾದಲ್ಲಿ ಹೃದಯಾಘಾತದಿಂದ ಮೃತಪಟ್ಟ ಕಟ್ಟಡ ಕಾರ್ಮಿಕ ನಾನ್ಯಾ ಅವರಿಗೆ ಸೌದಿ ಸರ್ಕಾರ ನೀಡಿದ ಪರಿಹಾರದ ಚೆಕ್ ಅವರ ಪತ್ನಿ ವಿಜ್ಜುಬಾಯಿ ಅವರಿಗೆ ವಿತರಿಸಲಾಯಿತು.

ಪಟ್ಟಣದ ಇಂದಿರಾನಗರ ಮತ್ತು ನಾರಾಯಣಪುರ ಬಡಾವಣೆಗಳಿಗೆ ಬೇಟಿ ನೀಡಿ ಪರಿಶೀಲನೆ ನಡೆಸಿ, ಮೂಲ ಸೌಕರ್ಯಗಳನ್ನು ಒದಗಿಸುವುದು, ಇಲ್ಲಿನ ಶಾಲೆಗಳ ಶಿಕ್ಷಕರು ಸಮಯಕ್ಕೆ ಸರಿಯಾಗಿ ಹಾಜರಾಗುವುದು ಮತ್ತು ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಕರೆತರಲು ಕ್ರಮವಹಿಸುವಂತೆ ಹೇಳಿದರು.

ತಹಶೀಲ್ದಾರ್ ಶರಣಬಸವ ರಾಣಪ್ಪ, ಗ್ರೇಡ್-2 ತಹಶೀಲ್ದಾರ್ ನರಸಿಂಹಸ್ವಾಮಿ, ತಾಲ್ಲೂಕು ಪಂಚಾಯಿತಿ ಎಡಿ ರಾಮಚಂದ್ರ ಬಸೂದೆ, ಪುರಸಭೆ ಮುಖ್ಯಾಧಿಕಾರಿ ಭಾರತಿ ಸಿ.ದಂಡೋತಿ, ಶಶಿಕಿರಣ ಹಜಾರೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.