ADVERTISEMENT

ಯಾದಗಿರಿಗೆ ಜಿಲ್ಲೆಯವರೇ ಉಸ್ತುವಾರಿ ಸಚಿವರು

​ಪ್ರಜಾವಾಣಿ ವಾರ್ತೆ
Published 9 ಜೂನ್ 2023, 15:29 IST
Last Updated 9 ಜೂನ್ 2023, 15:29 IST
ಶರಣಬಸಪ್ಪ ದರ್ಶನಾಪುರ
ಶರಣಬಸಪ್ಪ ದರ್ಶನಾಪುರ    

ಯಾದಗಿರಿ: ಜಿಲ್ಲೆಯ ಶಹಾಪುರ ಮತಕ್ಷೇತ್ರದ ಶಾಸಕರಾದ, ಸಚಿವ ಶರಣಬಸಪ್ಪ ದರ್ಶನಾಪುರ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಿ ಸರ್ಕಾರ ಆದೇಶಿಸಿದೆ.

2018ರಿಂದ 2023ರ ಚುನಾವಣೆವರೆಗೆ ಹೊರ ಜಿಲ್ಲೆಯವರೇ ಉಸ್ತುವಾರಿಗಳಾಗಿ ಕಾರ್ಯನಿರ್ವಹಿಸಿದ್ದರು. ಆದರೆ, ಈ ಬಾರಿಯ ಕಾಂಗ್ರೆಸ್‌ ಸರ್ಕಾರದಲ್ಲಿ ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮಗಳ ಸಚಿವರಾಗಿರುವ ದರ್ಶನಾಪುರ ಅವರನ್ನು ನೇಮಿಸುವ ಮೂಲಕ ಜಿಲ್ಲೆಯವರೇ ಉಸ್ತುವಾರಿ ಸಚಿವರಾದಂತೆ ಆಗಿದೆ.

2018ರಲ್ಲಿ ಕಾಂಗ್ರೆಸ್‌–ಜೆಡಿಎಸ್‌ ಸಮ್ಮಿಶ್ರ ಸರ್ಕಾರದಲ್ಲಿ ಹುಮನಾಬಾದ್‌ನ ರಾಜಶೇಖರ ಪಾಟೀಲ ಜಿಲ್ಲಾ ಉಸ್ತುವಾರಿ ಸಚಿವರಾದರು. ಸಮ್ಮಿಶ್ರ ಸರ್ಕಾರ ಪತನವಾದ ನಂತರ ಬಿಜೆಪಿ ಸರ್ಕಾರದಲ್ಲಿ ಪ್ರಭು ಚವಾಣ್‌, ಆರ್‌.ಶಂಕರ್‌, ಬಿ.ಸಿ.ನಾಗೇಶ್‌ ಕೆಲ ಕಾಲ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು.

ADVERTISEMENT

ಜಿಲ್ಲೆಯಲ್ಲಿ ನಾಲ್ಕು ಮತಕ್ಷೇತ್ರಗಳಿದ್ದು, ಮೂರು ಕಡೆ ಕಾಂಗ್ರೆಸ್‌, ಒಂದು ಕಡೆ ಜೆಡಿಎಸ್‌ ಗೆದ್ದಿದೆ. ಶಹಾಪುರ ಮತಕ್ಷೇತ್ರಕ್ಕೆ ಸಚಿವ ಸ್ಥಾನ ಸಿಕ್ಕಿದ್ದು, ಅವರೇ ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕರಾಗಿದ್ದಾರೆ. ಹೀಗಾಗಿ ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ನೀಡುವ ಜವಾಬ್ದಾರಿ ಜಿಲ್ಲಾ ಉಸ್ತುವಾರಿ ಸಚಿವರ ಮೇಲಿದೆ.

ಹೊರ ಜಿಲ್ಲೆಯವರು ಉಸ್ತುವಾರಿಗಳಾಗಿದ್ದವರು ‘ಅತಿಥಿಗಳಂತೆ’ ಕೇವಲ ಧ್ವಜಾರೋಹಣ, ಸಭೆಗಳಿಗೆ ಸಿಮೀತರಾಗಿದ್ದರು. ಆದರೆ, ಈ ಬಾರಿ ಜಿಲ್ಲೆಯವರೇ ಸಚಿವರಾಗಿದ್ದರಿಂದ ಯಾವ ರೀತಿ ಕಾರ್ಯಗಳಾಗಲಿವೆ ಎನ್ನುವುದು ಕಾದು ನೋಡಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.