ADVERTISEMENT

ಯರಗೋಳ | ಕ್ಷೇತ್ರದ ಅಭಿವೃದ್ಧಿಗೆ ಒತ್ತು: ಶಾಸಕ ಶರಣಗೌಡ ಕಂದಕೂರ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2025, 13:48 IST
Last Updated 8 ಏಪ್ರಿಲ್ 2025, 13:48 IST
8yargole10.jpg
8yargole10.jpg   

ಬಾಚವಾರ (ಯರಗೋಳ): ’ಕ್ಷೇತ್ರದ ಜನರ ಬೇಡಿಕೆಗಳನ್ನು ಕೆಲವು ಈಡೇರಿಸಿ, ಇತಿಹಾಸದಲ್ಲಿ ಉಳಿಯುವಂತಹ ಕೆಲಸ ಮಾಡುವ ನಿಟ್ಟಿನಲ್ಲಿ ಸಾಗುತ್ತಿದ್ದೇನೆ’ ಎಂದು ಗುರುಮಿಠಕಲ್ ಮತಕ್ಷೇತ್ರದ ಶಾಸಕ ಶರಣಗೌಡ ಕಂದಕೂರ ಹೇಳಿದರು.

ಗ್ರಾಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ 2024-25ನೇ ಸಾಲಿನ ಕಲ್ಯಾಣ ಪಥ ಯೋಜನೆಯಡಿಯಲ್ಲಿ ಲಿಂಗಸನಹಳ್ಳಿ ತಾಂಡಾದಿಂದ ಹಾಮಾನಾಯಕ ತಾಂಡಾದವರೆಗೆ ₹3.55 ಕೋಟಿ ವೆಚ್ಚದ 4 ಕಿ.ಮೀ ರಸ್ತೆ ನಿರ್ಮಾಣಕ್ಕೆ ಅಡಿಗಲ್ಲು ನೆರವೇರಿಸಿ ಮಾತನಾಡಿದರು.

’7 ವರ್ಷಗಳಲ್ಲಿ ಜನರ ತೊಂದರೆ ಗಮನಿಸಿ, ಅಗತ್ಯಕ್ಕನುಗುಣವಾಗಿ ರಸ್ತೆಗಳನ್ನು ನಿರ್ಮಾಣ ಮಾಡಿ, ಹಾಗೂ ಅಗತ್ಯ ಮೂಲಭೂತ ಸೌಕರ್ಯಗಳನ್ನು ಜನರಿಗೆ ಅನುಕೂಲತೆ ಮಾಡಿಕೊಟ್ಟಿರುವ ಆತ್ಮತೃಪ್ತಿ ನನಗಿದೆ’ ಎಂದು ಹೇಳಿದರು.

ADVERTISEMENT

ಈ ಭಾಗದಲ್ಲಿ ವಿದ್ಯುತ್ ಸಮಸ್ಯೆಯಿಂದ ಜನರಿಗೆ ಕುಡಿಯುವ ನೀರಿನ ಹಾಗೂ ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ತೊಂದರೆಯಾಗಿರುವುದು ಗಮನಕ್ಕೆ ಬಂದಿದೆ. ಜೆಸ್ಕಾಂ ಹಿರಿಯ ಅಧಿಕಾರಿಗೊಂದಿಗೆ ಚರ್ಚಿಸಿ, ಸಮಸ್ಯೆ ಪರಿಹಾರ ಮಾಡಿ ಎಂದು ಸೂಚಿಸಿದ್ದೇನೆ ಎಂದರು.

ಜಲಧಾರೆ ಯೋಜನೆಯಡಿಯಲ್ಲಿ ಗ್ರಾಮದಲ್ಲಿ ಜನಸಂಖ್ಯೆಗನುಗುಣವಾಗಿ ಬೃಹತ್ ನೀರು ಸಂಗ್ರಹ ಘಟಕ ನಿರ್ಮಾಣ ಮಾಡಲಾಗುವುದು. ಇನ್ನೊಂದು ಪ್ರಮುಖ ಬೇಡಿಕೆಯಾದ ಎಕ್ಕೇಳ್ಳಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ನನ್ನ ಅವಧಿ ಮುಗಿಯುದರೊಳಗಾಗಿ ಅನುಷ್ಟಾನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಈಗಾಗಲೇ ಚಾಮನಳ್ಳಿ ಕ್ರಾಸ್‌ನಿಂದ ಯಡ್ಡಳ್ಳಿ ಗ್ರಾಮದವರೆಗೆ ಯಾದಗಿರಿ-ಸೇಡಂ ರಾಜ್ಯ ಹೆದ್ದಾರಿ ರಸ್ತೆ ಅಭಿವೃದ್ಧಿಪಡಿಸಲಾಗಿದೆ,₹ 3 ಕೋಟಿ ವೆಚ್ಚದಲ್ಲಿ ಶೀಘ್ರವೇ ಅಲ್ಲಿಂದ ಸೌಧಾಗರ ಕ್ರಾಸ್‌ವರಗೆ ರಸ್ತೆ ದುರಸ್ತಿಗೊಳಿಸಲಾಗುವುದು. ಜೊತೆಗೆ ಅಪಘಾತವಲಯ ಸ್ಥಳವನ್ನು ₹1 ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೊಂಡು ಸುಗಮ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುವುದು ಎಂದು ತಿಳಿಸಿದರು.

ವೇದಿಕೆ ಮೇಲೆ ಪಿಎಂಜಿಎಸ್‌ವೈ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಪ್ರವೀಣ, ಹತ್ತಿಕುಣಿ ಗ್ರಾ.ಪಂ ಅಧ್ಯಕ್ಷೆ ಅನ್ನಪೂರ್ಣ ಅಮೀನರಡ್ಡಿ ಬಿಳ್ಹಾರ, ಉಪಾಧ್ಯಕ್ಷ ಶೇಖರ ಹೊಸಳ್ಳಿ, ಯರಗೋಳ ಗ್ರಾ.ಪಂ ಅಧ್ಯಕ್ಷ ರಾಮಲಿಂಗಪ್ಪ ಅಲ್ಲಿಪೂರ, ಮುಖಂಡರಾದ ಬೋಜಣ್ಣಗೌಡ ಯಡ್ಡಳ್ಳಿ, ಮಲ್ಲರಡ್ಡಿಗೌಡ ಮಾಲಿ ಪಾಟೀಲ್ ಹತ್ತಿಕುಣಿ, ಅಮೀನರಡ್ಡಿ ಬಿಳ್ಹಾರ, ರವಿ ಪಾಟೀಲ್ ಹತ್ತಿಕುಣಿ, ಮಾಣಿಕಪ್ಪ ಬಾಚವಾರ, ಶ್ರೀಕಾಂತ, ಶಿವಯೋಗಿ, ಭೀಮರಾಯ, ಎಂಜಿನಿಯರ್‌ ಅಂಬರೀಶ ಇದ್ದರು. ಶರಣು ಗಡೇದ ಸ್ವಾಗತಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.