ADVERTISEMENT

ಯಾದಗಿರಿ: ಸಂಭ್ರಮದ ‘ಈದ್ ಉಲ್ ಫಿತ್ರ್‌’ ಆಚರಣೆ

ಮಸೀದಿ-ಈದ್ಗಾಗಳಲ್ಲಿ ವಿಶೇಷ ನಮಾಜ್‌; 30 ದಿನಗಳ ಉಪವಾಸ ಕೊನೆ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2024, 15:15 IST
Last Updated 11 ಏಪ್ರಿಲ್ 2024, 15:15 IST
ಯಾದಗಿರಿ ನಗರದ ಈದ್ಗಾದಲ್ಲಿ (ಚಿತ್ತಾಪುರ ರಸ್ತೆಯ ಮಿನಿ ವಿಧಾನಸೌಧ ಹಿಂಭಾಗ) ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು
ಯಾದಗಿರಿ ನಗರದ ಈದ್ಗಾದಲ್ಲಿ (ಚಿತ್ತಾಪುರ ರಸ್ತೆಯ ಮಿನಿ ವಿಧಾನಸೌಧ ಹಿಂಭಾಗ) ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು   

ಯಾದಗಿರಿ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಈದ್‌ ಉಲ್ ಫಿತ್ರ್‌ ಹಬ್ಬವನ್ನು ಗುರುವಾರ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

ನಗರದ ಬಹುತೇಕ ಮಸೀದಿ-ಈದ್ಗಾಗಳಲ್ಲಿ ವಿಶೇಷ ನಮಾಜ್‌, ಪ್ರವಚನ ಬಳಿಕ ಪರಸ್ಪರ ಹಸ್ತಲಾಘವ, ಆಲಿಂಗನ ಮೂಲಕ ಹಬ್ಬದ ಶುಭಾಶಯ ವಿನಿಮಯ ಹಾಗೂ ಮನೆಗಳಲ್ಲಿ ಹಬ್ಬದ ಸಂಭ್ರಮ ಕಂಡುಬಂತು. ಮಕ್ಕಳಿಂದ ಹಿಡಿದು ಹಿರಿಯರ ಸಹಿತ ಉಪವಾಸ ವೃತ ಕೈಗೊಂಡವರು ಹೊಸ ಬಟ್ಟೆಬರೆ ಧರಿಸಿ, ಅತ್ತರ್ ಹಚ್ಚಿ, ವಿಶಿಷ್ಟ ಬಗೆಯ ತಿಂಡಿ-ತಿನಿಸು ತಿಂದು ಹಬ್ಬವನ್ನು ಶ್ರದ್ಧೆಯಿಂದ ಸಂಭ್ರಮಿಸಿದರು.

ನಗರದ ಈದ್ಗಾದಲ್ಲಿ (ಚಿತ್ತಾಪುರ ರಸ್ತೆಯ ಮಿನಿ ವಿಧಾನಸೌಧ ಹಿಂಭಾಗ) ಖಾಜಿ ಮುಹಮ್ಮದ್ ಹಸನ್ ಸಿದ್ದಿಕಿ, ಖುತ್ಭಾ ಕುರಾನ್‌ ಪಾರಾಯಣಗೈದರು‌. ಈದ್ ನಮಾಜ್‌ಗೆ ನೇತೃತ್ವ ವಹಿಸಿದ್ದರು. ಗಂಜ್ ಪ್ರದೇಶ, ಹಳೆ ಬಸ್ ನಿಲ್ದಾಣ ಬಳಿ ಇರುವ ಈದ್ಗಾ ಮೈದಾನಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ADVERTISEMENT

ಗುರುವಾರ ಬೆಳಿಗ್ಗೆ 10 ಗಂಟೆಗೆ ಆರಂಭವಾದ ಪ್ರಾರ್ಥನೆಯಲ್ಲಿ ಸುಮಾರು 3 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. ವಿಶೇಷ ಪ್ರಾರ್ಥನೆ ನಂತರ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

ನಗರದ ಮಸೀದಿ, ಈದ್ಗಾಗಳಲ್ಲಿ ಸಾಮೂಹಿಕ ನಮಾಜು, ಈದ್ ಖುತ್ಭಾ ಈದ್‌ ಸಂದೇಶ, ಪ್ರವಚನ, ಈದ್ ಶುಭಾಶಯ, ನೆರೆಮನೆ ಹಾಗೂ ಸಂಬಂಧಿಕರ ಮನೆಗೆ ಸೌಹಾರ್ದ ಭೇಟಿಯ ಮೂಲಕ ಹಬ್ಬಕ್ಕೆ ಸಂಭ್ರಮ ತಂದರು.

ಒಂದು ತಿಂಗಳು ಕಾಲ ಉಪವಾಸ ವ್ರತ ಕೈಗೊಂಡ ಮುಸ್ಲಿಮರು ಗುರುವಾರ ಹಬ್ಬದ ಸಂಭ್ರಮದಲ್ಲಿ ತೊಡಗಿಸಿಕೊಂಡಿದ್ದರು.

ಯಾದಗಿರಿ ನಗರದ ಈದ್ಗಾದಲ್ಲಿ (ಚಿತ್ತಾಪುರ ರಸ್ತೆಯ ಮಿನಿ ವಿಧಾನಸೌಧ ಹಿಂಭಾಗ) ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು

‘ಫಿತ್ರ್‌ ಅಂಗವಾಗಿ ಜುಬ್ಬಾ, ಪೈಜಾಮ, ಕುರ್ತಾ ಪೈಜಾಮ, ಟೋಪಿ, ರುಮಾಲ್ ಚಪ್ಪಲಿ ಖರೀದಿಸಿದೆ. ಅಲ್ಲದೇ ಹಬ್ಬದ ವಿಶೇಷವಾಗಿ ‘ಇತಾರ್’ ಎನ್ನುವ ವಿಶೇಷ ಸುಗಂಧ ದ್ರವ್ಯ ಖರೀದಿಸಿದೆ. ಹಬ್ಬದಲ್ಲಿ ಹೊಸ ಬಟ್ಟೆ ಧರಿಸಿಕೊಂಡು ಪ್ರಾರ್ಥನೆಗೆ ತೆರಳುವುದೇ ಒಂದು ಖುಷಿ’ ಎಂದು ಮಸೂರ್‌ ಅಹ್ಮದ್‌ ಹೇಳುತ್ತಾರೆ.‌

‘ಫಿತ್ರ್‌ ಎಂದರೆ ದಾನ ಮಾಡುವುದು. ಈ ಹಬ್ಬದಲ್ಲಿ ನಮ್ಮ ಆದಾಯದಲ್ಲಿ ಬಡವರಿಗೆ ದಾನ ಮಾಡುವುದೇ ಪ್ರಮುಖವಾಗಿದೆ. ಶೇಕಡ 2.5 ರಷ್ಟು ದಾನ ಮಾಡುವುದು ನಿಯಮ. ಮೊದಲು ನಮ್ಮ ಆದಾಯದಲ್ಲಿ ಕುಟುಂಬದವರಿಗೆ ದಾನ ಮಾಡಬೇಕು. ನಂತರ ನೆರೆ ಹೊರೆಯವರು, ಅನಂತರ ಬಡವರಿಗೆ ದಾನ ಮಾಡುವುದು ಈ ಹಬ್ಬದಲ್ಲಿ ಪ್ರಮುಖವಾಗಿದೆ’ ಎನ್ನುತ್ತಾರೆ ಅವರು.

‘ದೇಶದಲ್ಲಿ ಮಳೆ ಸಮೃದ್ಧಿಯಾಗಿ ಸುರಿಯಲಿ. ಪ್ರಾಣಿ, ಪಕ್ಷಿಗಳು ನೀರಿಲ್ಲದೇ ಪರದಾಡುತ್ತಿವೆ. ಹೀಗಾಗಿ ಶೀಘ್ರ ಮಳೆಯಾಗಲಿ ಪ್ರಾರ್ಥನೆ ಸಲ್ಲಿಸಲಾಯಿತು’ ಎಂದು ಮನಸ್ಸೂರ ಅಹ್ಮದ್ ಆಫ್ಘಾನಿ ಹೇಳಿದರು.

ಯಾದಗಿರಿ ನಗರದ ರೈಲ್ವೆ ಸ್ಟೇಷನ್‌ ಸಮೀಪದ ಈದ್ಗಾ ಮೈದಾನ ಬಳಿ ಚಿಣ್ಣರು ಸಾಮೂಹಿಕ ಪ್ರಾರ್ಥನೆ ಬಳಿ ಹಸ್ತಲಾಘವ ಮಾಡಿದರು

‘ಮುಸ್ಲಿಮರಿಗೆ ರಂಜಾನ್‌ ಮಾಸ ದೊಡ್ಡದು ಮತ್ತು ಪವಿತ್ರವಾಗಿದೆ. ಬಡವ–ಶ್ರೀಮಂತ ಎನ್ನದೆ ಎಲ್ಲರೂ ಕೂಡ ಉಪವಾಸ ಆಚರಿಸುವ ಮೂಲಕ ಮನಶುದ್ಧಿ ಮಾಡಿಕೊಳ್ಳುವ ಸಂದರ್ಭ ಇದಾಗಿದೆ ಎಂದು ಸಾಜೀದ್‌ ಹಯ್ಯಾತ್‌ ಹೇಳುತ್ತಾರೆ.

ಯಾದಗಿರಿ ನಗರದ ರೈಲ್ವೆ ಸ್ಟೇಷನ್‌ ಸಮೀಪದ ಈದ್ಗಾ ಮೈದಾನ ಬಳಿ ಚಿಣ್ಣರು ಸಾಮೂಹಿಕ ಪ್ರಾರ್ಥನೆ ಬಳಿ ಹಸ್ತಲಾಘವ ಮಾಡಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.