ADVERTISEMENT

ಗ್ರಾಮ ಪಂಚಾಯಿತಿ ನೌಕರರ ಪ್ರತಿಭಟನೆ

ವಿವಿಧ ಬೇಡಿಕೆ ಈಡೇರಿಸಲು ಪಂಚಾಯತ್ ರಾಜ್ ಇಲಾಖೆಗೆ ಮನವಿ

​ಪ್ರಜಾವಾಣಿ ವಾರ್ತೆ
Published 4 ಜೂನ್ 2019, 16:14 IST
Last Updated 4 ಜೂನ್ 2019, 16:14 IST
ಯಾದಗಿರಿ ಜಿಲ್ಲಾ ಪಂಚಾಯಿತಿ ಬಳಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ರಾಜ್ಯಾಧ್ಯಕ್ಷ ಮಾರುತಿ ಮಾನ್ಪಡೆ ಮಾತನಾಡಿದರು
ಯಾದಗಿರಿ ಜಿಲ್ಲಾ ಪಂಚಾಯಿತಿ ಬಳಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ರಾಜ್ಯಾಧ್ಯಕ್ಷ ಮಾರುತಿ ಮಾನ್ಪಡೆ ಮಾತನಾಡಿದರು   

ಯಾದಗಿರಿ: ಗ್ರಾಮ ಪಂಚಾಯಿತಿ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರು ನಗರದ ಜಿಲ್ಲಾ ಪಂಚಾಯಿತಿ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿದರು.

ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ರಾಜ್ಯಾಧ್ಯಕ್ಷ ಮಾರುತಿ ಮಾನ್ಪಡೆ ಮಾತನಾಡಿ, ಗ್ರಾಮ ಪಂಚಾಯಿತಿಯ 61 ಸಾವಿರ ನೌಕರರಿಗೆ ಈಗಿನ ಕನಿಷ್ಠ ಕೂಲಿ ಮತ್ತು ತುಟ್ಟಿ ಭತ್ಯೆ ಸೇರಿ ವೇತನ ನೀಡಲು ₹830 ಕೋಟಿ ಹಣ ಬೇಕಾಗುತ್ತದೆ. ವೇತನಕ್ಕಾಗಿ ಕಳೆದ ವರ್ಷ ನಿಗದಿಯಾಗಿದ್ದ ಹಣದಲ್ಲಿ ರೈತರ ಸಾಲ ಮನ್ನಾದ ಹೆಸರಿನಲ್ಲಿ ₹312 ಕೋಟಿ ಹಣ ಬಿಡುಗಡೆಮಾಡಲು ಸಾಧ್ಯವಾಗಿಲ್ಲ. ವೇತನಕ್ಕಾಗಿ ಬೇಕಾಗುವ ಹೆಚ್ಚುವರಿ ಹಣದ ಬಗ್ಗೆ ಮೇಲ್ಮನವಿ ಸಲ್ಲಿಸಲಾಗಿದೆ. ಪ್ರಧಾನ ಕಾರ್ಯದರ್ಶಿ ಹೆಚ್ಚುವರಿ ಹಣಕ್ಕಾಗಿ ಹಣಕಾಸು ಇಲಾಖೆಗೆ ಪತ್ರ ಬರೆದಿದ್ದಾರೆ. ಕೂಡಲೇ ಹೆಚ್ಚುವರಿ ಹಣ ತಕ್ಷಣ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಪಂಚಾಯಿತಿಗಳಿಗೆ ಮುಳ್ಳು ಬೇಲಿ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.

ಅಪರ ಕಾರ್ಯದರ್ಶಿ ಸ್ವಾಮಿರವರ ವರದಿಯಂತೆ ಎಲ್ಲ ನೌಕರರರಿಗೆ ಏಕಕಾಲದಲ್ಲಿ ಅನುಮೋದನೆ ನೀಡಬೇಕು. ಶೇಕಡ 40 ರಷ್ಟು ಕರ ವಸೂಲಿ ಹಣವನ್ನು ವೇತನ ಖಾತೆಗೆ ಜಮಾ ಮಾಡಬೇಕು. ಇಎಫ್ಎಂಎಸ್ ಸೇರದೆ ಇರುವವರನ್ನು ಇಎಫ್ಎಂಎಸ್ ಸೇರಿಸಬೇಕು ಎಂದು ಅವರು ಒತ್ತಾಯಿಸಿದರು.

ADVERTISEMENT

ಸಿಬ್ಬಂದಿ ವೇತನಕ್ಕೆ ತಕ್ಕಂತೆ ಪ್ರತಿ ಪಂಚಾಯಿತಿಯಿಂದ ವೇತನಕ್ಕೆ ಬೇಕಾಗುವ ಹಣವನ್ನು ಪ್ರಸ್ತಾವನೆ ಸಲ್ಲಿಸುವುದು. ನಿವೃತ್ತಿ ಹೊಂದಿದ ನೌಕರರಿಗೆ ನಿವೃತ್ತಿ ಉಪಧನ ನೀಡಬೇಕು. ಎಲ್ಲಾ ನೌಕರರಿಗೆ ಸೇವಾ ಪುಸ್ತಕ ತೆರೆಯಬೇಕು. ಬಹಳ ದಿನಗಳಿಂದ ನೆನಗುದಿಗೆ ಬಿದ್ದಿರುವ ಸೇವಾ ನಿಯಮಾವಳಿ ರಚಿಸಬೇಕು ಎಂದು ಆಗ್ರಹಿಸಿದರು.

ನಿವೃತ್ತಿ ವೇತನ, ಗಳಿಕೆ ರಜೆ, ವಾರಕ್ಕೊಂದು ವೇತನ ಸಹಿತ ರಜೆ, ವೈದ್ಯಕೀಯ ವೆಚ್ಚ, ಸರ್ಕಾರಿ ನೌಕರರಿಗೆ ನೀಡುವಂತೆ ಎಲ್ಲಾ ನೌಕರರಿಗೆ ನೀಡಬೇಕು. ಪಂಚಾಯಿತಿ ನೌಕರರಿಂದ ಬಿಲ್ ಕಲೆಕ್ಟರ್ ಹುದ್ದೆಗೆ ಬಡ್ತಿ ನೀಡಬೇಕು. ಹೊಸ ಬಿಲ್ ಕಲೆಕ್ಟರ್‌ಗಳನ್ನು ನೇಮಕಾತಿ ಮಾಡಬಾರದು. ಬಿಲ್ ಕಲೆಕ್ಟರ್ ಹುದ್ದೆಯಿಂದ ಗ್ರೇಡ್-2 ಕಾರ್ಯದರ್ಶಿ ಮತ್ತ ಲೆಕ್ಕ ಸಹಾಯಕ ಹುದ್ದೆಗೆ ಬಡ್ತಿ ನೀಡಿ ಖಾಲಿಯಾದ ಗ್ರೇಡ್ -2 ಕಾಯದರ್ಶಿ ಮತ್ತು ಲೆಕ್ಕ ಸಹಾಯಕ ಹುದ್ದೆಗೆ ನೇಮಕಾತಿ ಮಾಡಬೇಕು ಎಂದು ಆಗ್ರಹಿಸಿದರು.

ಮಲ್ಲಣ್ಣ ಬಿರೆದಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೈಲಾಲ್ ತೋಟದಮನಿ, ಗಾಲಿಬಸಾಬ್ ಬೆಳಗೇರಿ, ಬಸವರಾಜ ಕೆ.ದೊರೆ, ಎಸ್.ಎನ್. ನಂದಿಕುಲಮಠ, ಶರೀಫಸಾಬ, ಯಲ್ಪಪ್ಪ ದೇವಾಪುರ, ಸಿದ್ದು ಮೂಡಬೂಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.