ADVERTISEMENT

ಯಾದಗಿರಿ: ಪಟ್ಟು ಹಿಡಿದು ಹೋದರು ಬಾರದ ಲೋಕಕ್ಕೆ ನಡೆದರು

ಸ್ವಗ್ರಾಮದಲ್ಲಿ ಮೂವರ ಅಂತ್ಯಕ್ರಿಯೆ ಇಂದು; ತಾಯಂದಿರಿಲ್ಲದೆ ತಬ್ಬಲಿಗಳಾದ ಮಕ್ಕಳು

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2025, 2:38 IST
Last Updated 5 ಅಕ್ಟೋಬರ್ 2025, 2:38 IST
ನಿರ್ಮಲಾ
ನಿರ್ಮಲಾ   

ಮೋಟ್ನಳ್ಳಿ (ಯರಗೋಳ): ‘ಸಾವು ಕೈ ಬೀಸಿ ಕರೆದಿತ್ತು. ಮಕ್ಕಳ ಹಠಕ್ಕೆ ಸೋತು ಏಳು ಸುತ್ತಿನ ಕಲ್ಲಿನ ಕೋಟೆಯನ್ನು ನೋಡಿ, ವಾಪಸ್ ಬೆಂಗಳೂರಿಗೆ ಹೋಗುವಾಗ ಮತ್ತೆಂದೂ ಮರಳಿ ಬಾರದ ಲೋಕಕ್ಕೆ ಮೂವರು ನಡೆದೋದರು...’

...ಇವು ಶುಕ್ರವಾರ (ಸೆಪ್ಟೆಂಬರ್ 3) ದೂರದ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಮೇಟಿಕುರ್ಕೆ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ– 48ರಲ್ಲಿ ಸಂಭವಿಸಿದ್ದ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಮೃತಪಟ್ಟಿರುವ ಕುಟುಂಬದ ಆಪ್ತರ ನೋವಿನ ನುಡಿಗಳು. 

ಮೇಟಿಕುರ್ಕೆ ಗ್ರಾಮದ ಬಳಿ ಸಂಭವಿಸಿದ ಅಪಘಾತದಲ್ಲಿ ಮೋಟ್ನಳ್ಳಿತ ಮಲ್ಲಮ್ಮ, ಸರೋಜಮ್ಮ ಸ್ಥಳದಲ್ಲಿಯೇ ಸಾವಿಗೀಡಾಗಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ನಿರ್ಮಾಲಾ ಪುತ್ರಿ ಸುಪ್ರಿತಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಳು.

ADVERTISEMENT

ಮಲ್ಲಮ್ಮ ಪತಿ ಶಾಂತರಾಜ್, ಪುತ್ರಿ ಸಿಂಚನಾ ಹಾಗೂ ಸರೋಜಮ್ಮ ಪತಿ ಮಲ್ಲಿಕಾರ್ಜುನ ಜಿಂಗಿ ಸೇರಿ ಏಳು ಜನ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಾಂತರಾಜ್ ಮತ್ತು ಮಲ್ಲಿಕಾರ್ಜುನ ಸಹೋದರರು ಕಳೆದ ಹತ್ತು ವರ್ಷಗಳಿಂದ ಬೆಂಗಳೂರಿನಲ್ಲಿ ಇದ್ದು ದುಡಿಯುತ್ತಿದ್ದರು. ಲಗ್ಗೇರಿಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಆಗಾಗ ಸ್ವಗ್ರಾಮಕ್ಕೂ ಬಂದು ಹೋಗುತ್ತಿದ್ದರು. ತಾಯಿಂದಿರು ಇಲ್ಲದೆ ಮಕ್ಕಳು ತಬ್ಬಲಿಯಾದರು ಎಂದು ಹೇಳುತ್ತಲ್ಲೇ ಕುಟುಂಬದ ಆಪ್ತರು ಕಣ್ಣೀರು ಹಾಕಿದರು.

ಪರಿಚಯದ ಎಂಜಿನಿಯರ್ ಒಬ್ಬರು ಓಡಾಡಲು ತಮ್ಮ ಬಳಿ ಇದ್ದ ಕಾರೊಂದನ್ನು ನೀಡಿದ್ದರು. ಮಕ್ಕಳ ಶಾಲೆಗಳಿಗೆ ರಜೆ ಇರುವುದರಿಂದ ಕಾರಿನಲ್ಲಿ ಎಲ್ಲಿಗಾದ ಹೋಗೋಣವೆಂದು ಹಠ ಮಾಡಿದ್ದರು. ಪರಿವಾರದ ಜೊತೆಗೆ ಸೆ.3ರ ಬೆಳಿಗ್ಗೆ ಚಿತ್ರದುರ್ಗದ ಕೋಟೆ ನೋಡಲು ತೆರಳಿದ್ದಾರೆ. ಕಲ್ಲಿನ ಕೋಟೆಯನ್ನು ವೀಕ್ಷಿಸಿ ವಾಪಸ್‌ ಬೆಂಗಳೂರಿಗೆ ಹೋಗುತ್ತಿದ್ದರು. ಮೇಟಿಕುರ್ಕೆ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ– 48ರಲ್ಲಿ ಕಾರಿನ ಹಿಂಬದಿಗೆ ಅಪರಿಚಿತ ವಾಹನವೊಂದು ಗುದ್ದಿದ ಪರಿಣಾಮ ಸ್ಥಳದಲ್ಲಿಯೇ ಇಬ್ಬರು ಹಾಗೂ ಆಸ್ಪತ್ರೆಯಲ್ಲಿ ಒಬ್ಬಳು ಮೃತಪಟ್ಟಿದ್ದಾಳೆ’ ಎಂದು ಕುಟುಂಬದ ಆಪ್ತ ಬಸವಲಿಂಗಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

‘ಅಪಘಾತದಲ್ಲಿ ತೀವ್ರ ಗಾಯಗೊಂಡ 10 ವರ್ಷದ ಬಾಲಕಿ ಸಿಂಚನಾಗೆ ದಾವಣಗೆರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದರು. ಮುಖಕ್ಕೆ ತುರ್ತು ಪ್ಲಾಸ್ಟಿಕ್ ಸರ್ಜರಿ ಮಾಡಬೇಕಾಗಿದ್ದು, ₹ 3 ಲಕ್ಷದ ವೆಚ್ಚ ಭರಿಸುವಂತೆ ಆಸ್ಪತ್ರೆಯ ಸಿಬ್ಬಂದಿ ಕೇಳಿದ್ದರು. ಹಣ ಕಟ್ಟಲು ಆಗದೆ ಬಾಲಕಿಯನ್ನು  ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದೇವೆ’ ಎಂದು ಕುಟುಂಬದ ಸದಸ್ಯರೊಬ್ಬರು ಸಂಕಟ ತೋಡಿಕೊಂಡರು.

ಚಿತ್ರದುರ್ಗದಲ್ಲಿ ನಿರ್ಮಲಾ ಮತ್ತು ಸರೋಜಮ್ಮ ಹಾಗೂ ದಾವಣಗೆರೆಯಲ್ಲಿ ಸುಪ್ರೀತಾ ಶವ ಪರೀಕ್ಷೆ ಮಾಡಲಾಗಿದೆ. ಶನಿವಾರ ತಡರಾತ್ರಿ ಸ್ವಗ್ರಾಮ ಮೋಟ್ನಳ್ಳಿಗೆ ಬರಲಿದ್ದು, ಭಾನುವಾರ ವಿಧಿ ವಿಧಾನಗಳನ್ನು ಮುಗಿಸಿ ಅಂತ್ಯಕ್ರಿಯೆ ನೆರವೇರಿಸಲಾಗುವುದು’ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.