ಯಾದಗಿರಿ: ರೈತರಿಗೆ ಅಗತ್ಯವಿರುವ ಗೊಬ್ಬರ ಪೂರೈಕೆಯಲ್ಲಿ ರಾಜ್ಯ ಸರ್ಕಾರ ವಿಫಲವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರು ತಮ್ಮ ಸ್ಥಾನಗಳಿಗೆ ರಾಜೀನಾಮೆ ಕೊಡಬೇಕು ಎಂದು ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಚಂದ್ರಶೇಖರಗೌಡ ಮಾಗನೂರ ಹೇಳಿದ್ದಾರೆ.
ಕೇಂದ್ರ ಸರ್ಕಾರವು ಯೂರಿಯಾ ಮತ್ತು ಡಿಎಪಿ ರಸಗೊಬ್ಬರವನ್ನು ನಿರೀಕ್ಷೆಗೂ ಮೀರಿ ಪೂರೈಸಿದೆ. ಆದರೆ, ರಾಜ್ಯ ಸರ್ಕಾರವು ರೈತರಿಗೆ ಸಮಯಕ್ಕೆ ಸರಿಯಾಗಿ ಅದನ್ನು ವಿತರಣೆ ಮಾಡುವಲ್ಲಿ ವಿಫಲವಾಗಿದೆ. ಕೇಂದ್ರದಿಂದ ಗೊಬ್ಬರ ಬರುತ್ತಿಲ್ಲವೆಂದು ಮುಖ್ಯಮಂತ್ರಿಗಳು ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ.
ಈ ವರ್ಷ ಮುಂಗಾರು ಬೇಗ ಆರಂಭವಾಗಿದ್ದು, ಏಕಕಾಲದಲ್ಲಿ ಎಲ್ಲೆಡೆ ಬಿತ್ತನೆ ಚಟುವಟಿಕೆಗಳು ನಡೆದಿವೆ. ಸರ್ಕಾರವು ರಾಜ್ಯಕ್ಕೆ ಅಗತ್ಯವಿರುವ ಯೂರಿಯಾ ಮತ್ತು ಬೀಜಗಳ ಪ್ರಮಾಣವನ್ನು ಮುಂಚಿತವಾಗಿ ಅಂದಾಜು ಮಾಡಬೇಕಿತ್ತು. ಆದರೆ, ಗೋದಾಮುಗಳಲ್ಲಿ ಸರಿಯಾಗಿ ದಾಸ್ತಾನು ಮಾಡದೆ, ನಾನಾ ಕಾರಣಗಳನ್ನು ಹೇಳಿ ತಪ್ಪಿಸಿಕೊಳ್ಳುತ್ತಿದೆ ಎಂದಿದ್ದಾರೆ.
ಗ್ಯಾರಂಟಿ ಯೋಜನೆಗಳಲ್ಲಿ ತೊಡಗಿಸಿಕೊಂಡಿರುವ ಸರ್ಕಾರವು ಎಲ್ಲೆಡೆ ಕಾರ್ಯಕ್ರಮಗಳನ್ನು ಆಯೋಜಿಸಿ ಸರ್ಕಾರ ಸಾಕಷ್ಟು ಸಾಧನೆ ಮಾಡಿದೆ ಎಂದು ಬಿಂಬಿಸಿಕೊಳ್ಳುತ್ತಿದೆ. ಆದರೆ, ರೈತರ ಗೊಬ್ಬರದ ಸಂಕಷ್ಟ ಅವರಿಗೆ ಕಾಣಿಸುತ್ತಿಲ್ಲ. ಸರ್ಕಾರದ ನಿರ್ಲಕ್ಷ್ಯದ ಫಲವನ್ನು ರೈತರು ಅನುಭವಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ರೈತ ವಿರೋಧಿಯಾದ ರಾಜ್ಯ ಸರ್ಕಾರವು ಕೃಷಿಕರ ಬಗ್ಗೆ ಜವಾಬ್ದಾರಿಯಿಂದ ಮಾತನಾಡದೆ ಕೇಂದ್ರವನ್ನು ದೂಷಿಸುತ್ತಿದೆ. ರೈತರಿಗೆ ರಸಗೊಬ್ಬರದ ಸಮಸ್ಯೆಯನ್ನು ಪರಿಹರಿಸುವಲ್ಲಿ ಮುಂದಾಗಬೇಕು. ಇಲ್ಲವಾದಲ್ಲಿ ಸಿಎಂ ಹಾಗೂ ಕೃಷಿ ಸಚಿವರು ರಾಜೀನಾಮೆ ನೀಡಬೇಕು ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.