ಸುರಪುರದಲ್ಲಿ ಬುಧವಾರ ಜಯ ಕರ್ನಾಟಕ ರಕ್ಷಣಾ ಸೇನೆಯವರು ತಹಶೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿದರು
ಸುರಪುರ: ರೈತರ ಸಾಲ ಮನ್ನಾ ಮಾಡಬೇಕು ಮತ್ತು ತಕ್ಷಣ ಬೆಳೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಜಯ ಕರ್ನಾಟಕ ರಕ್ಷಣಾ ಸೇನೆ ಘಟಕದವರು ಬುಧವಾರ ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಎಚ್.ಕೆ. ಸರಕಾವಸ್ ಅವರಿಗೆ ಮನವಿ ಸಲ್ಲಿಸಿದರು.
ಕಾರ್ಯಾಧ್ಯಕ್ಷ ಶಿವರಾಜ ವಗ್ಗರ ಮಾತನಾಡಿ, ‘ಜಿಲ್ಲೆಯಾದ್ಯಂತ ಇತ್ತೀಚೆಗೆ ಸುರಿದ ಮಳೆಯಿಂದಾಗಿ ಅತಿವೃಷ್ಟಿ ಮತ್ತು ಪ್ರವಾಹದಿಂದ ಜಮೀನುಗಳು ನೀರಿನಲ್ಲಿ ಮುಳುಗಿ ಹತ್ತಿ, ತೊಗರಿ, ಜೋಳ, ಸಜ್ಜೆ, ಕಡಲೆ ಇನ್ನಿತರ ಬೆಳೆಗಳು ಸಂಪೂರ್ಣವಾಗಿ ಹಾಳಾಗಿವೆ. ರೈತರ, ಬಡವರ ಮನೆಗಳು ಬಿದ್ದಿವೆ. ಜಾನುವಾರುಗಳು ಸಾವಿಗೀಡಾಗಿವೆ. ರೈತರ ಬದುಕು ಸಂಕಷ್ಟದಲ್ಲಿದೆ’ ಎಂದರು.
‘ಮಂದಗತಿಯಲ್ಲಿ ಸಾಗುತ್ತಿರುವ ಬೆಳೆ ಸಮೀಕ್ಷೆಯನ್ನು ತಕ್ಷಣ ಪೂರ್ಣಗೊಳಿಸಿ ಶೀಘ್ರ ವರದಿ ಸಲ್ಲಿಸಬೇಕು. ಪ್ರವಾಹ ಪೀಡಿತ ರೈತರಿಗೆ ಪ್ರತಿ ಎಕರೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ತಲಾ ₹ 25 ಸಾವಿರದಂತೆ ಒಟ್ಟು ₹ 50 ಸಾವಿರ ಪರಿಹಾರ ನೀಡಬೇಕು’ ಎಂದು ಒತ್ತಾಯಿಸಿದರು.
‘ರೈತರು ಪಡೆದಿರುವ ಎಲ್ಲಾ ಬ್ಯಾಂಕ್‍ಗಳ ಕೃಷಿ ಸಾಲಗಳನ್ನು ಮನ್ನಾ ಮಾಡಬೇಕು. ಬೆಳೆ ವಿಮೆ ಪಾವತಿಸಿದ ರೈತರಿಗೆ ವಿಮಾ ಮೊತ್ತವನ್ನು ತಕ್ಷಣ ಬಿಡುಗಡೆ ಮಾಡಬೇಕು. ಉಳಿದ ಅಲ್ಪ ಬೆಳೆಗಳಿಗೆ ಸರಕಾರದಿಂದ ಬೆಂಬಲ ಬೆಲೆ ನಿಗದಿಪಡಿಸಬೇಕು. ಎಪಿಎಂಸಿ ಮಾರುಕಟ್ಟೆಗಳಲ್ಲಿ ಹತ್ತಿ ಮತ್ತು ತೊಗರಿ ಖರೀದಿ ಕೇಂದ್ರಗಳನ್ನು ಕೂಡಲೇ ಪ್ರಾರಂಭಿಸಬೇಕು. ಮಳೆ ಮತ್ತು ಪ್ರವಾಹದಿಂದ ಕುಸಿದ ಮನೆಗಳು ಹಾಗೂ ಮೃತಪಟ್ಟ ಜಾನುವಾರುಗಳಿಗೆ ಸಮೀಕ್ಷೆ ನಡೆಸಿ ಪರಿಹಾರ ನೀಡಬೇಕು’ ಎಂದು ಆಗ್ರಹಿಸಿದರು.
ತಾಲ್ಲೂಕು ಘಟಕದ ಅಧ್ಯಕ್ಷ ಮಲ್ಲಪ್ಪ ನಾಯಕ ಕಬಾಡಗೇರಾ ಮಾತನಾಡಿದರು. ಮುಖಂಡರಾದ ಹಣಮಂತ ಭಂಡಾರಿ, ಶಿವುಕುಮಾರ ಗಾಜಲದಿನ್ನಿ, ನಾಗರಾಜ ನಂಬಾ, ವಿಶ್ವ, ಮನೋಹರ ಕಟ್ಟಿಮನಿ, ಮಂಜು ಪಾಟೀಲ, ನಾಗಲಿಂಗ ಕರಿಗೇರಾ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.