ADVERTISEMENT

ಸಾಮಾಜಿಕ ನ್ಯಾಯ, ನೈತಿಕತೆ ಕೊಡಿಸಿದ ಅಂಬೇಡ್ಕರ್

ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಮಲ್ಲೇಶಿ ಸಜ್ಜನ್ ಅಭಿಮತ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2018, 15:44 IST
Last Updated 12 ಡಿಸೆಂಬರ್ 2018, 15:44 IST
ಯಾದಗಿರಿಯಲ್ಲಿ ಬುಧವಾರ ದಲಿತ ಸಂಘರ್ಷ ಸಮಿತಿ ಬುಧವಾರ ಹಮ್ಮಿಕೊಂಡಿದ್ದ ಡಾ.ಬಿ.ಆರ್. ಅಂಬೇಡ್ಕರ್‌ ಅವರ 62ನೇ ಮಹಾಪರಿನಿರ್ವಾಣ ದಿನಾಚರಣೆಯನ್ನು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಮಲ್ಲೇಶಿ ಸಜ್ಜನ್ ಉದ್ಘಾಟಿಸಿದರು
ಯಾದಗಿರಿಯಲ್ಲಿ ಬುಧವಾರ ದಲಿತ ಸಂಘರ್ಷ ಸಮಿತಿ ಬುಧವಾರ ಹಮ್ಮಿಕೊಂಡಿದ್ದ ಡಾ.ಬಿ.ಆರ್. ಅಂಬೇಡ್ಕರ್‌ ಅವರ 62ನೇ ಮಹಾಪರಿನಿರ್ವಾಣ ದಿನಾಚರಣೆಯನ್ನು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಮಲ್ಲೇಶಿ ಸಜ್ಜನ್ ಉದ್ಘಾಟಿಸಿದರು   

ಯಾದಗಿರಿ: ‘ಯಾರೂ ವಿಚಾರ ಮಾಡದ ಸಾಮಾಜಿಕ ನ್ಯಾಯದ ನೈತಿಕತೆ ಬಗ್ಗೆ ಅರಿವು ಮೂಡಿಸಿದ ಮೊಟ್ಟ ಮೊದಲ ವ್ಯಕ್ತಿ ಅಂಬೇಡ್ಕರ್‌ ಆಗಿದ್ದಾರೆ ’ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಮಲ್ಲೇಶಿ ಸಜ್ಜನ್ ಅಭಿಪ್ರಾಯ ಪಟ್ಟರು.

ನಗರದ ಚರ್ಚ ಹಾಲ್ ನಲ್ಲಿ ದಸಂಸ ಕ್ರಾಂತಿಕಾರಿ ಬಣದಿಂದ ಏರ್ಪಡಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್‌ ಅವರ 62ನೇ ಮಹಾಪರಿನಿರ್ವಾಣ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಭಾರತೀಯ ಸಮಾಜದಲ್ಲಿ ಪ್ರಮುಖ ನಾಲ್ಕು ಚಿಂತನಧಾರೆಗಳ ಬಗ್ಗೆ ಮಾತನಾಡುತ್ತೇವೆ. ಮಾರ್ಕ್ಸ್ ಅವರು ಆರ್ಥಿಕತೆ ನೈತಿಕತೆ, ಮಹಾತ್ಮ ಗಾಂಧಿ ಅವರು ವೈಯಕ್ತಿಕ ನೈತಿಕತೆ ಕುರಿತು ಮತ್ತು ಲೋಹಿಯಾ ಅವರು ರಾಜಕೀಯ ನೈತಿಕತೆ ಬಗ್ಗೆ ಧ್ವನಿ ಎತ್ತಿದ್ದರು. ಆದರೆ, ಈ ಎಲ್ಲ ನೈತಿಕತೆಯನ್ನು ಒಳಗೊಂಡಂತೆ ಡಾ.ಬಿ.ಆರ್.ಅಂಬೇಡ್ಕರ್‌ ಅವರು ಸಾಮಾಜಿಕ ನ್ಯಾಯ ನೈತಿಕತೆಯನ್ನು ಕುರಿತು ಸಮಾಜದಲ್ಲಿ ಹೋರಾಟ ಆರಂಭಿಸಿದರು. ಈ ಕಾರಣಕ್ಕಾಗಿಯೇ ಅಸ್ಪೃಷ್ಯತೆಯಿಂದ ನರಳುತ್ತಿದ್ದ ಭಾರತೀಯ ಸಮಾಜ ಇಂದು ಶುದ್ಧವಾಗಲು ಅಂಬೇಡ್ಕರ್‌ ಅವರ ಚಿಂತನೆಗಳು ಕಾರಣವಾಗಿವೆ’ ಎಂದು ವಿಶ್ಲೇಷಿಸಿದರು.

ADVERTISEMENT

‘ಅಂಬೇಡ್ಕರ್ ಈ ದೇಶದ ಸನಾತನ ಹಿಂದೂ ಧರ್ಮವನ್ನು ಆಮೂಲಾಗ್ರವಾಗಿ ಅಧ್ಯಯನ ಮಾಡಿದ್ದರು. ಅದರ ಹರವು ತಿಳಿದುಕೊಂಡೇ ಸಂವಿಧಾನದಲ್ಲಿ ದಲಿತರು–ದಮನಿತರಿಗೆ ಸಮರ್ಪಕವಾಗಿ ಸಾಮಾಜಿಕ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಬಹುವಾಗಿ ಚಿಂತಿಸಿ ಮಂಥಿಸಿ ಸಂವಿಧಾನ ರಚಿಸಿದರು’ ಎಂದರು.

ರಾಜ್ಯ ಸಂಘಟನಾ ಸಂಚಾಲಕ ಅರ್ಜುನ ಭದ್ರೆ ಮಾತನಾಡಿ,‘ಡಾ.ಅಂಬೇಡ್ಕರ್‌ರು ರಚಿಸಿದ ಸಂವಿಧಾನದಲ್ಲಿ ದಲಿತರಿಗೆ ಸಾಮಾಜಿಕ ನ್ಯಾಯ ದೊರಕಿಸಿಕೊಡುವ ಎಲ್ಲ ಅಂಶಗಳು ಅಳವಡಿಸಿದ್ದಾರೆ. ಆದರೆ ಭಾರತದ ಯಾವೊಬ್ಬ ಜಾತಿ ಜನಾಂಗದವರನ್ನೂ ಸಹ ಬಿಡದೇ ಎಲ್ಲರಿಗೂ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸಂವಿಧಾನ ರಚಿಸಿದ್ದಾರೆ. ಹೀಗಾಗಿ ಸಂವಿಧಾನ ಆಧುನಿಕ ಭಾರತದ ಧರ್ಮಗ್ರಂಥವಾಗಿದೆ’ ಎಂದು ಹೇಳಿದರು.

ಮಾಜಿ ನಗರಸಭೆ ಸದಸ್ಯ ಮರೆಪ್ಪ ಚಟ್ಟೇರಕರ್ ಮಾತನಾಡಿ,‘ದಮನಿತರಿಗೆ ಸಂವಿಧಾನವೇ ಪ್ರಬಲ ಅಸ್ತ್ರವಾಗಿದೆ. ಅದನ್ನು ಬಳಸಿಕೊಂಡು ದಲಿತರು ಮುಂದೆ ಬರಲು ಸಾಧ್ಯವಾಯಿತು’ ಎಂದರು.

ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಪ್ರಾಸ್ತಾವಿಕವಾಗಿ ಮಾತನಾಡಿದರು

ಜಿಲ್ಲಾ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಅಧಿಕಾರಿ ಶರಣಪ್ಪ ಪಾಟೀಲ್, ಡಾ. ಭಗವಂತ ಅನವಾರ, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹಣುಮೇಗೌಡ ಬೀರನಕಲ್, ನಗರಸಭೆ ಸದಸ್ಯರಾದ ಸ್ವಾಮಿದೇವ ದಾಸನಕೇರಿ, ಶೇಖ್ ಜಕಿಯುದ್ದೀನ್, ಖಾಜಿ ಇಮ್ತಿಯಾಜುದ್ದಿನ್, ಇನಾಯಿತುರ್ ರೆಹಮಾನ, ಭಾಗಪ್ಪ ಖಾನಾಪುರ, ಚಂದ್ರಶೇಖರ ಹಸ್ನಾಪುರ ಇದ್ದರು.

ಮಲ್ಲಿಕಾರ್ಜುನ ಆಶನಾಳ ಸ್ವಾಗತಿಸಿದರು. ತಾಯಪ್ಪ ಲಿಂಗೇರಿ ಕಾರ್ಯಕ್ರಮ ನಿರೂಪಿಸಿದರು. ಚಂದ್ರಕಾಂತ ಕಂಚಗಾರಹಳ್ಳಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.