ADVERTISEMENT

ಜಿಲ್ಲೆಯಲ್ಲಿ 14,623 ಕಾರ್ಮಿಕರ ಜ್ವರ ತಪಾಸಣೆ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2020, 17:15 IST
Last Updated 4 ಏಪ್ರಿಲ್ 2020, 17:15 IST
ಯಾದಗಿರಿಯ ಆಯುಷ್‌ ಆಸ್ಪತ್ರೆಯ ಬಳಿ ಜ್ವರ ತಪಾಸಣೆ ಮಾಡಿಕೊಳ್ಳಲು ಬಂದ ಗುಳೆ ಬಂದ ಜನರು ಪಕ್ಕದ ಕಟ್ಟಡದಲ್ಲಿ ನೆರಳಿನ ಆಶ್ರಯ ಪಡೆದರು
ಯಾದಗಿರಿಯ ಆಯುಷ್‌ ಆಸ್ಪತ್ರೆಯ ಬಳಿ ಜ್ವರ ತಪಾಸಣೆ ಮಾಡಿಕೊಳ್ಳಲು ಬಂದ ಗುಳೆ ಬಂದ ಜನರು ಪಕ್ಕದ ಕಟ್ಟಡದಲ್ಲಿ ನೆರಳಿನ ಆಶ್ರಯ ಪಡೆದರು   

ಯಾದಗಿರಿ: ಜಿಲ್ಲೆಯಲ್ಲಿ ಕೋವಿಡ್-19 ವೈರಾಣು ಸೋಂಕು ಹರಡುವಿಕೆಯನ್ನು ಪರಿಣಾಮಕಾರಿಯಾಗಿ ತಡೆಗಟ್ಟುವ ನಿಟ್ಟಿನಲ್ಲಿ ತೆರೆಯಲಾದ ಜ್ವರ ತಪಾಸಣೆ ಕೇಂದ್ರಗಳಲ್ಲಿ ಇಲ್ಲಿಯವರೆಗೆ ಒಟ್ಟು 14,623 ವಲಸೆ ಹಾಗೂ ನಿರ್ಗತಿಕ ಕಾರ್ಮಿಕರ ಜ್ವರ ತಪಾಸಣೆ ಮಾಡಲಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯಾದಗಿರಿ ಆಯುಷ್ ಆಸ್ಪತ್ರೆಯಲ್ಲಿ 4,673, ಭೀಮರಾಯನಗುಡಿ ಯುಕೆಪಿ ಆಸ್ಪತ್ರೆಯಲ್ಲಿ 1,718, ಸುರಪುರದ ನಗರ ಆರೋಗ್ಯ ಕೇಂದ್ರದಲ್ಲಿ 6,813, ಗುರುಮಠಕಲ್‍ನ ಪದವಿ ಮಹಾವಿದ್ಯಾಲಯದಲ್ಲಿ 219, ಹುಣಸಗಿ ತಾಲ್ಲೂಕಿನ ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ 1,200 ಜನರ ಜ್ವರ ತಪಾಸಣೆ ಮಾಡಲಾಗಿದೆ. ಈ ಕೇಂದ್ರಗಳಲ್ಲಿ ವಲಸೆ ಕಾರ್ಮಿಕರು, ಅತೀ ಉಸಿರಾಟದ ತೊಂದರೆ, ಅತೀ ಜ್ವರ ಹೊಂದಿರುವ ಸಾರ್ವಜನಿಕರು ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

344 ಕಾರ್ಮಿಕರಿಗೆ ವಸತಿ ವ್ಯವಸ್ಥೆ: ಬೇರೆ ರಾಜ್ಯ, ಜಿಲ್ಲೆಗೆ ವಲಸೆ ಹೋದಂತಹ ಸಾರ್ವಜನಿಕರು ಹಾಗೂ ಕಾರ್ಮಿಕರು ತಮ್ಮ ಸ್ವಗ್ರಾಮಕ್ಕೆ ಹಿಂತಿರುಗುತ್ತಿದ್ದು, ಇವರಿಗಾಗಿ ಜಿಲ್ಲೆಯ ಆಯಾ ತಾಲ್ಲೂಕುಗಳಲ್ಲಿ ಫುಡ್ ಕ್ಯಾಂಪ್‍ಗಳನ್ನು ತೆರೆಯಲಾಗಿದ್ದು, ಜಿಲ್ಲೆಯಲ್ಲಿ ಒಟ್ಟು 344 ಜನ ವಲಸೆ ಕಾರ್ಮಿಕರಿಗೆ ಆಹಾರ ಮತ್ತು ವಸತಿ ವ್ಯವಸ್ಥೆ ಮಾಡಲಾಗಿದೆ. ಈ ಪೈಕಿ ಶಹಾಪುರ ಸರ್ಕಾರಿ ಪ್ರಥಮ ದರ್ಜೆ ಪದವಿ ಮಹಾವಿದ್ಯಾಲಯದಲ್ಲಿ 220 ಜನ ವಲಸೆ ಕಾರ್ಮಿಕರಿಗೆ ಮತ್ತು ಸುರಪುರ ತಾಲ್ಲೂಕಿನ ಕೆಂಭಾವಿ ಹೋಬಳಿಯಲ್ಲಿ ಬರುವ ಫುಡ್ ಕ್ಯಾಂಪ್‍ನಲ್ಲಿ 124 ಜನ ವಲಸೆ ಕಾರ್ಮಿಕರಿಗೆ ಆಹಾರ ಮತ್ತು ವಸತಿ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

ಅಗತ್ಯವಸ್ತುಗಳ ದಾನಕ್ಕಾಗಿ ಸಂಪರ್ಕಿಸಿ: ಸಾರ್ವಜನಿಕರಿಗೆ ದಿನಬಳಕೆಯ ಅಗತ್ಯ ವಸ್ತುಗಳಾದ ಆಹಾರ ಧಾನ್ಯಗಳು, ಔಷಧೋಪಕರಣಗಳು ಮತ್ತು ಇನ್ನಿತರ ಅಗತ್ಯ ವಸ್ತುಗಳನ್ನು ನೀಡಲು ಇಚ್ಛಿಸುವ ಸರ್ಕಾರೇತರ ಸಂಸ್ಥೆಗಳು (ಎನ್‍ಜಿಒ), ಸಂಘ- ಸಂಸ್ಥೆಗಳು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಜಿಲ್ಲಾ ಬಾಲ ಕಾರ್ಮಿಕ ಇಲಾಖೆಯ ಯೋಜನಾ ನಿರ್ದೇಶಕ ರಘುವೀರ್‌ಸಿಂಗ್ ಅವರ ಮೊ:94489 11558, 78920 55352 ಮತ್ತು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿ ಶರಣಪ್ಪ ಪಾಟೀಲ ಮೊ:99021 93325 ಮತ್ತು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.