ADVERTISEMENT

ರಸ್ತೆಯೇ ಚರಂಡಿಯಾದ ಹೊಸಳ್ಳಿ (ಎಂ)

ಸಾಂಕ್ರಾಮಿಕ ರೋಗ ಭೀತಿಯಲ್ಲಿ ಗ್ರಾಮಸ್ಥರು, ಸಮಸ್ಯೆ ಬಗೆಹರಿಸದ ಪಂಚಾಯಿತಿ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2019, 15:51 IST
Last Updated 2 ನವೆಂಬರ್ 2019, 15:51 IST
ಯಾದಗಿರಿ ಸಮೀಪದ ಹೊಸಳ್ಳಿ (ಎಂ) ಗ್ರಾಮದಲ್ಲಿ ಮನೆ ಎದುರಲ್ಲೇ ನಿಂತಿರುವ ಚರಂಡಿ ನೀರು
ಯಾದಗಿರಿ ಸಮೀಪದ ಹೊಸಳ್ಳಿ (ಎಂ) ಗ್ರಾಮದಲ್ಲಿ ಮನೆ ಎದುರಲ್ಲೇ ನಿಂತಿರುವ ಚರಂಡಿ ನೀರು   

ಯಾದಗಿರಿ:ತಾಲ್ಲೂಕಿನ ವರ್ಕನಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಳ್ಳಿ (ಎಂ) ಗ್ರಾಮದಲ್ಲಿ ಚರಂಡಿ ಇದ್ದರೂ ನೀರು ಮುಂದೆ ಹೋಗದೇ ರಸ್ತೆ ತುಂಬ ನಿಲ್ಲುತ್ತವೆ. ಇದರಿಂದ ನೀರು ಹರಿಯಲು ಸ್ಥಳವೇ ಇಲ್ಲದಾಗಿದ್ದು, ಚರಂಡಿ ನೀರೆಲ್ಲ ರಸ್ತೆ ಮೇಲೆ ಸಂಗ್ರಹ ಆಗುತ್ತವೆ. ಇದರಿಂದಗ್ರಾಮಸ್ಥರು ನಡೆದಾಡಲು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ಮನೆಗಳ ಮುಂದೆಚರಂಡಿ ನೀರು ನಿಂತಿರುವುದರಿಂದ ಗಬ್ಬುನಾತ ಬರುತ್ತಿದೆ. ಅಲ್ಲದೆ ವಿಪರೀತ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಇದರಿಂದ ಗ್ರಾಮಸ್ಥರಲ್ಲಿ ಸಾಂಕ್ರಾಮಿಕ ರೋಗ ಭೀತಿ ಎದುರಾಗಿದೆ.ಅಲ್ಲದೆ ಸೊಳ್ಳೆ, ಹಾವು ಮತ್ತು ಚೇಳಿನ ಕಾಟವಿದೆಎನ್ನುತ್ತಾರೆ ಗ್ರಾಮಸ್ಥರು.

ಇಕ್ಕಟ್ಟಾದ ರಸ್ತೆಯಲ್ಲಿಯೇ ಗ್ರಾಮಸ್ಥರು ನಿತ್ಯ ಸಂಚರಿಸುವ ಸ್ಥಿತಿ ಇದೆ. ಉತ್ತಮ ಸಿಸಿ ರಸ್ತೆ ಇಲ್ಲ. ಕಾಲು ದಾರಿಯಂತೆ ಇರುವ ರಸ್ತೆಯಲ್ಲಿಯೇ ಜನರು ಸಂಚರಿಸುತ್ತಾರೆ.

ಇಪ್ಪತ್ತು ರೂಪಾಯಿ ಚಂದಾ:
ಗ್ರಾಮದಲ್ಲಿನ ಈ ಕೊಳಚೆ ನೀರು ಹೊರಗಡೆ ಸಾಗಿಸಲು ಬಡಾವಣೆಯ ನಿವಾಸಿಗಳು ಮನೆ ಮನೆ ತಿರುಗಿ ₹ 20 ಚಂದಾ ವಸೂಲಿ ಮಾಡುತ್ತಿದ್ದಾರೆ. ಗ್ರಾಮದ ಭೀಮನಗೌಡ ಪೊಲೀಸ್‌ ಪಾಟೀಲ ಎಂಬುವರು ಈ ಚರಂಡಿ ನೀರನ್ನು ಬೇರೆಕಡೆ ಸಾಗಿಸಲು ಮೋಟಾರ್‌ ಅಳವಡಿಸಿದ್ದಾರೆ. ಹೀಗಾಗಿ ಗ್ರಾಮಸ್ಥರು ಮೋಟಾರ್‌ಗೆ ಪೆಟ್ರೊಲ್‌ ತರಲು ಮನೆ ಮನೆಗೆ ಚಂದಾ ಎತ್ತುತ್ತಿದ್ದಾರೆ.

ನಡೆದಾಡಲು ಕಲ್ಲು ಸೇತುವೆ:
ಚರಂಡಿ ನೀರು ಹರಿಯುವ ಗ್ರಾಮದ ಮನೆಗಳ ಎದುರು ಜನರು ತಿರುಗಾಡಲು ಚರಂಡಿ ನೀರಲ್ಲಿ ಕಲ್ಲುಗಳನ್ನು ಸೇತುವೆಯಾಗಿ ಹಾಕಿಕೊಂಡಿದ್ದಾರೆ. ಸುಮಾರು 10 ಮನೆಗಳ ಕುಟುಂಬಸ್ಥರು ಈ ಕಲ್ಲುಗಳ ಆಸರೆಯಿಂದಲೇ ಗ್ರಾಮದಲ್ಲಿ ಪ್ರವೇಶ ಮಾಡಬೇಕಾದ ಪರಿಸ್ಥಿತಿ ಇದೆ.

ಚರಂಡಿ ನೀರಿನಲ್ಲೇ ನಿತ್ಯ ಬದುಕು

ಈ ಚರಂಡಿ ನೀರಿನಲ್ಲೇ ನಿತ್ಯ ಬದುಕು ಸಾಗಿಸುವಂತಾಗಿದೆ. ನಮ್ಮ ಸಮಸ್ಯೆಗೆ ಯಾರೂ ಕಿವಿಗೊಡುತ್ತಿಲ್ಲ. ಸೊಳ್ಳೆ ಕಚ್ಚಿ ರೋಗ ಬರುತ್ತಿದೆ ಎನ್ನುತ್ತಾರೆಗ್ರಾಮದ ಗಂಗಮ್ಮ ಹಾಸನಳ್ಳಿ.

ADVERTISEMENT

ಚರಂಡಿ ನೀರು ಬೇರೆಡೆ ಹೋಗಲಿ

ಚರಂಡಿ ನೀರು ಬೇರೆಕಡೆ ಹೋಗುವಂತೆ ಮಾಡಬೇಕು. ಇದರಿಂದ ನಾವು ನಿತ್ಯ ನರಕ ಅನುಭವಿಸುತ್ತಿದ್ದೇವೆ. ಗ್ರಾಮ ಪಂಚಾಯಿತಿಯವರಿಗೆ ಎಷ್ಟು ಹೇಳಿದರೂ ಸಮಸ್ಯೆ ಬಗೆಹರಿಸುತ್ತಿಲ್ಲ ಎನ್ನುತ್ತಾರೆ ಗ್ರಾಮದಸಾಬಮ್ಮ ತುಮಕೂರ

ಕ್ರಿಯಾ ಯೋಜನೆ ತಯಾರಿಸಲಾಗುತ್ತಿದೆ-ಪಿಡಿಒ

ಗ್ರಾಮದಲ್ಲಿ ಚರಂಡಿ ನೀರು ಹರಿಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಈ ನೀರು ಶಾಶ್ವತವಾಗಿ ಗ್ರಾಮದಿಂದ ಹೊರ ಹೋಗಲು ಕ್ರಿಯಾ ಯೋಜನೆ ತಯಾರಿಸಲಾಗುತ್ತಿದೆ. ಅದಾದ ನಂತರ ಕೂಡಲೇ ಸಮಸ್ಯೆ ಬಗೆಹರಿಸುತ್ತೇವೆ ಎಂದುವರ್ಕನಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಪಿ.ವಿಜಯಲಕ್ಷ್ಮಿತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.