ADVERTISEMENT

ಕೃಷ್ಣಾ ನದಿ ದಂಡೆಯ ಪ್ರವಾಹ ಇಳಿಮುಖ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2020, 16:27 IST
Last Updated 9 ಆಗಸ್ಟ್ 2020, 16:27 IST

ಶಹಾಪುರ/ ವಡಗೇರಾ: ನಾರಾಯಣಪುರ ಬಸವಸಾಗರದಿಂದ ಕೃಷ್ಣಾ ನದಿಗೆ ನೀರಿನ ಹರಿವು ಇಳಿಮುಖವಾಗಿದೆ. ಎರಡು ದಿನದಿಂದ ನದಿ ದಂಡೆಯ 23 ಗ್ರಾಮಗಳ ಜನತೆ ತುಸು ನಿಟ್ಟುಸಿರು ಬಿಡುವಂತೆ ಆಗಿದೆ. ತಗ್ಗು ಪ್ರದೇಶದ ಜಮೀನುಗಳಿಗೆ ನೀರು ನುಗ್ಗಿದೆ. ಅತಿ ಹೆಚ್ಚು ಹಾನಿಯಾಗಿಲ್ಲ ಎಂದು ಶಹಾಪುರ ತಹಶೀಲ್ದಾರ್ ಜಗನಾಥರಡ್ಡಿ ತಿಳಿಸಿದ್ದಾರೆ.

‘ಇನ್ನೂ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ. ಗ್ರಾಮಸ್ಥರು ನದಿ ದಂಡೆಗೆ ಜಾನುವಾರುಗಳನ್ನು ತೆಗೆದುಕೊಂಡು ಹೋಗಬಾರದು’ ಎಂದು ಅವರು ಮನವಿ ಮಾಡಿದ್ದಾರೆ.

‘ವಡಗೇರಾ ತಾಲ್ಲೂಕಿನ ಗೌಡೂರ, ಯಕ್ಷಿಂತಿ, ಟೊಣ್ಣೂರ, ಐಕೂರ, ಅನಕಸೂಗೂರ ಮುಂತಾದ ಗ್ರಾಮಗಳಿಗೆ ನೀರು ಬರುವ ಆತಂಕ ದೂರವಾಗಿದೆ. ಆಯಾ ಗ್ರಾಮದಲ್ಲಿ ನಮ್ಮ ಕಂದಾಯ ಸಿಬ್ಬಂದಿ ನೆಲೆಸಿದ್ದಾರೆ. ಸದ್ಯಕ್ಕೆ ಯಾವುದೇ ತೊಂದರೆ ಇಲ್ಲ' ಎಂದು ವಡಗೇರಾ ತಹಶೀಲ್ದಾರ್ ಸುರೇಶ ಅಂಕಲಗಿ ತಿಳಿಸಿದ್ದಾರೆ.

ಪ್ರವಾಹದಿಂದ ಮೂರು ದಿನದಿಂದ ಶೀತಗಾಳಿ ಬೀಸುತ್ತಿದ್ದು, ಗ್ರಾಮೀಣ ಪ್ರದೇಶದ ಜನತೆಯಲ್ಲಿ ಮಲೇರಿಯಾ, ಡೆಂಗಿಜ್ವರ ಕಾಣಿಸಿಕೊಂಡಿದ್ದು, ಜನತೆ ಪರದಾಡುವಂತೆ ಆಗಿದೆ. ಖಾಸಗಿ ಆಸ್ಪತ್ರೆಗಳು ತುಂಬಿಕೊಂಡಿವೆ. ಅಲ್ಲದೆ ಕೊರೊನಾ ಹಾವಳಿಯಿಂದಲೂ ಹೈರಾಣಗೊಂಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.