ADVERTISEMENT

ಅಭಿವೃದ್ಧಿ ಕಾಮಗಾರಿ ವಿಳಂಬ ಸಲ್ಲದು

ಅಜಲಾಪುರ: ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷರ ಸೂಚನೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2019, 15:45 IST
Last Updated 2 ಜನವರಿ 2019, 15:45 IST
ಯಾದಗಿರಿ ಸಮೀಪದ ಅಜಲಾಪುರ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಜರುಗಿದ ಸಾಮಾನ್ಯ ಸಭೆಯಲ್ಲಿ ಪಂಚಾಯಿತಿ ಅಧ್ಯಕ್ಷ ಶರಣಬಸವ ಬಿ. ಸ್ವಾಮಿ ಮಾತನಾಡಿದರು
ಯಾದಗಿರಿ ಸಮೀಪದ ಅಜಲಾಪುರ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಜರುಗಿದ ಸಾಮಾನ್ಯ ಸಭೆಯಲ್ಲಿ ಪಂಚಾಯಿತಿ ಅಧ್ಯಕ್ಷ ಶರಣಬಸವ ಬಿ. ಸ್ವಾಮಿ ಮಾತನಾಡಿದರು   

ಯಾದಗಿರಿ: ‘ಗ್ರಾಮೀಣ ಪ್ರದೇಶದ ಜನರಿಗೆ ಮೂಲ ಸೌಲಭ್ಯಗಳನ್ನು ಕಲ್ಪಿಸುವುದು ಗ್ರಾಮ ಪಂಚಾಯಿತಿ ಆದ್ಯ ಕರ್ತವ್ಯವಾಗಿದೆ. ಅಭಿವೃದ್ಧಿ ಕಾರ್ಯಗಳಿಗೆ ವಿಳಂಬ ಮಾಡಬಾರದು‘ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಶರಣಬಸವ ಬಿ. ಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದರು.

ಸಮೀಪದ ಅಜಲಾಪುರ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪಂಚಾಯಿತಿ ವ್ಯಾಪ್ತಿಯಲ್ಲಿನ ಅಜಲಾಪುರ, ಚೆಲ್ಹೇರಿ, ತುರಕಾನದೊಡ್ಡಿ, ಬದ್ದೇಪಲ್ಲಿ ಹಾಗೂ ಬದ್ದೇಪಲ್ಲಿ ತಾಂಡಾಕ್ಕೆ ಅವಶ್ಯವಿರುವ ಕಾಮಗಾರಿಗಳನ್ನು ಲಭ್ಯವಿರುವ ಪಂಚಾಯಿತಿ ಅನುದಾನದಲ್ಲಿ ಕೂಡಲೇ ಆರಂಭಿಸಬೇಕು. ಗ್ರಾಮಗಳಲ್ಲಿ ಪ್ಲಾಸ್ಟಿಕ್‌ ಬಳಕೆ ಹೆಚ್ಚಿದೆ. ಸ್ವಚ್ಛತೆ ದೃಷ್ಟಿಯಿಂದ ಸುಪ್ರೀಂ ಕೋರ್ಟ್ ಆದೇಶ ಇರುವುದರಿಂದ ಪ್ಲಾಸ್ಟಿಕ್ ಬಳಕೆ ನಿಷೇಧಿಸಬೇಕು. ಈ ನಿಟ್ಟಿನಲ್ಲಿ ಜನರಿಗೆ ಜಾಗೃತಿ ಮೂಡಿಸಬೇಕು’ ಎಂದರು.

ADVERTISEMENT

‘ಗಡಿಯಂಚಿನಲ್ಲಿ ಇರುವ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಗ್ರಾಮಗಳಲ್ಲಿ ಅಭಿವೃದ್ಧಿ ಕುಂಠಿತಗೊಂಡಿದೆ ಎಂಬ ಆರೋಪ ವ್ಯಾಪಕವಾಗಿದೆ. ಅಂತಹ ಕಡೆಗಳಲ್ಲಿ ಜನರಿಗೆ ಅಗತ್ಯವಾಗಿ ಬೇಕಿರುವ ಸೌಲಭ್ಯ ಯಾವುದು? ಎಂಬ ಕುರಿತು ಅಧಿಕಾರಿಗಳು ಮತ್ತು ಸದಸ್ಯರು ಗ್ರಾಮ ಪಂಚಾಯಿತಿ ಗಮನಕ್ಕೆ ತಂದರೆ ಕ್ರಿಯಾಯೋಜನೆ ರೂಪಿಸಬಹುದು’ ಎಂದರು ಸಲಹೆ ನೀಡಿದರು.

‘ಗಡಿಗ್ರಾಮಗಳಲ್ಲಿನ ಸರ್ಕಾರಿ ಶಾಲೆಗಳಲ್ಲಿ ಶೈಕ್ಷಣಿ ಗುಣಮಟ್ಟ ಕುಸಿದಿದೆ ಎಂಬ ಆರೋಪ ಕೇಳಿಬರುತ್ತಿವೆ. ಅಲ್ಲಿನ ಸದಸ್ಯರು ಈ ಕುರಿತು ಪರಿಶೀಲಿಸಿ ದೂರು ನೀಡಬಹುದು. ಅಲ್ಲದೇ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗಳು ಉದ್ಭವಿಸಿದರೆ ತತಕ್ಷಣ ಪಿಡಿಒ ಅವರು ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಬೇಕು ’ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಶರಣಬಸವ ಬಿ. ಸ್ವಾಮಿ ಸೂಚಿಸಿದರು.

ಪಶು ಸಂಗೋಪನೆ, ಶಿಕ್ಷಣ, ಕೃಷಿ, ತೋಟಗಾರಿಕೆ, ಶಿಶು ಅಭಿವೃದ್ಧಿ, ಆರೋಗ್ಯ, ಪಂಚಾಯತ್‌ ರಾಜ್ ಇಲಾಖೆಗಳ ಅಧಿಕಾರಿಗಳು ಇಲಾಖೆಗಳು ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿ ಮತ್ತು ಬಿಡುಗಡೆ ಆಗಿರುವ ಅನುದಾನ ಕುರಿತು ಸಭೆಯಲ್ಲಿ ಮಾಹಿತಿ ನೀಡಿದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ದೇವರಾಜ ಚೆಲ್ಹೇರಿ, ಗ್ರಾಮ ಪಂಚಾಯಿತಿ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.