ADVERTISEMENT

ಶಹಾಪುರ | ಹೃದಯಾಘಾತ ಹೆಚ್ಚಳಕ್ಕೆ ಆಹಾರ ಪದ್ಧತಿ ಕಾರಣ: ಡಾ.ಮಹೇಶ ಬಿರಾದಾರ

​ಪ್ರಜಾವಾಣಿ ವಾರ್ತೆ
Published 22 ಜುಲೈ 2025, 4:15 IST
Last Updated 22 ಜುಲೈ 2025, 4:15 IST
ಶಹಾಪುರ ತಾಲ್ಲೂಕಿನ ದೋರನಹಳ್ಳಿ ಆರೋಗ್ಯ ಉಚಿತ ತಪಾಸಣಾ ಶಿಬಿರವನ್ನು ಡಿಎಚ್‌ಒ ಡಾ.ಮಹೇಶ ಬಿರಾದಾರ ಉದ್ಘಾಟಿಸಿದರು. ನೌಕರರ ಸಂಘದ ಸದಸ್ಯರು ಉಪಸ್ಥಿತರಿದ್ದರು
ಶಹಾಪುರ ತಾಲ್ಲೂಕಿನ ದೋರನಹಳ್ಳಿ ಆರೋಗ್ಯ ಉಚಿತ ತಪಾಸಣಾ ಶಿಬಿರವನ್ನು ಡಿಎಚ್‌ಒ ಡಾ.ಮಹೇಶ ಬಿರಾದಾರ ಉದ್ಘಾಟಿಸಿದರು. ನೌಕರರ ಸಂಘದ ಸದಸ್ಯರು ಉಪಸ್ಥಿತರಿದ್ದರು   

ಶಹಾಪುರ: ‘ಯೋಗ, ಧ್ಯಾನ, ಸಾತ್ವಿಕ ಆಹಾರ ಉತ್ತಮ ಆರೋಗ್ಯಕ್ಕೆ ಸಹಕಾರಿ. ಜಂಕ್‌ಫುಡ್ಸ್, ಕೃತಕವಾಗಿ ಸಿದ್ಧಪಡಿಸಿದ ಬೇಕರಿ ಆಹಾರ ಪದಾರ್ಥಗಳನ್ನು ಸಂಪೂರ್ಣ ಬಿಟ್ಟುಬಿಡಿ. ಹೃದಯಾಘಾತ ಹೆಚ್ಚಲು ಹದಗೆಟ್ಟ ಆಹಾರ ಪದ್ದತಿಯೇ ಕಾರಣ. ಉತ್ತಮ ಆರೋಗ್ಯ ಭಾಗ್ಯದಿಂದ ಏನಾದರೂ ಸಾಧನೆ ಮಾಡಲು ಸಾಧ್ಯ. ಮಹಿಳೆ ಆರೋಗ್ಯವಾಗಿದ್ದರೆ, ಕುಟುಂಬ, ಊರು, ದೇಶ ಆರೋಗ್ಯವಾಗಿರುತ್ತದೆ’ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಮಹೇಶ ಬಿರಾದಾರ ತಿಳಿಸಿದರು.

ತಾಲ್ಲೂಕಿನ ದೋರನಹಳ್ಳಿ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಸರ್ಕಾರಿ ಮಹಿಳೆಯರ ನೌಕರರ ಸಂಘ, ಸಿಎಚ್‌ಸಿ ದೋರನಹಳ್ಳಿ, ಗ್ರಾಪಂ ದೋರನಹಳ್ಳಿ ಹಾಗೂ ಸರ್ಕಾರಿ ಪ್ರೌಢಶಾಲಾ ಹಳೆ ವಿದ್ಯಾರ್ಥಿಗಳ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಆರೋಗ್ಯ ಉಚಿತ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ರಕ್ತದ ಒತ್ತಡದಿಂದ ಪಾರ್ಶ್ವವಾಯು, ಹೃದಯಾಘಾತದಂತಹ ಗಂಭೀರ ಸಮಸ್ಯೆಗಳು ಕಾಡುತ್ತವೆ. ಆರೋಗ್ಯ ತಪಾಸಣೆಯಿಂದ ಇಂತಹ ರೋಗಗಳನ್ನು ಹತ್ತಿಕ್ಕಬಹುದು. ಮಹಿಳೆಯರಿಗೆ ಕಚೇರಿ, ಮನೆ ಎರಡೂ ಕಡೆ ಕೆಲಸ ಇರುತ್ತದೆ. ಒತ್ತಡಗಳ ಮಧ್ಯೆ ಕೆಲಸ ಮಾಡುವ ಮಹಿಳೆಯರೇ ಪುರುಷರಿಗಿಂತ ಶಕ್ತಿಶಾಲಿ. ವೈಯಕ್ತಿಕ, ಕೌಟುಂಬಿಕ, ವೃತ್ತಿ, ದೈಹಿಕ ನಿರ್ವಹಣೆ ಮುಖ್ಯವಾಗಿದೆ’ ಎಂದು ಅವರು ಸಲಹೆ ನೀಡಿದರು.

ADVERTISEMENT

ಸ್ತ್ರೀರೋಗ ತಜ್ಞೆ ವೈದ್ಯಾಧಿಕಾರಿ ಡಾ.ರಾಜೇಶ್ವರಿ ಗುತ್ತೇದಾರ ಮಾತನಾಡಿ, ‘ಸ್ತನ ಕ್ಯಾನ್ಸರ್ ಚುಚ್ಚುಮದ್ದು ಹಾಕುವ ಮೂಲಕ ತಡೆಗಟ್ಟಬಹುದು. ರಾಜ್ಯದಲ್ಲಿ 13 ಸಾವಿರ ಮಹಿಳೆಯರು ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ₹2,500 ಮಹಿಳೆಯರು ಈಗ ಜೀವತ್ಯಾಗ ಮಾಡಿದ್ದಾರೆ. ಕ್ಯಾನ್ಸರ್ ಚುಚ್ಚುಮದ್ದು ಬೆಲೆ ಖಾಸಗಿಯಾಗಿ ₹21 ಸಾವಿರ ಇದೆ. ಸರ್ಕಾರದಿಂದ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಉಚಿತವಾಗಿ ನೀಡಲಾಗುತ್ತದೆ’ ಎಂದರು.

ವೈದ್ಯರಾದ ಡಾ.ಅರುಣ ಸಿದ್ರಿ, ಡಾ.ಮಲ್ಲನಗೌಡ ಎಸ್.ಪಾಟೀಲ, ಡಾ.ನೀಲಾಂಬಿಕ, ತಾ.ಪಂ.ಇಒ ಬಸವರಾಜ ಶರಬೈ, ಗ್ರಾ.ಪಂ.ಅಧ್ಯಕ್ಷೆ ಚಂದ್ರಾವತಿ ದೊರೆ, ಇಂದಿರಾ ಬಡಿಗೇರ, ಪತ್ರಕರ್ತರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮುದನೂರ, ವಿಶಾಲಕುಮಾರ ಸಿಂಧೆ ಭಾಗವಹಿಸಿದ್ದರು. 

ಆರೋಗ್ಯದಿಂದ ಇದ್ದರೆ ಮಾತ್ರ ಸಾಧನೆ ಸಾಧ್ಯ ಎಂಬ ಉದ್ದೇಶದಿಂದ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿದೆ
ಚಂದ್ರಕಲಾ ಗೂಗಲ್ ಜಿಲ್ಲಾ ಅಧ್ಯಕ್ಷರು ಸರ್ಕಾರಿ ಮಹಿಳಾ ನೌಕರರ ಸಂಘ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.