ಹುಣಸಗಿ: ತಾಲ್ಲೂಕಿನ ಬರದೇವನಾಳ ಸೇರಿದಂತೆ ಸುತ್ತಮುತ್ತಲಿನ ಗ್ರಾಮದವರು ನಾಕನಕೆರೆಯ ಹನುಮಪ್ಪನಿಗೆ ಶ್ರಾವಣ ಮಾಸದ ಕೊನೆಯ ಶನಿವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ವಿಶೇಷ ಪೂಜೆ ನೆರವೇರಿಸಿದರು.
ಶನಿವಾರ ಬೆಳಿಗ್ಗೆ ದೇವಸ್ಥಾನದಲ್ಲಿ ಸುಪ್ರಭಾತದೊಂದಿಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಪ್ರಾರಂಭವಾದವು.
ಪುರೋಹಿತರಾದ ಜಗನ್ನಾಥ ಆಚಾರ್ಯ ಜೋಶಿ ನೇತೃತ್ವದಲ್ಲಿ ಹನುಮಂತ ದೇವರಿಗೆ ವಿವಿಧ ಫಲಪುಷ್ಪಗಳ ಅಲಂಕಾರ ಮಾಡಿ ಪೂಜೆ ಸಲ್ಲಿಸಿದ ಬಳಿಕ, ನೈವೇದ್ಯ ಮಹಾಮಂಗಳಾರತಿ, ತೀರ್ಥ ಪ್ರಸಾದ ಜರುಗಿತು.
ಮದ್ಯಾಹ್ನ ವಾದ್ಯಮೇಳಗಳ ಮೆರವಣಿಗೆಯೊಂದಿಗೆ ಮುಖ್ಯಪ್ರಾಣದೇವರ ಉತ್ಸವ ಮೂರ್ತಿಯೊಂದಿಗೆ ಪಲ್ಲಕ್ಕಿ ಸೇವೆ ಆರಂಭವಾಯಿತು. ಗ್ರಾಮದ ನಾಡಿಗೇರ ಮನೆತನದಕಲ್ಯಾಣರಾವ್ ದೇಶಪಾಂಡೆ ಅವರು ಗ್ರಾಮದ ದೇವಸ್ಥಾನದಿಂದ ಹನುಮಂತದೇವರ ಮೂಲಸ್ಥಾನವಾಗಿರುವ ನಾಕನಕೆರೆ ದೇವಸ್ಥಾನದವರೆಗೆ ಹಿಮ್ಮುಖವಾಗಿ ನಡೆಯುತ್ತಾ ಗೋಪಾಳ ಸೇವೆ ಸಲ್ಲಿಸಿದರು. ನಾಕನಕೆರೆ ದೇವಸ್ಥಾನದ ಸುತ್ತಲೂ ಪ್ರದಕ್ಷಿಣೆ ಹಾಕಿದ ನಂತರ ನಾಕನಕೆರೆಯ ಹನುಮಪ್ಪನಿಗೆ ಭಕ್ತರು ತಂದ ಪವಿತ್ರ ಹೊಳೆ ನೀರಿನ ಅಭಿಷೇಕ ಮಂಗಳಾರತಿ ಮಾಡಲಾಯಿತು.
ಪುನಃ ಪಲ್ಲಕ್ಕಿ ಉತ್ಸವದ ಸೇವೆಯೊಂದಿಗೆ ಗ್ರಾಮಕ್ಕೆ ಮರಳಿ ದೇವಸ್ಥಾನದಲ್ಲಿರುವ ಹನುಮಂತದೇವರಿಗೆ ಹೊಳೆ ನೀರಿನ ಅಭಿಷೇಕ ಹಾಗೂ ಮಹಾಮಂಗಳಾರತಿ ಚಾಮರ ಸೇವೆಯೊಂದಿಗೆ ಕಾರ್ಯಕ್ರಮಗಳು ಸಂಪನ್ನಗೊಂಡವು. ಬರದೇವನಾಳ, ಕೊಡೇಕಲ್ಲ, ನಾರಾಯಣಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.