ADVERTISEMENT

ಯಾದಗಿರಿ: ಹಿರಿಯರ ನೆರವಿಗೆ ‘ಜಿರಿಯಾಟ್ರಿಕ್’ ಕ್ಲಿನಿಕ್

ಯಾದಗಿರಿಯಲ್ಲಿ ಮೊದಲ ಬಾರಿಗೆ ಪೈಲೆಟ್‌ ಯೋಜನೆಯಡಿ ಆಯ್ಕೆ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2020, 19:31 IST
Last Updated 30 ಸೆಪ್ಟೆಂಬರ್ 2020, 19:31 IST
ಯಾದಗಿರಿ ತಾಲ್ಲೂಕಿನ ಗೋಪಾಳಪುರ ಗ್ರಾಮದಲ್ಲಿ ಹಿರಿಯ ನಾಗರಿಕರ ಸಭೆಯಲ್ಲಿ ಮಾತನಾಡುತ್ತಿರುವ ಮರೆಪ್ಪ ನಂದಿಹಳ್ಳಿ (ಸಂಗ್ರಹ ಚಿತ್ರ)
ಯಾದಗಿರಿ ತಾಲ್ಲೂಕಿನ ಗೋಪಾಳಪುರ ಗ್ರಾಮದಲ್ಲಿ ಹಿರಿಯ ನಾಗರಿಕರ ಸಭೆಯಲ್ಲಿ ಮಾತನಾಡುತ್ತಿರುವ ಮರೆಪ್ಪ ನಂದಿಹಳ್ಳಿ (ಸಂಗ್ರಹ ಚಿತ್ರ)   

ಯಾದಗಿರಿ: ಹಿರಿಯ ನಾಗರಿಕರ ರಕ್ಷಣೆಗಾಗಿ ರಾಷ್ಟ್ರೀಯ ಕಾರ್ಯಕ್ರಮ (ಎನ್‌ಪಿಎಚ್‌ಸಿಇ) ರಾಜ್ಯದಲ್ಲೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಪೈಲೆಟ್‌ ಯೋಜನೆಯ ರೂಪದಲ್ಲಿ ಕಲಿಕೆ ಟಾಟಾ ಟ್ರಸ್ಟ್‌ ವತಿಯಿಂದ ಅನುಷ್ಠಾನಗೊಳ್ಳುತ್ತಿದೆ.

ಯಾದಗಿರಿ ತಾಲ್ಲೂಕಿನ ಎಲ್ಹೇರಿ, ಯರಗೋಳ, ಹತ್ತಿಕುಣಿ ಮತ್ತು ಕೌಳೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ‘ಜಿರಿಯಾಟ್ರಿಕ್’ ಕಾರ್ಯಕ್ರಮ ಅನುಷ್ಠಾನ ಮಾಡಲಾಗಿದ್ದು, ಈ ಭಾಗದ ಹಿರಿಯರಿಗೆ ಆಶಾಕಿರಣವಾಗಿದೆ.

ಹಿರಿಯ ನಾಗರಿಕರಿಗೆ ಕಾಡುವ ಅಧಿಕ ರಕ್ತದೊತ್ತಡ, ಮಧುಮೇಹ, ಪಾರ್ಶ್ವವಾಯು, ಖಿನ್ನತೆಗೆ ಸೇರಿದಂತೆ ವಿವಿಧ ಕಾಯಿಲೆಗಳಿಗೆ ಕಲಿಕಾ ಟಾಟಾ ಟ್ರಸ್ಟ್ ಸರ್ಕಾರದೊಂದಿಗೆ ಕೈಜೋಡಿಸಿ ಚಿಕಿತ್ಸೆ ಮತ್ತು ಮಾರ್ಗದರ್ಶನ ನೀಡುತ್ತದೆ.

ADVERTISEMENT

2018ರ ಡಿಸೆಂಬರ್‌ನಲ್ಲಿ ಜಿಲ್ಲೆಯಲ್ಲಿ ‘ಜಿರಿಯಾಟ್ರಿಕ್’ ಕಾರ್ಯಕ್ರಮ ಶುರುವಾಗಿದ್ದು, 2019ರ ಆಗಸ್ಟ್‌ನಲ್ಲಿ ಕ್ಲಿನಿಕ್‌ ಆರಂಭಗೊಂಡಿದೆ. 2020ರ ಮಾರ್ಚ್‌ ಅಂತ್ಯದವರೆಗೆ 5,000 ಹಿರಿಯ ನಾಗಕರಿಕರು ಇದರ ಪ್ರಯೋಜನ ಪಡೆದಿದ್ದಾರೆ.

‘ಯಾದಗಿರಿ ತಾಲ್ಲೂಕಿನಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯೊಂದಿಗೆ ಕಲಿಕೆ-ಟಾಟಾ ಟ್ರಸ್ಟ್ ಸಂಸ್ಥೆ ಎನ್‌ಪಿಎಚ್‌ಸಿಇ ಕಾರ್ಯಕ್ರಮದಡಿ 2018ರಲ್ಲಿ ಒಡಂಬಡಿಕೆ ಮಾಡಿಕೊಂಡಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವಾರದಲ್ಲಿ ಒಂದು ದಿನ ಜಿರಿಯಾಟ್ರಿಕ್‌ ಕ್ಲಿನಿಕ್‌ ನಡೆಸಲಾಗುತ್ತದೆ’ ಎಂದು ಕಲಿಕೆ ಟಾಟಾ ಟ್ರಸ್ಟ್ ಹಿರಿಯ ಕಾರ್ಯಕ್ರಮ ಸಂಯೋಜಕಮರೆಪ್ಪ ನಂದಿಹಳ್ಳಿ.

‘ಟ್ರಸ್ಟ್‌ ಮೂಲಕ ‘ಜಿರಿಯಾಟ್ರಿಕ್‌’ ಕ್ಲಿನಿಕ್‌ ಆರಂಭಿಸಿದಾಗ 20 ಮಂದಿ ಬರುತ್ತಿದ್ದರು. ಆದರೆ, ಲಾಕ್‌ಡೌನ್‌ಗೂ ಮುನ್ನ 50 ರಿಂದ 70 ಹಿರಿಯರು ನಿಗದಿಪಡಿಸಿದ ದಿನ ಆಯಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಬರುತ್ತಿದ್ದರು’ ಎಂದರು.

ಹತ್ತಿಕುಣಿ, ಮಗ್ದಂಪುರ ಮತ್ತು ಜಿನಕೇರಾ ಗ್ರಾಮದಲ್ಲಿ ಆಯಾ ಗ್ರಾಮ ಪಂಚಾಯಿತಿ ಮತ್ತು ಸಮುದಾಯದ ಸಹಕಾರದೊಂದಿಗೆ ಕಲಿಕೆ ಸಂಸ್ಥೆಯು ಗ್ರಾಮ ಹಿರಿಯರ ಕೇಂದ್ರ ಆರಂಭಿಸಿದೆ. 60 ವರ್ಷ ಮೇಲ್ಪಟ್ಟ ಹಿರಿಯರು ಒಂದೇ ಸೂರಿನಡಿ ಸೇರಿಸಿ, ಮನಸ್ಸಿಗೆ ಮುದ ನೀಡುವ ಚಟುವಟಿಕೆ ಮಾಡಿಸುವುದು ಈ ಕಾರ್ಯಕ್ರಮದ ಉದ್ದೇಶ. ಸರಳ ದೈಹಿಕ ವ್ಯಾಯಾಮ, ಯೋಗ, ಧ್ಯಾನ, ಭಜನೆ, ಕಥೆ ಸೇರಿದಂತೆ ಅನೇಕ ಚಟುವಟಿಕೆಗಳಲ್ಲಿ ತೊಡಿಗಿಸುವ ಕೆಲಸವನ್ನು ಮಾಡುತ್ತಾರೆ.

***

ವಾರದಲ್ಲಿ ಒಂದು ದಿನ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹಿರಿಯರಿಗಾಗಿಯೇ‘ಜಿರಿಯಾಟ್ರಿಕ್’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಡಾ.ವಿರೇಶ ಬಿರಾದಾರ್‌, ಕಾರ್ಯಕ್ರಮ ವ್ಯವಸ್ಥಾಪಕ, ಕಲಿಕೆ ಟಾಟಾ ಟ್ರಸ್ಟ್

***

ಜಿಲ್ಲಾಸ್ಪತ್ರೆಯಲ್ಲಿ ಹಿರಿಯ ನಾಗರಿಕರಿಗಾಗಿ 6 ಬೆಡ್‌ ಮೀಸಲಿಡಲಾಗಿದೆ. ಇಲ್ಲಿ ಹಿರಿಯ ನಾಗರಿಕರಿಗೆ ಚಿಕಿತ್ಸೆ ಮಾತ್ರ ನೀಡಲಾಗುತ್ತಿದೆ
ಡಾ.ನಾರಾಯಣಪ್ಪ, ಜಿಲ್ಲಾ ಶಸ್ತ್ರಚಿಕಿತ್ಸಕ

***

ವಾರದಲ್ಲಿ ಮೂರುದಿನ ಹಿರಿಯರಿಗೆವ್ಯಾಯಾಮ, ಧ್ಯಾನ, ಭಜನೆ, ಮನರಂಜನೆ ನೀಡುವ ಕಾರ್ಯಕ್ರಮ ನೀಡಲಾಗುತ್ತಿದೆ.
ಮರೆಪ್ಪ ನಂದಿಹಳ್ಳಿ, ಹಿರಿಯ ಕಾರ್ಯಕ್ರಮ ಸಂಯೋಜಕ,ಕಲಿಕೆ ಟಾಟಾ ಟ್ರಸ್ಟ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.