ADVERTISEMENT

ಬಿಸಿಲಿಗೆ ಬಸವಳಿದ ಜನ

ಎಳನೀರು, ಮಜ್ಜಿಗೆ, ಕಲ್ಲಂಗಡಿ ಮೊರೆ; ಮಣ್ಣಿನ ಮಡಿಕೆಗೆ ಹೆಚ್ಚಿದ ಬೇಡಿಕೆ

ಪವನ ಕುಲಕರ್ಣಿ
Published 8 ಏಪ್ರಿಲ್ 2021, 3:51 IST
Last Updated 8 ಏಪ್ರಿಲ್ 2021, 3:51 IST
ಕೆಂಭಾವಿಯಲ್ಲಿ ಎಳನೀರು ಮಾರಾಟ ಮಳಿಗೆ
ಕೆಂಭಾವಿಯಲ್ಲಿ ಎಳನೀರು ಮಾರಾಟ ಮಳಿಗೆ   

ಕೆಂಭಾವಿ: ಬೇಸಿಗೆ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬಾಯಾರಿಕೆ ತೀರಿಸಿಕೊಳ್ಳಲು ಜನರು ತಂಪು ಪಾನೀಯಗಳು ಮೊರೆ ಹೋಗುತ್ತಿದ್ದರೆ, ಗ್ರಾಮೀಣ ಭಾಗಗಳಲ್ಲಿ ಜನರು ಗಿಡಮರಗಳ ಕೆಳಗೆ ಕುಳಿತು ಬಿಸಿಲಿನ ಧಗೆಯಿಂದ
ಪಾರಾಗುತ್ತಿದ್ದಾರೆ.

ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬೆಳಿಗ್ಗೆ 9ರಿಂದಲೇ ಹೆಚ್ಚಾಗುವ ಬಿಸಿಲು ಇಡೀ ದಿನ ಜನರನ್ನು ನಿತ್ರಾಣಗೊಳಿಸುತ್ತಿದೆ. ಪ್ರತಿ ವರ್ಷಕ್ಕಿಂತ ಈ ವರ್ಷ ಬೇಸಿಗೆಯ ಬಿಸಿಲು ಹೆಚ್ಚಾಗಿದೆ.

ಪಟ್ಟಣದ ಎಲ್ಲಾ ರಸ್ತೆಗಳಲ್ಲೂ ಜನರ ಓಡಾಟ ಕಡಿಮೆಯಾಗಿದೆ. ಏಪ್ರಿಲ್ ಆರಂಭದಲ್ಲಿಯೇ 35 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇದೆ. ಇದರ ತಾಪಕ್ಕೆ ಕೆಲವರು ಛತ್ರಿ ಹಿಡಿದುಕೊಂಡು ಝಳದಿಂದ ತಪ್ಪಿಸಿಕೊಂಡರೆ ಇನ್ನೂ ಕೆಲವರು ತಂಪು ಪಾನೀಯಗಳಾದ ಎಳನೀರು, ಮಜ್ಜಿಗೆ, ಷರಬತ್ ಹಾಗೂ ಹಣ್ಣುಗಳನ್ನು ಸೇವಿಸುತ್ತಿರುವುದು ಸಾಮಾನ್ಯವಾಗಿದೆ. ಇದೇ ರೀತಿ ಬೇಸಿಗೆ ಧಗೆ ಹೆಚ್ಚಾಗುತ್ತಾ ಸಾಗಿದರೆ ಮೇ ತಿಂಗಳಿನಲ್ಲಿ ಹೊರಗೆ ನಡೆದಾಡುವುದೇ ಕಷ್ಟವಾಗಲಿದೆ.

ADVERTISEMENT

ಪಟ್ಟಣಕ್ಕೆ ಬರುವ ಜನರು ನೆರಳಿಗಾಗಿ ಹುಡುಕಾಡುವುದು ಸಾಮಾನ್ಯವಾಗಿದೆ. ಮಧ್ಯಾಹ್ನದ ವೇಳೆಗೆ 38 ರಿಂದ 40 ಡಿಗ್ರಿ ವರೆಗೂ ಬಿಸಿಲಿನ ತಾಪಮಾನದಿಂದ ನಗರದ ಹೃದಯ ಭಾಗ ಬಸವೇಶ್ವರ ವೃತ್ತ ಸೇರಿದಂತೆ ಜನದಟ್ಟಣೆ ಪ್ರದೇಶಗಳು ಜನರಿಲ್ಲದೆ ಭಣಗುಡುತ್ತಿವೆ. ಸುತ್ತಮುತ್ತಲಿನ ಗ್ರಾಮಗಳ ವ್ಯಾಪಾರ ವಹಿವಾಟುಗಳಿಗೆ ಕೇಂದ್ರ ಭಾಗವಾಗಿರುವ ಕೆಂಭಾವಿ ಪಟ್ಟಣಕ್ಕೆ ಗ್ರಾಮೀಣ ಭಾಗದ ಜನರು ಬರದೇ ವ್ಯಾಪಾರ ವಹಿವಾಟು ಇಳಿಕೆ ಕಂಡಿದೆ. ಕಿರಾಣಿ, ಜವಳಿ, ಬಂಗಾರದ ಅಂಗಡಿಗಳಲ್ಲಿ ವ್ಯಾಪಾರಸ್ಥರು ಗ್ರಾಹಕರ ಬರುವಿಕೆಗೆ ಕಾಯುವಂತಾಗಿದೆ ಎನ್ನುತ್ತಾರೆ ವರ್ತಕರು.

ತಂಪು ಪಾನೀಯಗಳ ಬೆಲೆ ಏರಿಕೆ: ಬೇಸಿಗೆಯ ತಾಪಮಾನದಿಂದ ಬಸವಳಿದ ಜನ ಬಿಸಿಲಿನ ತಾಪ ನೀಗಿಸಿಕೊಳ್ಳಲು ತಂಪು ಪಾನೀಯಗಳ ಕಡೆಗೆ ಮುಖ ಮಾಡುತ್ತಿದ್ದಾರೆ. ತಂಪು ಪಾನೀಯಗಳ ಬೆಲೆಗಳು ಏರಿಕೆ ಕಂಡಿದೆ. ಒಂದು ಎಳನೀರಿನ ಬೆಲೆಯು ₹35 ರಿಂದ ₹40 ಇದೆ. ಇನ್ನು ಕಲ್ಲಂಗಡಿ ಬೆಲೆಯು ಒಂದು ಪ್ಲೇಟ್‍ಗೆ ₹15 ರಿಂದ ₹20 ಇದ್ದರೂ ತೆಗೆದುಕೊಳ್ಳುವ ಜನರು ಮಾತ್ರ ಕಡಿಮೆಯಾಗಿಲ್ಲ. ಇನ್ನು ಮಜ್ಜಿಗೆ, ಷರಬತ್, ಹಣ್ಣಿನ ರಸಗಳ ಬೆಲೆಯು ಕೂಡಾ ₹30 ರಿಂದ ₹35ಗೆ ಮಾರಾಟವಾಗುತ್ತಿವೆ.

ರಾಜಸ್ಥಾನ ಮಡಿಕೆಗೆ ಬೇಡಿಕೆ: ಬಡವರ ಫ್ರಿಡ್ಜ್‌ ಎಂದು ಕರೆಯಲ್ಪಡುವ ಮಣ್ಣಿನ ಮಡಿಕೆಗಳಿಗೆ ಬೇಡಿಕೆ ಹೆಚ್ಚಾಗಿದೆ. ಅದರಲ್ಲೂ ರಾಜಸ್ಥಾನ ಮಣ್ಣಿನ ಮಡಿಕೆಗಳಿಗೆ ಜನರು ಆಕರ್ಷಿತರಾಗುತ್ತಿದ್ದಾರೆ. ಇಷ್ಟು ದಿನ ಒಂದೇ ಆಕಾರದಲ್ಲಿ ದೊರೆಯುತ್ತಿದ್ದ ಮಡಿಕೆಗಳು ಈಗ ಆಧುನಿಕ ಸ್ಪರ್ಶದಿಂದ ಬಣ್ಣ ಹೊದ್ದುಕೊಂಡು ಚಿತ್ತಾಕರ್ಷವಾಗಿ ಗಮನ ಸೆಳೆಯುತ್ತಿವೆ. ಬಣ್ಣ ಬಣ್ಣದ ಚಿತ್ತಾಕರ್ಷಕವಾದ ಮಣ್ಣಿನ ಮಡಿಕೆಗಳು ದಾರಿಹೋಕರನ್ನು ಕೈಬೀಸಿ ಕರೆಯುತ್ತಿವೆ. ಸಾಧಾರಣ ಮಡಿಕೆಗಳನ್ನು ₹250 ರಿಂದ ₹500 ರವರೆಗೆ ರಾಜಸ್ಥಾನ ಮಡಿಕೆಗಳನ್ನು ₹400 ರಿಂದ ₹600ರವರೆಗೆ ಮಾರಾಟ ಮಾಡಲಾಗುತ್ತಿದೆ. ದಿನ ನಿತ್ಯ 10 ರಿಂದ 15 ಮಡಿಕೆಗಳು ಮಾರಾಟವಾಗುತ್ತಿವೆ ಎಂದು ಮಡಿಕೆ ವ್ಯಾಪಾರಸ್ಥರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.