ADVERTISEMENT

‘ಕಿಸಾನ್ ಸಮ್ಮಾನ್’ ಅನುಷ್ಠಾನಗೊಳಿಸಿ

ರೈತರ ಖಾತೆಗೆ 3 ಕಂತುಗಳಲ್ಲಿ ವರ್ಷಕ್ಕೆ ₹ 6 ಸಾವಿರ ಜಮಾ: ಜಿಲ್ಲಾಧಿಕಾರಿ ಕೂರ್ಮಾರಾವ್

​ಪ್ರಜಾವಾಣಿ ವಾರ್ತೆ
Published 25 ಜೂನ್ 2019, 16:03 IST
Last Updated 25 ಜೂನ್ 2019, 16:03 IST
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅನುಷ್ಠಾನ ಕುರಿತ ಸಭೆಯಲ್ಲಿ ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್ ಮಾತನಾಡಿದರು. ಜಿ. ಪಂ. ಸಿಇಒ ಕವಿತಾ ಎಸ್.ಮನ್ನಿಕೇರಿ, ಹೆಚ್ಚವರಿ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ ಇದ್ದರು
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅನುಷ್ಠಾನ ಕುರಿತ ಸಭೆಯಲ್ಲಿ ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್ ಮಾತನಾಡಿದರು. ಜಿ. ಪಂ. ಸಿಇಒ ಕವಿತಾ ಎಸ್.ಮನ್ನಿಕೇರಿ, ಹೆಚ್ಚವರಿ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ ಇದ್ದರು   

ಯಾದಗಿರಿ: ’ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ‘ ಯೋಜನೆಯಡಿರೈತರ ಹೆಸರನ್ನು ಶೀಘ್ರ ನೋಂದಾಯಿಸಬೇಕು. ಈ ಯೋಜನೆಯಿಂದ ಜಿಲ್ಲೆಯ ಯಾವುದೇ ಅರ್ಹ ರೈತರು ವಂಚಿತರಾಗದಂತೆ ಕ್ರಮ ವಹಿಸುವ ಮೂಲಕ ಯೋಜನೆಯನ್ನು ಅನುಷ್ಠಾನ ಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅನುಷ್ಠಾನ ಕುರಿತು ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ಪ್ರತಿ ರೈತ ಕುಟುಂಬಕ್ಕೆ ಒಂದು ವರ್ಷಕ್ಕೆ ₹ 6,000 ಪ್ರತಿ ನಾಲ್ಕು ತಿಂಗಳಿಗೊಮ್ಮೆಯಂತೆ ಒಟ್ಟು 3 ಸಮಾನ ಕಂತುಗಳಲ್ಲಿ ನೀಡಲು ಉದ್ದೇಶಿಸಲಾಗಿದೆ. ಎರಡನೇಯ ಮತ್ತು ಮೂರನೇಯ ಕಂತುಗಳಿಗೆ ಪದೇಪದೇ ರೈತರ ಮಾಹಿತಿ ಸಂಗ್ರಹಿಸುವ ಅಗತ್ಯವಿರುವುದಿಲ್ಲ. ಆಧಾರ್ ಸಂಖ್ಯೆ ಜೋಡಣೆ ಮಾಡಿದ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮಾ ಆಗುತ್ತದೆ ಎಂದು ಮಾಹಿತಿ ನೀಡಿದರು.

ADVERTISEMENT

ಎರಡು ಸಾವಿರಕ್ಕಿಂತ ಹೆಚ್ಚು ರೈತರು ಇರುವ ಹಳ್ಳಿಗಳಿಗೆ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಲಾಗುವುದು. ಯೋಜನೆಯಡಿ ನೋಂದಾಯಿಸಿ ಕೊಳ್ಳಲು ಪ್ರತಿ ಹಳ್ಳಿಯಲ್ಲಿ ಡಂಗುರ ಸಾರಬೇಕು. ಗ್ರಾಮದ ಸೂಕ್ತವಾದ ಸ್ಥಳದಲ್ಲಿ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‍ಬುಕ್ ನಕಲು ಪ್ರತಿ ಪಡೆದು ಸ್ವಯಂಘೋಷಣಾ ಪತ್ರವನ್ನು ರೈತರ ಸಹಿಯೊಂದಿಗೆ ಭರ್ತಿ ಮಾಡಿ, ಅಪ್‍ಲೋಡ್ ಮಾಡಬೇಕು. ಗ್ರಾಮ ಪಂಚಾಯಿತಿವಾರು ಅರ್ಜಿ ಪಡೆಯುವ ಸಿಬ್ಬಂದಿಗೆ ರೈತರ ಪಟ್ಟಿ ನೀಡುತ್ತಿರುವುದರಿಂದ ಪಹಣಿ ಪಡೆಯುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಕುಟುಂಬದ ಒಬ್ಬರು ಮಾತ್ರ ಈ ಯೋಜನೆಗೆ ಅರ್ಹರು. ರೈತರ ಹೆಸರಿನಲ್ಲಿ ಎಷ್ಟೇ ಜಮೀನು/ ಸರ್ವೇ ನಂಬರ್ ಇದ್ದರೂ ಒಂದೇ ಅರ್ಜಿ ಪರಿಗಣಿಸಲಾಗುತ್ತದೆ. ನಿವೃತಿ ಅಥವಾ ಹಾಲಿ ಸೇವೆಯಲ್ಲಿರುವ ಸರ್ಕಾರಿ ನೌಕರರು (ಗ್ರೂಪ್ ಡಿ ಹೊರತುಪಡಿಸಿ), ಪ್ರತಿ ತಿಂಗಳಿಗೆ ₹ 10 ಸಾವಿರ ಹೆಚ್ಚಿನ ಮೊತ್ತ ಪಡೆಯುತ್ತಿರುವ ಪಿಂಚಣಿದಾರರು, ಆದಾಯ ತೆರಿಗೆ ಪಾವತಿದಾರರು, ವೃತ್ತಿಪರರು (ವೈದ್ಯರು, ಅಭಿಯಂತರರು, ವಕೀಲರು ಮತ್ತು ಇತರೆ), ಮಾಜಿ ಮತ್ತು ಹಾಲಿ ಸಾಂವಿಧಾನಿಕ ಹುದ್ದೆ ಹೊಂದಿದವರು ಈ ಯೋಜನೆಗೆ ಅರ್ಹರಲ್ಲ ಎಂದು ವಿವರಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯ ನಿರ್ವಾಹಕ ಅಧಿಕಾರಿ ಕವಿತಾ ಎಸ್.ಮನ್ನಿಕೇರಿ, ಹೆಚ್ಚವರಿ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ, ಜಂಟಿ ಕೃಷಿ ನಿರ್ದೇಶಕರಾದ ದೇವಿಕಾ ಆರ್., ಸಹಾಯಕ ಆಯುಕ್ತ ಶಂಕರಗೌಡ ಎಸ್.ಸೋಮನಾಳ, ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.