ವಡಗೇರಾ ತಾಲ್ಲೂಕಿನ ಹಾಲಗೇರಾ ಸೀಮಾಂತರ ಪ್ರದೇಶದಲ್ಲಿ ಭತ್ತದ ಗದ್ದೆಗೆ ಬೆಂಕಿ ಹಚ್ಚಿ ಒಣ ಹುಲ್ಲನ್ನು ಸುಟ್ಟಿರುವದು.
ವಡಗೇರಾ: ತಾಲ್ಲೂಕಿನ ವ್ಯಾಪ್ತಿಯ ಅನೇಕ ರೈತರು ಭತ್ತವನ್ನು ಕಟಾವು ಆಡಿದ ನಂತರ ಭತ್ತದ ಗದ್ದಗಳಿಗಳಲ್ಲಿ ಉಳಿದ ಒಣ ಹುಲ್ಲಿಗೆ ಬೆಂಕಿ ಹಚ್ಚುತ್ತಿರುವದರಿಂದ ಅದರಿಂದ ಹೊರ ಬರುವ ಹೋಗೆಯಿಂದ ವಾಹನ ಸವಾರರಿಗೆ ಹಾಗೂ ವಾಹನ ಚಾಲಕರಿಗೆ ಬಹಳಷ್ಟು ತೊಂದರೆಯಾಗುತ್ತಿದೆ.
ಅಪಘಾತಗಳು: ಭತ್ತದ ಗದ್ದೆಗಳಿಗೆ ಹೀಗೆ ಬೆಂಕಿ ಹಚ್ಚಿ ಸುಡುವಾಗ ಅದರ ಹೋಗೆ ಸಂಪೂರ್ಣವಾಗಿ ಜಿಲ್ಲಾ ಮುಖ್ಯ ರಸ್ತೆಯ ಮೇಲೆ ಬರುವದರಿಂದ ವಾಹನ ಸವಾರರಿಗೆ ಹಾಗೂ ಚಾಲಕರಿಗೆ ಎದುರಿನಿಂದ ಬರುವ ವಾಹನ ಗೋಚರಿಸದೆ ಇರುವದರಿಂದ ಎಷ್ಟೋ ವೇಳೆ ಅಪಘಾತಗಳಾಗಿವೆ.
ಕಳೆದ ಮೂರು ವರ್ಷಗಳ ಹಿಂದೆ ವಡಗೇರಾ ಕ್ರಾಸ್ ಹತ್ತಿರ ಹೀಗೆ ರಸ್ತೆಗೆ ಬಂದ ಹೋಗೆಯಿಂದ ಬಸ್ ಚಾಲಕನಿಗೆ ಎದುರಿಗೆ ಬರುವ ವಾಹನ ಗೋಚರಿಸದೆ ಇರುವದರಿಂದ ಅಪಘಾತವಾಗಿ ಸ್ಥಳದಲ್ಲಿಯೆ ಒಬ್ಬ ಮಹಿಳೆ ಮೃತ ಪಟ್ಟರೆ ಹಾಲಗೇರಾ ಗ್ರಾಮದ ವ್ಯಕ್ತಿಗೆ ಗಂಭೀರವಾದ ಗಾಯಗಳಾಗಿದ್ದವು.
ಉಳಿತಾಯಕ್ಕಾಗಿ: ಭತ್ತ ಬೆಳೆದ ರೈತರು ಗದ್ದೆಗಳಲ್ಲಿ ಭತ್ತವನ್ನು ಕಟಾವು ಮಾಡಿದ ನಂತರ ನೇಗಿಲನ್ನು ಜಮೀನಿನಲ್ಲಿ ಹೊಡೆದರೆ ಉಳಿದ ಹುಲ್ಲು ಜಮೀನಿನಲ್ಲಿ ಬುಡಮೇಲಾಗಿ ಅದು ಗೊಬ್ಬರವಾಗುತ್ತದೆ . ಆದರೆ ರೈತರು ಇದಕ್ಕಾಗಿ ಹಣವನ್ನು ವ್ಯಯ ಮಾಡಬೇಕಾಗುತ್ತಿದೆ ಈ ಹಣವನ್ನು ಉಳಿಸಲು ಗದ್ದೆಗಳಲ್ಲಿ ಉಳೀದ ಒಣ ಹುಲ್ಲಿಗೆ ಬೆಂಕಿಯನ್ನು ಹಚ್ಚುತಿದ್ದಾರೆ.
ಭಾರತದಲ್ಲಿ ಭತ್ತದ ಒಣಹುಲ್ಲಿನ ಉತ್ಪಾದನೆ, ಮತ್ತು ಕೀಟಗಳನ್ನು ನಿಯಂತ್ರಿಸಲು ಅತ್ಯಂತ ಪರಿಣಾಮಕಾರಿ ವಿಧಾನವಿದೆ ಹೊಲಗಳಲ್ಲಿ ಭತ್ತದ ಒಣ ಹುಲ್ಲನ್ನು ನೇರ ಸುಡುವಿಕೆಯಿಂದ ಮಣ್ಣಿನಲ್ಲಿ ತಾಪಮಾನ, ತೇವಾಂಶ ಮತ್ತು ಸಾವಯವ ಪದಾರ್ಥಗಳ ಅಂಶವನ್ನು ಗಮನಾರ್ಹವಾಗಿ ಬದಲಾಯಿಸುತ್ತದೆ ವಿಶೇಷವಾಗಿ ಮೇಲ್ಮಣ್ಣಿನ ಪದರದಲ್ಲಿ ಹಠಾತ್ ಕುಸಿತಕ್ಕೆ ಕಾರಣವಾಗುತ್ತದೆ ಹಾಗೆಯೆ ಮಣ್ಣಿನ ಫಲವತ್ತತೆಯನ್ನು ರೈತರು ಹಾಳು ಮಾಡುತಿದ್ದಾರೆ ಎಂದು ಕೃಷಿ ಅಧಿಕಾರಿಗಳು ಹೇಳುತ್ತಾರೆ.
ಭತ್ತದ ಗದ್ದಗೆ ಒಣ ಹುಲ್ಲಿಗೆ ಬೆಂಕಿ ಹಚ್ಚುವದನ್ನು ತಪ್ಪಿಸಬೇಕಾದರೆ ಕೃಷಿ ಇಲಾಖೆಯ ಅಧಿಕಾರಿಗಳು ಕಾಲ ಕಾಲಕ್ಕೆ ರೈತರಿಗೆ ಮಾರ್ಗದರ್ಶನ ನೀಡುವದರ ಜತೆಗೆ ಗದ್ದೆಗಳಲ್ಲಿ ಇರುವ ಒಣ ಹುಲ್ಲಿಗೆ ಬೆಂಕಿ ಹಚ್ಚುವದರಿಂದ ಆಗುವ ಹಾನಿಯ ಬಗ್ಗೆ ತಿಳುವಳಿಕೆಯನ್ನು ಮೂಡಿಸಬೇಕು ಎಂಬುವದು ಪ್ರಜ್ಞಾವಂತ ನಾಗರೀಕರ ಅನಿಸಿಕೆಯಾಗಿದೆ.
‘ಭತ್ತದ ಒಣಹುಲ್ಲಿಗೆ ಬೆಂಕಿ ಹಾಕಬೇಡಿ’
‘ಭತ್ತದ ಒಣಹುಲ್ಲಿನ ಕಡ್ಡಿಗಳನ್ನು ಸುಡುವುದರಿಂದ ಮಣ್ಣಿನ ಉಷ್ಣತೆಯು 50-70◦C ವರೆಗೆ ಮೇಲ್ಭಾಗದಲ್ಲಿ 0 ರಿಂದ 3 ಸೆಂ. ಮೀ. ವರೆಗೆ ಹೆಚ್ಚಾಗುತ್ತದೆ. ಇದು ಹೆಟೆರೊಟ್ರೋಫಿಕ್ ಸೂಕ್ಷ್ಮಜೀವಿಗಳಲ್ಲಿ ಶೇ 77ರಷ್ಟು ಇಳಿಕೆಗೆ ಕಾರಣವಾಗುತ್ತದೆ. ಮೇಲ್ಮಣ್ಣಿನ ಪದರದಲ್ಲಿ (0-2.5 cm) ಬ್ಯಾಕ್ಟೀರಿಯಾಗಳ ಸಂಖ್ಯೆಯಲ್ಲಿ ಶೇ 50 ರಷ್ಟು ಕಡಿಮೆಯಾಗುತ್ತದೆ. ಹೀಗಾಗಿ ರೈತರು ಭತ್ತದ ಒಣಹುಲ್ಲಿಗೆ ಬೆಂಕಿ ಹಾಕಬಾರದು’ ಎಂದು ವಡಗೇರಾದ ಕೃಷಿ ಅಧಿಕಾರಿ ರೈತ ಸಂಪರ್ಕ ಕೇಂದ್ರದ ಗಣಪತಿ ಮಾಹಿತಿ ನೀಡಿದರು.
ಭತ್ತದ ಗದ್ದೆಯಲ್ಲಿ ಇರುವ ಒಣ ಹುಲ್ಲಿಗೆ ಬೆಂಕಿ ಹಚ್ಚುವದರಿಂದ ಅದರ ಹೋಗೆಯಿಂದ ವಾಹನ ಸವಾರರಿಗೆ ಹಾಗೂ ಚಾಲಕರಿಗೆ ವಾಹನ ಚಾಲನೆ ಮಾಡುವಾಗ ಸಾಕಷ್ಟು ತೊಂದರೆಯಾಗುತ್ತಿದೆ. ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಇದಕ್ಕೆ ಕಡಿವಾಣ ಹಾಕಬೇಕುಸುರೇಶ ಹವಾಲ್ದಾರ, ದ್ವೀಚಕ್ರ ವಾಹನ ಸವಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.