ADVERTISEMENT

ಯಾದಗಿರಿ | ನಿರ್ಗತಿಕ ಮಕ್ಕಳ ನೆರವಿಗೆ ಸರ್ಕಾರ

ಸರ್ಕಾರಿ ಬಾಲಕರ ಬಾಲಮಂದಿರ ಉದ್ಘಾಟಿಸಿದ ಶಾಸಕ

​ಪ್ರಜಾವಾಣಿ ವಾರ್ತೆ
Published 26 ಜೂನ್ 2022, 5:36 IST
Last Updated 26 ಜೂನ್ 2022, 5:36 IST
ಯಾದಗಿರಿ ಲಕ್ಷ್ಮೀನಗರದಲ್ಲಿ ಸರ್ಕಾರಿ ಬಾಲಕರ ಬಾಲಮಂದಿರವನ್ನು ಶಾಸಕ ವೆಂಕಟರೆಡ್ಡಿ ಮುದ್ನಾಳ ಉದ್ಘಾಟಿಸಿದರು
ಯಾದಗಿರಿ ಲಕ್ಷ್ಮೀನಗರದಲ್ಲಿ ಸರ್ಕಾರಿ ಬಾಲಕರ ಬಾಲಮಂದಿರವನ್ನು ಶಾಸಕ ವೆಂಕಟರೆಡ್ಡಿ ಮುದ್ನಾಳ ಉದ್ಘಾಟಿಸಿದರು   

ಯಾದಗಿರಿ: ‘ಪಾಲಕರನ್ನು ಕಳೆದುಕೊಂಡು ನಿರ್ಗತಿಕರಾದ ಮಕ್ಕಳಿಗೆ ಸರ್ಕಾರ ಸದಾ ಸಹಾಯಹಸ್ತ ಚಾಚಿ, ಅವರಿಗೆ ನೆರವಾಗುತ್ತಿದೆ’ ಎಂದು ಶಾಸಕ ವೆಂಕಟರೆಡ್ಡಿ ಮುದ್ನಾಳ ಹೇಳಿದರು.

ನಗರದ ಲಕ್ಷ್ಮೀನಗರದಲ್ಲಿ ಮಕ್ಕಳ ರಕ್ಷಣಾ ನಿರ್ದೇಶನಾಲಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವತಿಯಿಂದ ಸರ್ಕಾರಿ ಬಾಲಕರ ಬಾಲಮಂದಿರ ಉದ್ಘಾಟಿಸಿ ಅವರು ಮಾತನಾಡಿದರು.

ಅನಾಥ ಮಕ್ಕಳು, ಏಕ ಪೋಷಕ ಮಕ್ಕಳು, ಬಾಲ್ಯವಿವಾಹದಿಂದ ರಕ್ಷಿಸಿದ ಮಕ್ಕಳು ಪೊಕ್ಸೋ-2015 ದಿಂದ ರಕ್ಷಿಸಿದ ಮಕ್ಕಳು ನಿರ್ಗತಿಕ ಮಕ್ಕಳಲ್ಲಿ ಬಾಲ ಕಾರ್ಮಿಕದಿಂದ ರಕ್ಷಿಸಿದ ಮಕ್ಕಳು, ಪರಿತಕ್ತ ಮಕ್ಕಳನ್ನು, ಇಲ್ಲಿ ಪಾಲನೆ ಮತ್ತು ಪೋಷನೆ ಮಾಡಲಾಗುತ್ತದೆ. ಈ ಮಕ್ಕಳಿಗೆ ಶಿಕ್ಷಣ ಆರೋಗ್ಯ ಮತ್ತು ಪುನರ್ ವಸತಿಯನ್ನು ಒದಗಿಸಲಾಗುತ್ತದೆ ಎಂದು ಹೇಳಿದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಸ್ನೇಹಲ್‌ ಆರ್. ಮಾತನಾಡಿ ಬಾಲಮಂದಿರದ ಕಟ್ಟಡ ಉತ್ತಮವಾಗಿದೆ. ಎಲ್ಲಾ ಮೂಲಭೂತ ಸೌಕರ್ಯಗಳು ಹೊಂದಿದೆ. ಇದರಲ್ಲಿ ಸಾಕಷ್ಟು ಕೋಣೆಗಳಿದ್ದು, ಗ್ರಂಥಾಲಯ ಮಾಡಲು ಅಧಿಕಾರಿಗಳು ಪ್ರಯತ್ನಿಸಬೇಕು. ಮಕ್ಕಳಿಗೆ ಉತ್ತಮ ಪೌಷ್ಟಿಕ ಆಹಾರ ನೀಡಬೇಕು. ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡಬೇಕು ಎಂದರು.

ಬಾಲ ಭವನದ ಮಕ್ಕಳ ಹಿಂದೆ ಜಿಲ್ಲಾಡಳಿತ ಸದಾ ಇರಲಿದೆ ಎಂದ ಅವರು, ಮಕ್ಕಳಿಗೆ ಒಳ್ಳೆಯ ಮಾರ್ಗದರ್ಶನ ಮಾಡುವ ಜವಾಬ್ದಾರಿ ಸಂಬಂಧಪಟ್ಟ ಅಧಿಕಾರಿಗಳು, ಶಿಕ್ಷಕರು ಮತ್ತು ವಾರ್ಡ್‌ನಗಳದ್ದು ಎಂದರು.

ಜಿಲ್ಲಾ ಬಾಲ ನ್ಯಾಯ ಮಂಡಳಿ ಮುಖ್ಯ ಅಧ್ಯಕ್ಷ ಸಿದ್ದರಾಮ ಟಿ.ಪಿ. ಮಾತನಾಡಿ, ಪರೀವಿಕ್ಷಣಾಲಯ ಗೃಹವನ್ನು ಸರ್ಕಾರಕ್ಕೆ ಮಂಜೂರು ಮಾಡಿಸಲು ಕೋರಬೇಕೆಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಮರೇಶ ನಾಯ್ಕ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ವೇದಮೂರ್ತಿ ಮಾತನಾಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಪ್ರಭಾಕರ ಕವಿತಾಳ ವಂದಿಸಿದರು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಲ್ಲಣ್ಣ ದೇಸಾಯಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.