ADVERTISEMENT

ಯಾದಗಿರಿ। ಕೆರೆಯಂಗಳದಲ್ಲಿ ತಿರಂಗ ಹಾರಾಟ

ಸ್ವಾತಂತ್ರ್ಯ ಮಹೋತ್ಸವ; 15 ‘ಅಮೃತ ಸರೋವರ’ಗಳಲ್ಲಿ ಧ್ವಜಾರೋಹಣ

ಬಿ.ಜಿ.ಪ್ರವೀಣಕುಮಾರ
Published 13 ಆಗಸ್ಟ್ 2022, 2:55 IST
Last Updated 13 ಆಗಸ್ಟ್ 2022, 2:55 IST
ಯಾದಗಿರಿ ತಾಲ್ಲೂಕಿನ ಬಳಿಚಕ್ರ ಗ್ರಾಮದಲ್ಲಿ ಅಮೃತ ಸರೋವರ ಯೋಜನೆಯಲ್ಲಿ ನಿರ್ಮಿಸಿರುವ ಕೆರೆ
ಯಾದಗಿರಿ ತಾಲ್ಲೂಕಿನ ಬಳಿಚಕ್ರ ಗ್ರಾಮದಲ್ಲಿ ಅಮೃತ ಸರೋವರ ಯೋಜನೆಯಲ್ಲಿ ನಿರ್ಮಿಸಿರುವ ಕೆರೆ   

ಯಾದಗಿರಿ: ಸ್ವಾತಂತ್ರ್ಯ ಮಹೋತ್ಸವದ ಅಂಗವಾಗಿ ಈ ಬಾರಿ ಜಿಲ್ಲೆಯ 15 ‘ಅಮೃತ ಸರೋವರ’(ಕೆರೆ) ಗಳಲ್ಲಿ ರಾಷ್ಟ್ರ ಧ್ವಜಾರೋಹಣ ರಾರಾಜಿಸಲಿದೆ.

ಆಜಾದಿ ಕಾ ಅಮೃತ್‌ ಮಹೋತ್ಸವದ ಅಂಗವಾಗಿ ಮಿಷನ್‌ ಅಮೃತ್‌ ಸರೋವರ ಕಾರ್ಯಕ್ರಮದಡಿ ಪ್ರತಿ ಜಿಲ್ಲೆಯಲ್ಲಿ ಕನಿಷ್ಠ 75 ಹೊಸ ಜಲಮೂಲಗಳನ್ನು ನಿರ್ಮಿಸುವಂತೆ ಸರ್ಕಾರ ನಿರ್ದೇಶನ ನೀಡಿದ್ದು, ಪ್ರಸ್ತುತ 15 ಕಡೆಗಳಲ್ಲಿ ಧ್ವಜಾರೋಹಣ ಮಾಡಿಕೊಳ್ಳಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಏನಿದು ಅಮೃತ ಸರೋವರ: ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಲಮೂಲಗಳ ಅಭಿವೃದ್ಧಿ ಹಾಗೂ ನಿರ್ವಹಣೆಗಾಗಿ ಕೇಂದ್ರ ಸರ್ಕಾರ ಆದೇಶದಂತೆ ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಆಯ್ದುಕೊಂಡು ನಿರ್ವಹಿಸುತ್ತಿರುವ 15ಅಮೃತ ಸರೋವರಕೆರೆಗಳಲ್ಲಿ ಈ ಪ್ರಯೋಗ ಮಾಡಲಾಗುತ್ತಿದೆ.

ADVERTISEMENT

ಮಿಷನ್ಅಮೃತಸರೋವರಯೋಜನೆಯು ಗ್ರಾಮೀಣ ಜನರಿಗೆ ಉದ್ಯೋಗ ಕಲ್ಪಿಸುವ ಹಾಗೂ ಆರ್ಥಿಕವಾಗಿ ಸ್ವಾವಲಂಬಿಯಾಗುವಂತೆ ಯೋಜನೆ ಸಿದ್ಧಪಡಿಸಿ, ಗ್ರಾಮೀಣ ಸಮುದಾಯದಲ್ಲಿ ಸಮರ್ಪಕವಾಗಿ ನೀರಿನ ಸಂರಕ್ಷಣೆ ಹಾಗೂ ಸದ್ಬಳಕೆ ಮಾಡಿಕೊಳ್ಳುವ ಕುರಿತು ಗ್ರಾಮೀಣ ಪ್ರದೇಶದ ಜನರಲ್ಲಿ ಅರಿವು ಹಾಗೂ ಜಾಗೃತಿ ಮೂಡಿಸುವುದಾಗಿದೆ.

ಭವಿಷತ್ತಿನಲ್ಲಿ ಉದ್ಬವಿಸುವ ನೀರಿನ ಸಮಸ್ಯೆ ಪರಿಹರಿಸಲು, ಗ್ರಾಮೀಣ ಜಲ ಭದ್ರತೆಗೆ ದಕ್ಕೆಯಾಗದಂತೆ ವಿಶೇಷವಾಗಿ ರೈತರು ಹಾಗೂ ಮಹಿಳೆಯರ ನೀರಿನ ಬವಣೆ ನಿಭಾಯಿಸಲು, ಅಂತರ್ಜಲ ಮೂಲ ಅಭಿವೃದ್ಧಿ ಪಡಿಸುವುದು, ಜಲ ಸಂಪತ್ತಿನ ರಕ್ಷಣೆ, ಕೃಷಿ ಚಟುವಟಿಕೆ, ತೋಟಗಾರಿಕೆ, ಅರಣ್ಯೀಕರಣ ಅಭಿವೃದ್ಧಿ ಪಡಿಸುವ ಜೊತೆ ಪರಿಸರ ಸಮತೋಲನ ರಕ್ಷಿಸಿ, ಗ್ರಾಮೀಣ ಭಾಗದ ಜನರ ಆರೋಗ್ಯ ಸುಧಾರಿಸುವುದು ಇದರ ಉದ್ದೇಶವಾಗಿದೆ ಎಂದು ಅಧಿಕಾರಿಗಳು ನೀಡುವ ಮಾಹಿತಿಯಾಗಿದೆ.

ಯಾವ ತಾಲ್ಲೂಕಿನಲ್ಲಿ ಎಷ್ಟೆಷ್ಟು?: ಮಿಷನ್ ಅಮೃತ ಸರೋವರ ಯೋಜನೆಯಡಿ ನಿರ್ಮಿಸುತ್ತಿರುವ ಕೆರೆಗಳಲ್ಲಿ ಆಗಸ್ಟ್‌ 15ರಂದು ರಾಷ್ಟ್ರ ಧ್ವಜಾರೋಹಣ ಮಾಡಲಾಗುತ್ತಿದೆ.

ಯಾದಗಿರಿ ತಾಲ್ಲೂಕಿನಲ್ಲಿ 5 ಕೆರೆಗಳು, ಸುರಪುರ 2, ಹುಣಸಗಿ 2, ಶಹಾಪುರ 1, ಗುರುಮಠಕಲ್‌ 2, ವಡಗೇರಾ ತಾಲ್ಲೂಕಿನ 3 ಅಮೃತ ಸರೋವರಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ಯಾರಿಂದ ಧ್ವಜಾರೋಹಣ: ಗ್ರಾಮ ಪಂಚಾಯಿತಿ ಸ್ಥಾನದಲ್ಲಿ ಧ್ವಜಾರೋಹಣ ಮಾಡಿದ ನಂತರ ಅಥವಾ ಅಮೃತ ಸರೋವರ ಕೆರೆಯಂಗಳಲ್ಲಿ ಯಾವುದು ಮೊದಲೋ ಅಲ್ಲಿ ಧ್ವಜರೋಹಣ ಮಾಡಲು ಸೂಚಿಸಲಾಗಿದೆ.

ಗ್ರಾಮದ ಶಿಕ್ಷಣ ತಜ್ಞರು, ಪರಿಸರ ಪ್ರೇಮಿಗಳು, ಪ್ರಮುಖ ಹುದ್ದೆ ಪಡೆದವರು ಸೇರಿದಂತೆ ಇನ್ನಿತರರನ್ನು ಆಯ್ಕೆ ಮಾಡಲಾಗುತ್ತದೆ.

ಅಮೃತ ಸರೋವರ ಯೋಜನೆಯಲ್ಲಿ ನಿರ್ಮಿಸುತ್ತಿರುವ ಕೆರೆಗಳಲ್ಲಿ 50 ಲಕ್ಷದಿಂದ 1 ಕೋಟಿ ಲೀಟರ್‌ ನೀರು ಸಂಗ್ರಹಿಸುವ ಸಾಮಾರ್ಥ್ಯದೊಂದಿಗೆ ಕಾಮಗಾರಿ ನಡೆಯುತ್ತಿದೆ.

ಹೊಸ ಕೆರೆ ನಿರ್ಮಾಣ, ಕೆರೆ ಅಭಿವೃದ್ಧಿ ಅಮೃತ ಸರೋವರ ಯೋಜನೆಯಲ್ಲಿ ಆಯ್ಕೆಯಾದ 15 ಕೆರೆಗಳಲ್ಲಿ 10 ಕೆರೆಗಳನ್ನು ಹೊಸದಾಗಿ ನಿರ್ಮಿಸಲಾಗುತ್ತಿದೆ. ಈಗಾಗಲೇ 5 ಕೆರೆಗಳನ್ನು ಈ ಯೋಜನೆಯಡಿ ಅಭಿವೃದ್ಧಿ ಪಡಿಸಲಾಗುತ್ತಿದೆ.

***

ಅಂಕಿ ಅಂಶ

ಧ್ವಜರೋಹಣಕ್ಕೆ ಸಿದ್ಧವಾಗಿರುವ ಕೆರೆಗಳು

ತಾಲ್ಲೂಕು; ಗ್ರಾಪಂ

ಸುರಪುರ;ಏವೂರು

ಸುರಪುರ;ಪೇಠಾ ಅಮ್ಮಾಪುರ

ಹುಣಸಗಿ;ಕೋಡೆಕಲ್‌

ಹುಣಸಗಿ;ಮುದನೂರ

ಶಹಾಪುರ;ರಸ್ತಾಪುರ

ಯಾದಗಿರಿ;ವರ್ಕನಳ್ಳಿ

ಯಾದಗಿರಿ;ಬಳಿಚಕ್ರ ಗೋಕಟ್ಟೆ –1

ಯಾದಗಿರಿ;ಬಳಿಚಕ್ರ ಗೋಕಟ್ಟೆ–2

ಯಾದಗಿರಿ;ಬಳಿಚಕ್ರ ಗೋಕಟ್ಟೆ–3

ಯಾದಗಿರಿ;ರಾಮಸಮುದ್ರ

ಗುರುಮಠಕಲ್;ಮಾಧ್ವರ

ಗುರುಮಠಕಲ್‌;ಕೊಂಕಲ್‌

ವಡಗೇರಾ;ಉಳ್ಳೆಸೂಗೂರು

ವಡಗೇರಾ;ಉಳ್ಳೆಸೂಗುರು

ವಡಗೇರಾ;ತಡಿಬಿಡಿ

ಆಧಾರ: ಜಿಲ್ಲಾ ಪಂಚಾಯಿತಿ

***

ಜಿಲ್ಲೆಯ 15 ಅಮೃತ ಸರೋವರಗಳಲ್ಲಿ ಧ್ವಜಕಟ್ಟೆ, ಸ್ತಂಭ ಸೇರಿದಂತೆ ಧ್ವಜಾರೋಹಕ್ಕೆ ಸಂಬಂಧಿಸಿದಂತೆ ಎಲ್ಲ ಸಿದ್ಧತೆಗಳನ್ನು ಮಾಡಲಾಗಿದೆ. 9.30ರೊಳಗೆ ಧ್ವಜಾರೋಹಣ ಮಾಡಲು ಸೂಚಿಸಲಾಗಿದೆ
ಅಮರೇಶ ಆರ್. ನಾಯ್ಕ್‌, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ

***

ರಾಮಸಮುದ್ರದ ಸರ್ವೆ ನಂಬರ್ 18ರಲ್ಲಿ ಹೊಸದಾಗಿ ನಿರ್ಮಿಸಿರುವ ಅಮೃತಸರೋವರದಲ್ಲಿ ಗ್ರಾಮದ ಗಣ್ಯರಿಂದ ಧ್ವಜಾರೋಹಣ ಮಾಡಲಾಗುವುದು. ಇದೊಂದು ಹೊಸ ಅನುಭವ
ಬಸವರಾಜ ಶರಬೈ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.