ಶಹಾಪುರ: ಮುಂಗಾರು ಪೂರ್ವ ಮಳೆ ಅನಾಹುತವು ರಸ್ತೆ ಅಪಘಾತದ ಮೂಲಕ ಗುರುವಾರ ಕಾಡಿದೆ.
ರಭಸವಾದ ಗಾಳಿ, ಗುಡುಗು ಸಹಿತ ಮಿಂಚು ಕಾಣಿಸಿಕೊಂಡಾಗ ಮಹಿಂದ್ರಾ ಪಿಕಪ್ ವಾಹನದ ಚಾಲಕ ಗಲಿಬಿಲಿಗೊಂಡು ಎದುಗಡೆಯ ಸಾರಿಗೆ ಬಸ್‌ಗೆ ಡಿಕ್ಕಿಹೊಡೆಸಿದ್ದು, ಈ ದುರ್ಘಟನೆ ಐವರನ್ನು ಬಲಿ ತೆಗೆದುಕೊಂಡಿದೆ.
ಘತ್ತರಗಿ ಭಾಗ್ಯವಂತಿ ದೇವಿಯ ಸನ್ನಿಧಿಯಲ್ಲಿ ಜವಳ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಒಂದೇ ಕುಟುಂಬದ ಸದಸ್ಯರು ಮಸಣಕ್ಕೆ ಸೇರಿದ್ದಾರೆ.
ಯಾದಗಿರಿ ತಾಲ್ಲೂಕಿನ ವರ್ಕನಳ್ಳಿ ಗ್ರಾಮದ ಪಿಕಪ್ ವಾಹನದ ಚಾಲಕ ಶರಣಪ್ಪ ಹಣಮಯ್ಯ ವನಕುಣಿ(30), ಸುನಿತಾ ಮಲ್ಲೇಶಪ್ಪ ಕವಲಿ(19), ಸೋಮವ್ವ ಹಣಮಂತ ಬಿಳಿಚಕ್ರ(50) ತಂಗಮ್ಮ ಹುಲೆಪ್ಪ ಕವಲಿ(55), ಹಣಮಂತಿ ಮಲ್ಲಯ್ಯ(35) ಮೃತರು.
ಗಂಭೀರವಾಗಿ ಗಾಯಗೊಂಡಿದ್ದ ಪಿಕಪ್ ವಾಹನ ಹಾಗೂ ಬಸ್ ಪ್ರಯಾಣಿಕರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಭೀಮರಾಯನಗುಡಿ ಠಾಣೆಯ ಪಿಎಸ್ಐ ಮಹಾಂತೇಶ ಪಾಟೀಲ ಮಾಹಿತಿ ನೀಡಿದರು. ಭೀಮರಾಯನಗುಡಿ ಠಾಣೆಯಲ್ಲಿ ದೂರು ದಾಖಲಾಗಿದೆ.
ಗಾಯಾಳು ಸಾವು: ಮಹಿಂದ್ರಾ ಪಿಕಪ್ ಹಾಗೂ ಸಾರಿಗೆ ರಸ್ತೆ ಬಸ್ ನಡುವೆ ಗುರುವಾರ ನಡೆದ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಹಣಮಂತಿ ಮಲ್ಲಯ್ಯ(35) ಶುಕ್ರವಾರ ಕಲಬುರಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಅಸುನೀಗಿದ್ದಾರೆ ಎಂದು ಭೀಮರಾಯನಗುಡಿ ಠಾಣೆಯ ಪೊಲೀಸ್ ಮೂಲಗಳು ತಿಳಿಸಿವೆ.ಇದರಿಂದ ಮೃತರ ಸಂಖ್ಯೆ ಐದಕ್ಕೆ ಏರಿದೆ.
ಶಹಾಪುರದಲ್ಲಿ ಮರಣೋತ್ತರ ಪರೀಕ್ಷೆ: ರಸ್ತೆ ಅಪಘಾತದಲ್ಲಿ ಗುರುವಾರ ನಾಲ್ವರು ಮೃತಪಟ್ಟಿದ್ದ ವ್ಯಕ್ತಿಗಳ ಮರಣೋತ್ತರ ಪರೀಕ್ಷೆಯನ್ನು ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಶುಕ್ರವಾರ ನೆರವೇರಿಸಿ. ಕುಟುಂಬದ ಸದಸ್ಯರಿಗೆ ಹಸ್ತಾಂತರಿಸಿದೆ ಎಂದು ನಗರ ಸರ್ಕಾರಿ ಆಸ್ಪತ್ರೆಯ ವೈದ್ಯರಾದ ಡಾ.ಗಂಗಾಧರ ಚಟ್ರಕಿ ತಿಳಿಸಿದ್ದಾರೆ.
ಶಾಸಕ ಚೆನ್ನಾರಡ್ಡಿ ಭೇಟಿ: ಯಾದಗಿರಿ ಶಾಸಕ ಚೆನ್ನಾರಡ್ಡಿ ಪಾಟೀಲ ತುನ್ನೂರ ಶುಕ್ರವಾರ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ಕುಟುಂಬದ ಸದಸ್ಯರಿಗೆ ಹಾಗೂ ಗಾಯಾಳುಗಳಿಗೆ ಭೇಟಿಯಾಗಿ ಸಾಂತ್ವನ ಹೇಳಿ ವೈಯಕ್ತಿಕವಾಗಿ ಪರಿಹಾರ ಧನ ನೀಡಿದರು. ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಹೆಚ್ಚಿನ ಪರಿಹಾರ ಒದಗಿಸಲಾಗುವುದು ಎಂದು ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.