ADVERTISEMENT

ಯಾದಗಿರಿ | ನಿವೇಶನ ಅಕ್ರಮ ನೋಂದಣಿ: ಇಬ್ಬರ ಅಮಾನತು

ಶಹಾಪುರ ನಗರಸಭೆಗೆ ₹35.64 ಲಕ್ಷ ನಷ್ಟ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2025, 14:25 IST
Last Updated 28 ಏಪ್ರಿಲ್ 2025, 14:25 IST
<div class="paragraphs"><p>ಅಮಾನತು</p></div>

ಅಮಾನತು

   

ಶಹಾಪುರ : ನಗರದ ವ್ಯಾಪ್ತಿಯ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ (ಐಡಿಎಸ್ ಎಂಟಿ) ಯೋಜನೆಯ ನಿವೇಶನಗಳನ್ನು ಅಕ್ರಮವಾಗಿ ನೋಂದಣಿ ಮಾಡಿದ ಆರೋಪ ಸಾಬೀತಾಗಿದ್ದರಿಂದ ನಗರಸಭೆಯ ಅಂದಿನ ಪೌರಾಯುಕ್ತ ಓಂಕಾರ ಪೂಜಾರಿ ಹಾಗೂ ಎಫ್‌ಡಿಸಿ ಮಾನಪ್ಪ ಅವರನ್ನು ಅಮಾನತು ಮಾಡಲಾಗಿದೆ.

ಸುರಪುರ ಸಮುದಾಯ ಸಂಘಟನಾಧಿಕಾರಿಯಾಗಿ ವರ್ಗಾವಣೆಗೊಂಡಿದ್ದ ಓಂಕಾರ ಪೂಜಾರಿ ಇದುವರೆಗೂ ಹುದ್ದೆಯನ್ನು ಸ್ವೀಕರಿಸಿರಲಿಲ್ಲ. ಅನಧಿಕೃತವಾಗಿ ಗೈರಾಗಿದ್ದು, ಇವರ ವಿರುದ್ಧ ಶಿಸ್ತು ಕ್ರಮಕ್ಕೆ ಪತ್ರ ಬರೆಯಲಾಗಿದೆ. ಅಲ್ಲದೇ ಸಂಘಟನಾಧಿಕಾರಿ ಸೇವೆಯಿಂದ ಅಮಾನತುಗೊಳಿಸಲಾಗಿದೆ.

ADVERTISEMENT

ಶಹಾಪುರ ನಗರಸಭೆಯಲ್ಲಿ ಎಫ್‌ಡಿಸಿಯಾಗಿದ್ದ ಮಾನಪ್ಪ ಸದ್ಯ ಕಕ್ಕೇರಿ ಪುರಸಭೆಯಲ್ಲಿ ವ್ಯವಸ್ಥಾಪಕರಾಗಿದ್ದರು. ತಕ್ಷಣದಿಂದಲೇ ಅವರನ್ನೂ ಅಮಾನತುಗೊಳಿಸಿ ಮುಂದಿನ ಆದೇಶದವರೆಗೆ ಕೊಪ್ಪಳ ನಗರಸಭೆಯಲ್ಲಿ ಕಚೇರಿ ವ್ಯವಸ್ಥಾಪಕರ ಹುದ್ದೆಗೆ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂದು ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕ ಪ್ರಭುಲಿಂಗ ಕವಳಿಕಟ್ಟಿ ಅವರು ಆದೇಶದಲ್ಲಿ ತಿಳಿಸಿದ್ದಾರೆ.

ಏನಿದು ಪ್ರಕರಣ?: ನಗರದ ವ್ಯಾಪ್ತಿಯಲ್ಲಿ ಬರುವ ಐಡಿಎಸ್ ಎಂಟಿ ಯೋಜನೆ ನಿವೇಶನಗಳನ್ನು ಈ ಹಿಂದೆ ಹಂಚಿಕೆ ಮಾಡಲಾಗಿತ್ತು. ಅದರಲ್ಲಿ ಪೂರ್ಣ ಹಣ ಪಾವತಿಸಿರುವ ಹಾಗೂ ಅರ್ಧ ಹಣ ಪಾವತಿಸಿರುವ ನಿವೇಶನಗಳನ್ನು ಉಪ ನೋಂದಣಿ ಕಚೇರಿಯಲ್ಲಿ ನೋಂದಣಿಯಾಗಿರುತ್ತವೆ. ಆದರೆ, ಹಂಚಿಕೆದಾರರ ಬದಲಾಗಿ ಇದೇ ಹೆಸರು ಇರುವ ಬೇರೆ ಅವರಿಗೆ ಕೆಲವು ನಿವೇಶನಗಳನ್ನು 2021–22ನೇ ಸಾಲಿನಲ್ಲಿ ಬೇರೆ ವ್ಯಕ್ತಿಗಳ ಹೆಸರಿಗೆ ನೋಂದಣಿ ಮಾಡಲಾಗಿತ್ತು.

ನಿವೇಶನ ಸಂಖ್ಯೆ 777, 730, 749, 73, 748, 422, 384, 749, 447ಗಳಲ್ಲಿ ಒಟ್ಟು ₹35.64 ಲಕ್ಷ ಮೊತ್ತವನ್ನು ನಗರಸಭೆಯ ಖಾತೆಗೆ ಪಾವತಿ ಮಾಡದಿರುವುದು ತನಿಖಾ ವರದಿಯಿಂದ ಕಂಡು ಬಂದಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.