ADVERTISEMENT

ಹುಣಸಗಿ: ಗ್ರಾಮೀಣದಲ್ಲಿ ಕುಡಿವ ನೀರಿಗೆ ನಿತ್ಯ ಹೈರಾಣ

ಹತ್ತಾರು ಗ್ರಾಮಗಳಲ್ಲಿ ಕುಡಿಯುವ ನೀರು ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 12 ಮೇ 2025, 6:26 IST
Last Updated 12 ಮೇ 2025, 6:26 IST
<div class="paragraphs"><p>ಹುಣಸಗಿ ತಾಲ್ಲೂಕಿನ ಬೊಮ್ಮನಗುಡ್ಡ ಗ್ರಾಮದಲ್ಲಿ ನೀರಿಗಾಗಿ ಕಾಯುತ್ತಿರುವ ಮಹಿಳೆಯರು</p></div>

ಹುಣಸಗಿ ತಾಲ್ಲೂಕಿನ ಬೊಮ್ಮನಗುಡ್ಡ ಗ್ರಾಮದಲ್ಲಿ ನೀರಿಗಾಗಿ ಕಾಯುತ್ತಿರುವ ಮಹಿಳೆಯರು

   

ಹುಣಸಗಿ: ಬೇಸಿಗೆ ಬಂತೆಂದರೆ ತಾಲ್ಲೂಕಿನ ಕೆಲ ಗ್ರಾಮೀಣ ಭಾಗದಲ್ಲಿ ಪ್ರತಿವರ್ಷವೂ ಕುಡಿಯುವ ನೀರಿನ ಸಮಸ್ಯೆ ಉಂಟಾಗುತ್ತದೆ. ಆದರೆ, ಶಾಶ್ವತ ಪರಿಹಾರ ಇಂದಿಗೂ ಸಿಕ್ಕಿಲ್ಲ. ತಾಲ್ಲೂಕಿನಲ್ಲಿ 18 ಗ್ರಾಮ ಪಂಚಾಯಿತಿಗಳಿದ್ದು, 84 ಗ್ರಾಮಗಳಿವೆ. ಇದರಲ್ಲಿ ಹತ್ತಾರು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ.

ತಾಲ್ಲೂಕಿನ ಬೈಲಕುಂಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೊಮ್ಮನಗುಡ್ಡ ಗ್ರಾಮದಲ್ಲಿ ಹಲವಾರು ಮನೆಗಳಿಗೆ ಕುಡಿಯುವ ನೀರು ತಲುಪುತ್ತಿಲ್ಲ. ಇದರಿಂದಾಗಿ ನಿತ್ಯ ನೀರಿನದ್ದೇ ಚಿಂತೆ ಎನ್ನುವಂತಾಗಿದೆ ಎಂದು ಇಲ್ಲಿನ ನಿವಾಸಿಗಳು ಹೇಳುತ್ತಾರೆ.

ADVERTISEMENT

ಸುಮಾರು 600 ಕ್ಕೂ ಹೆಚ್ಚು ಮನೆಗಳಿದ್ದು, 3 ಜನ ಗ್ರಾಮ ಪಂಚಾಯಿತಿ ಸದಸ್ಯರಿದ್ದಾರೆ. ಗ್ರಾಮದಲ್ಲಿ 6 ಕೊಳವೆಬಾವಿ ಹಾಗೂ ಒಂದು ತೆರೆದ ಬಾವಿ ಇದೆ. ಆದರೆ, ನಾಲ್ಕು ಕೊಳವೆ ಬಾವಿಯ ನೀರು ಕುಡಿಯಲು, ಬಳಕೆಗೂ ಯೋಗ್ಯವಿಲ್ಲ ಎಂದು ಹೇಳಲಾಗಿದೆ. ಇದರಿಂದಾಗಿ ಎರಡು ಕೊಳವೆಬಾವಿಗೆ ಹೆಚ್ಚಿನ ಜನರು ಮುಗಿ ಬಿದ್ದಿದ್ದರಿಂದಾಗಿ ಈ ಕೊಳವೆ ಬಾವಿಗಳು ತಿಂಗಳಲ್ಲಿ ಮೂರು ನಾಲ್ಕು ಬಾರಿ ದುರಸ್ತಿಗೆ ಬರುತ್ತಿವೆ ಎಂದು ಹೇಳಲಾಗಿದೆ.

‘ತೆರೆದ ಬಾವಿಯಲ್ಲಿನ ನೀರು ಒಂದು ತಾಸು ಮಾತ್ರ ಚೆನ್ನಾಗಿ ಬರುತ್ತದೆ. ಅದು ಆ ಭಾಗದಲ್ಲಿರುವ ಮನೆಗಳಿಗೆ ಮಾತ್ರ ಸಾಕಾಗುತ್ತದೆ. ಆದ್ದರಿಂದ ನೀರು ತರಲು ಒಂದು ಕಿಮೀಗೂ ಹೆಚ್ಚು ದೂರ ಕ್ರಮಿಸುವ ಅನಿವಾರ್ಯತೆ ಇದೆ’ ಎಂದು ಗ್ರಾಮದ ಅಮರೇಶ ಅಗ್ನಿ ಮಾನಪ್ಪ ಅಂಬಿಗೇರ ಹೇಳುತ್ತಾರೆ.

ಇದ್ದೂ ಇಲ್ಲದಂತಾದ ತೊಟ್ಟಿ: ‘ಜೆಜೆಎಂ ಯೋಜನೆಯಡಿ ಗ್ರಾಮದಲ್ಲಿ ಎರಡು ನೀರಿನ ತೊಟ್ಟಿಗಳನ್ನು ನಿರ್ಮಿಸಲಾಗಿದೆ. ಆದರೆ, ಅದಕ್ಕೆ ನೀರಿನ ಸಂಪರ್ಕ ಕಲ್ಪಿಸಿಲ್ಲ. ಇದರಿಂದಾಗಿ ದೇವರು ವರ ಕೊಟ್ಟರೂ ಪೂಜಾರಿ ವರಕೊಡಲಿಲ್ಲ ಎನ್ನುವಂತಾಗಿದೆ ಗ್ರಾಮದ ಸ್ಥಿತಿ’ ಎಂದು ಗ್ರಾಮಸ್ಥರಾದ ಶರಣಬಸವ ಜಾಲಹಳ್ಳಿ, ವೀರಭದ್ರ ಕುಂಬಾರ ಹೇಳುತ್ತಾರೆ.

‘ಬಾವಿ ಅಥವಾ ಕೊಳವೆಬಾವಿಯಿಂದ ಜೆಜೆಎಂ ಟ್ಯಾಂಕ್‌ಗೆ ತಾತ್ಕಾಲಿಕ ಸಂಪರ್ಕ ಕಲ್ಪಿಸಿದಲ್ಲಿ ನಮ್ಮ ಗ್ರಾಮದ ಸಮಸ್ಯೆ ಪರಿಹಾರವಾಗಲಿದೆ’ ಎಂದು ಗ್ರಾಮದ ಲಕ್ಷ್ಮೀಬಾಯಿ ಅಗ್ನಿ ಹಾಗೂ ಸವಿತಾ ಕಟ್ಟಿಮನಿ ಹೇಳುತ್ತಾರೆ.

‘ಇನ್ನೂ ಕೊಡೇಕಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಯನಪಾಳಾ ಗ್ರಾಮದಲ್ಲಿ ಎರಡು ಕೊಳವೆ ಬಾವಿ ಇದ್ದು, ಅದರಲ್ಲಿ ಬರುವ ಜಂಗ್ ಹಾಗೂ ಅಶುದ್ಧ ನೀರನ್ನು ನಿತ್ಯ ಅನಿವಾರ್ಯವಾಗಿ ಬಳಸಲಾಗುತ್ತಿದೆ’ ಎಂದು ಸಮಸ್ಯೆಯ ತೀವ್ರತೆಯ ಕುರಿತು ಗ್ರಾಮ ಪಂಚಾಯಿತಿ ಸದಸ್ಯ ಚಂದ್ರಶೇಖರ ನವಲಿ ಹಾಗೂ ವೆಂಕಟೇಶಗೌಡ ಮಾಲಿಪಾಟೀಲ ರೊಸಿ ಹೇಳುತ್ತಾರೆ.

‘ತಕ್ಷಣಕ್ಕೆ ಇನ್ನೊಂದು ಕೊಳವೆ ಬಾವಿ ವ್ಯವಸ್ಥೆ ಮಾಡಬೇಕು’ ಎಂದು ಯಮನೂರಿ ಡೊಣ್ಣಿಗೇರಿ, ಬೈರಪ್ಪ ಗೊಲ್ಲಪಲ್ಲಿ ಹೇಳುತ್ತಾರೆ.

ತಾಲ್ಲೂಕಿನ ಕರಿಬಾವಿ ಗ್ರಾಮಕ್ಕೆ ಕಳೆದ ಮೂರು ವರ್ಷಗಳ ಹಿಂದೆ ಅಂದಾಜು ₹70 ಲಕ್ಷ ವೆಚ್ಚದಲ್ಲಿ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗಿತ್ತು. ಗ್ರಾಮದ ನೀರಿನ ಮೂಲ ಇಲ್ಲದ್ದರಿಂದಾಗಿ ಅಗ್ನಿ ಗ್ರಾಮದ ಬಳಿಯಿಂದ ಪೈಪ್ ಲೈನ್ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಅರೆಬರೆ ಕಾಮಗಾರಿಯಿಂದಾಗಿ ಇಂದಿಗೂ ಗ್ರಾಮಕ್ಕೆ ಸಂಪೂರ್ಣ ನೀರು ತಲುಪಿಸಲು ಸಾಧ್ಯವಾಗಿಲ್ಲ. ಕಾಮಗಾರಿಗೆ ಗುಣಮಟ್ಟದ ಪೈಪ್ ಗಳನ್ನು ಬಳಸಿಲ್ಲ ಎಂದು ಗ್ರಾಮ ಪಂಚಾಯಿತಿ ಸದಸ್ಯ ಭೀಮಣ್ಣ ಇಂಗಳಗಿ ಗ್ರಾಮಸ್ಥ ನಿಂನಗೌಡ ಬಿರಾದಾರ ದೂರುತ್ತಾರೆ.

ಇನ್ನೂ ಕಾಮನಟಗಿ ಗ್ರಾಪಂ ವ್ಯಾಪ್ತಿಯ ಕನಗಂಡನಹಳ್ಳಿಯ ಸ್ಥಿತಿಯೂ ಇದಕ್ಕೆ ಭಿನ್ನವಾಗಿಲ್ಲ. ಕೂಡಲೇ ಅಧಿಕಾರಿಗಳು ನೀರಿನ ವ್ಯವಸ್ಥೆ ಮಾಡಲಿ ಎಂದು ಗ್ರಾಮೀಣ ಜನತೆ ಮನವಿ ಮಾಡಿದ್ದಾರೆ.

ಕಾಲುವೆ ಜಾಲಕ್ಕೆ ಆಗಾಗ ನೀರು ಹರಿಸಿದ್ದರಿಂದ ತಾಲ್ಲೂಕು ವ್ಯಾಪ್ತಿಯ ಹಳ್ಳಕೊಳ್ಳಗಳಲ್ಲಿ ನೀರಿದೆ. ಇದರಿಂದ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿ ಕಾಡುತ್ತಿಲ್ಲ.
ಶ್ರೀನಿವಾಸ ರಾವ, ಹುಣಸಗಿ ನಿವಾಸಿ
ಹುಣಸಗಿ ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳ ಕುರಿತು ಈಗಾಗಲೇ ಮಾಹಿತಿ ಪಡೆಯಲಾಗಿದೆ. ಕುಡಿಯುವ ನೀರಿನ ತೊಂದರೆಯಾಗದಂತೆ ಕೂಡಲೇ ಕ್ರಮ ಕೈಗೊಳ್ಳಲಾಗುವದು
ಬಸಣ್ಣ ನಾಯಕ, ತಾಪಂ ಇಒ ಹುಣಸಗಿ
ಹುಣಸಗಿ ತಾಲ್ಲೂಕಿನ ಬೊಮ್ಮನಗುಡ್ಡ ಗ್ರಾಮದ ಹೊರವಲಯದಲ್ಲಿರುವ ಶಾಲೆಯ ಆವರಣದಿಂದ ನೀರು ತರುತ್ತಿರುವ ಗ್ರಾಮಸ್ಥರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.