ADVERTISEMENT

ಬೇಡಿಕೆ ಈಡೇರಿಕೆಗಾಗಿ 700 ಕಿ.ಮೀ. ಪಾದಯಾತ್ರೆ: ಪ್ರಣವಾನಂದ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2025, 8:14 IST
Last Updated 28 ಡಿಸೆಂಬರ್ 2025, 8:14 IST
ಹುಣಸಗಿ ಪಟ್ಟಣದಲ್ಲಿ ಆರ್ಯ ಈಡಿಗ ಸಮಾಜದ ಸಭೆಯ ಬಳಿಕ ಭಿತ್ತಿಚಿತ್ರ ಬಿಡುಗಡೆ ಮಾಡಲಾಯಿತು. ಬ್ರಹ್ಮಶ್ರೀ ನಾರಾಯಣ ಗುರುಶಕ್ತಿ ಪೀಠದ ಪ್ರಣವಾನಂದ ಸ್ವಾಮೀಜಿ ಹಾಜರಿದ್ದರು
ಹುಣಸಗಿ ಪಟ್ಟಣದಲ್ಲಿ ಆರ್ಯ ಈಡಿಗ ಸಮಾಜದ ಸಭೆಯ ಬಳಿಕ ಭಿತ್ತಿಚಿತ್ರ ಬಿಡುಗಡೆ ಮಾಡಲಾಯಿತು. ಬ್ರಹ್ಮಶ್ರೀ ನಾರಾಯಣ ಗುರುಶಕ್ತಿ ಪೀಠದ ಪ್ರಣವಾನಂದ ಸ್ವಾಮೀಜಿ ಹಾಜರಿದ್ದರು   

ಹುಣಸಗಿ: ‘ಸರ್ವ ಜನಾಂಗದವರಿಗೂ ಸಮಪಾಲು–ಸಮಬಾಳು ಒದಗಿಸುಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಹೀಗಾಗಿ ಈಡಿಗ ಸಮುದಾಯದಿಂದ, ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬೃಹತ್‌ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಬ್ರಹ್ಮಶ್ರೀ ನಾರಾಯಣ ಗುರುಶಕ್ತಿ ಪೀಠದ ಪ್ರಣವಾನಂದ ಸ್ವಾಮೀಜಿ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲ್ಲೂಕಿನ ಸಮುದಾಯದ ಜನರೊಂದಿಗೆ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಬಳಿಕ ಪಾದಯಾತ್ರೆಯ ಭಿತ್ತಿಚಿತ್ರ ಬಿಡುಗಡೆಗೊಳಿಸಿ ಮಾತನಾಡಿದರು.

ಈಡಿಗ, ಬಿಲ್ಲವ, ನಾಮಧಾರಿ ಸೇರಿದಂತೆ 26 ಪಂಗಡಗಳಿರುವ ಸಮಾಜವು ಕುಲಕಸುಬನ್ನು ನೆಚ್ಚಿಕೊಂಡು ಬದುಕು ಕಟ್ಟಿಕೊಂಡಿದೆ. ಆದರೆ ಸರ್ಕಾರದ ನಿರ್ಧಾರದಿಂದಾಗಿ ಕುಟುಂಬಗಳು ಸಂಕಷ್ಟದಲ್ಲಿಯೇ ಜೀವನ ನಡೆಸುವಂತಾಗಿದೆ. ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಜ. 6ರಂದು ಕಲಬುರಗಿ ಜಿಲ್ಲೆಯ ಕರದಾಳದಿಂದ ಬೆಂಗಳೂರಿನವರೆಗೆ 41 ದಿನಗಳ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ’ ಎಂದು ಹೇಳಿದರು.

ADVERTISEMENT

‘ರಾಜ್ಯ ಸರ್ಕಾರ ಬ್ರಹ್ಮಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮಕ್ಕೆ ₹ 500 ಕೋಟಿ ಅನುದಾನ ಬಿಡುಗಡೆಗೊಳಿಸಬೇಕು. ಕಲ್ಯಾಣ ಕರ್ನಾಟಕ ಭಾಗದ ಸಂತ್ರಸ್ತ ಈಡಿಗ ಕುಟುಂಬಗಳಿಗೆ 5 ಎಕರೆ ಜಮೀನು ಪ್ರತಿ ಕುಟುಂಬಕ್ಕೆ ಮಂಜೂರು ಮಾಡಬೇಕು. ಸಮಾಜವನ್ನು ಈಗಿರುವ 2ಎ ಯಿಂದ ಎಸ್‌ಟಿ ಮೀಸಲಾತಿಗೆ ಸೇರ್ಪಡೆ ಮಾಡುವಂತೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು. ಬ್ರಹ್ಮಶ್ರೀ ನಾರಾಯಣ ಗುರುಗಳ ಪುತ್ಥಳಿಯನ್ನು ಬೆಂಗಳೂರಿನ ವಿಧಾನಸೌಧದ ಎದುರು ಸ್ಥಾಪಿಸಬೇಕು ಎಂಬ ಬೇಡಿಕೆಗಳಿವೆ’ ಎಂದು ವಿವರಿಸಿದರು.

‘ಸೇಂದಿ ಮಾರಾಟ ಈಡಿಗ ಸಮುದಾಯದ ಕುಲಕಸುಬು. ಆದರೆ 2004ರಲ್ಲಿ ಸೇಂದಿ ನಿಷೇಧ, 2007ರಲ್ಲಿ ಸಾರಾಯಿ ನಿಷೇಧ ಮಾಡಲಾಯಿತು. ಇದರಿಂದ ಸಮುದಾಯದ ವ್ಯವಹಾರಕ್ಕೆ ದೊಡ್ಡ ನಷ್ಟವಾಯಿತು. ಎರಡನ್ನು ನಿಷೇಧ ಮಾಡಿದ ಮೇಲೆ ಸರ್ಕಾರವು, ಸಮುದಾಯಕ್ಕೆ ಪರ್ಯಾಯ ವ್ಯವಸ್ಥೆಯನ್ನು ಮಾಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಆರ್ಯ ಈಡಿಗ ಸಮಾಜ ಅಧ್ಯಕ್ಷ ಬಸಯ್ಯ ಗುತ್ತೇದಾರ, ಹಳ್ಳೆಪ್ಪ ಗುತ್ತೇದಾರ, ಜಿ. ಸೂರ್ಯನಾರಾಯಣ, ತಿಮ್ಮಯ್ಯ ಗುತ್ತೇದಾರ, ಸುಭಾಷ್‌ ಗುತ್ತೇದಾರ, ವಿಜಯಕುಮಾರ, ಬಸಯ್ಯ ಕಲ್ಲದೇವನಹಳ್ಳಿ, ಬಾಳಪ್ಪ ಗುತ್ತೇದಾರ, ಶ್ರೀನಿವಾಸ ಗುತ್ತೇದಾರ ಸೇರಿದಂತೆ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.