ಯಾದಗಿರಿ: ಕೈಗಾರಿಕೆಗಳ ಮೇಲಿನ ತೆರಿಗೆಯನ್ನು ಶೇ 2.5ರಿಂದ ಶೇ 1.9ಕ್ಕೆ ತಗ್ಗಿಸುವ ನಿರ್ಣಯವನ್ನು ಅಂಗೀಕರಿಸಿದ ನಗರ ಸಭೆಯ ಸದಸ್ಯರು, ವಾಣಿಜ್ಯ ತೆರಿಗೆಯನ್ನೂ ಕಡಿತ ಮಾಡಲು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಬಗ್ಗೆಯೂ ತೀರ್ಮಾನಿಸಿದರು.
ಇಲ್ಲಿನ ಯಾದಗಿರಿ ನಗರಸಭೆಯ ಸಭಾಂಗಣದಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಈ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು.
ನಗರ ಸಭೆಯ ಸದಸ್ಯ ಅಂಬಯ್ಯ ಶಾಬದಿ ಮಾತನಾಡಿ, ‘ಹಿಂದಿನ ಆಯುಕ್ತರೊಬ್ಬರು ನಮಗೆ ಸರಿಯಾದ ಮಾಹಿತಿ ಕೊಡದೆ ಕೈಗಾರಿಕೆ ಮತ್ತು ವಾಣಿಜ್ಯ ತೆರಿಗೆಯ ಪ್ರಮಾಣವನ್ನು ಹೆಚ್ಚಿಸಿಕೊಂಡು ಸಭೆಯಲ್ಲಿ ಅನುಮೋದನೆ ಪಡೆದುಕೊಂಡಿದ್ದರು. ಇದರಿಂದ ಜನಸಾಮಾನ್ಯರು ಹಾಗೂ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗೆ ಹೊರೆಯಾಗಿದೆ. ಆಗಿರುವ ಪ್ರಮಾದವನ್ನು ಸರಿಪಡಿಸಿಕೊಳ್ಳಲು ತೆರಿಗೆ ಪ್ರಮಾಣ ಕಡಿಮೆ ಮಾಡಬೇಕು’ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ನಗರ ಸಭೆಯ ಆಯುಕ್ತ ಉಮೇಶ ಚವ್ಹಾಣ್, ‘ಎಲ್ಲಾ ಸದಸ್ಯರು ಒಪ್ಪಿದರೆ ವಾಣಿಜ್ಯ ತೆರಿಗೆಯ ಪ್ರತಿಶತವನ್ನು ಕಡಿಮೆ ಮಾಡಬಹುದು. ಆದರೆ, ಇದರಿಂದ ನಗರ ಸಭೆಗೆ ಆರ್ಥಿಕ ಹೊರೆ ಬೀಳುತ್ತದೆ. ಯಾದಗಿರಿ ಮತ್ತು ಶಹಾಪುರ ನಗರಸಭೆಗಳ ವ್ಯಾಪ್ತಿಯಲ್ಲಿ ಕ್ರಮವಾಗಿ 41 ಸಾವಿರ ಹಾಗೂ 20 ಸಾವಿರಕ್ಕೂ ಹೆಚ್ಚು ಆಸ್ತಿಗಳಿವೆ. ತೆರಿಗೆ ಬೇಡಿಕೆಯೂ ಕ್ರಮವಾಗಿ ₹ 4.20 ಕೋಟಿ ಹಾಗೂ ₹ 4 ಕೋಟಿ ಇದೆ. ತೆರಿಗೆ ಪ್ರಮಾಣ ತಗ್ಗಿಸಿದರೆ ಯಾದಗಿರಿ ನಗರ ಸಭೆಯದ್ದು ₹ 3 ಕೋಟಿಗೆ ಇಳಿಯುತ್ತದೆ. ನಿರ್ವಹಣೆಯೂ ನಮಗೆ ಕಷ್ಟವಾಗುತ್ತದೆ’ ಎಂದರು.
ಇದಕ್ಕೆ ಆಕ್ಷೇಪಿಸಿದ ಕೆಲವು ಸದಸ್ಯರು, ‘ವಾಣಿಜ್ಯ ಪರಿಣಿತರನ್ನು ನಿಯೋಜನೆ ಮಾಡಿ ಅವರಿಂದ ವರದಿ ಸಿದ್ಧಪಡಿಸಿಕೊಂಡು ನಿರ್ಣಯವನ್ನು ತೆಗೆದುಕೊಳ್ಳೋಣ. ಬೇರೆ ನಗರ ಸಭೆಗಳು ಶೇ 1.5ರಿಂದ ಶೇ 1.9ರ ನಡುವೆ ತೆರಿಗೆ ವಿಧಿಸುತ್ತಿವೆ. ಅವುಗಳನ್ನು ಉಲ್ಲೇಖಿಸಿ ಸರ್ಕಾರದ ಮುಂದೆ ಪ್ರಸ್ತಾವನೆ ಇರಿಸಬೇಕು’ ಎಂದು ಹೇಳಿದರು.
ಟಿಸಿಗಳಿಗೆ ಬೇಲಿ ಅಳವಡಿಸಿ: ‘ಸಾರ್ವಜನಿಕ ಸ್ಥಳಗಳ ಸಮೀಪವೇ ಸುರಕ್ಷತಾ ಬೇಲಿ ಇಲ್ಲದ ವಿದ್ಯುತ್ ಪರಿವರ್ತಕಗಳು (ಟಿಸಿ) ಸಾಕಷ್ಟಿವೆ. ಮಳೆಗಾಲದಲ್ಲಿ ಸಂಭವನೀಯ ಜೀವ ಹಾನಿಯನ್ನು ತಪ್ಪಿಸಲು ಅಸುರಕ್ಷಿತ ಟಿಸಿಗಳ ಸಮೀಕ್ಷೆ ಮಾಡಿ, ಅವುಗಳ ಸುತ್ತಲೂ ಬೇಲಿಯನ್ನು ತ್ವರಿತವಾಗಿ ಅಳವಡಿಸಬೇಕು. ವಿದ್ಯುತ್ ಮಾರ್ಗದಲ್ಲಿ ಮರದ ರೆಂಬೆಗಳನ್ನು ಕಡಿಯುವ ಮುನ್ನ ನಗರ ಸಭೆಯ ಗಮನಕ್ಕೆ ತಂದರೆ ತುಂಡಾಗಿ ಬಿದ್ದ ರೆಂಬೆಗಳನ್ನು ತೆರವುಗೊಳಿಸುತ್ತೇವೆ’ ಎಂದು ನಗರ ಸಭೆ ಅಧ್ಯಕ್ಷೆ ಲಲಿತಾ ಅನಪುರ ಅವರು ಜೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ನಗರ ಸಭೆಯ ಉಪಾಧ್ಯಕ್ಷೆ ರುಖಯ್ಯ ಬೇಗಂ ಸೇರಿದಂತೆ ಸರ್ವ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿ ಪಾಲ್ಗೊಂಡಿದ್ದರು.
Cut-off box - ಬಿಡಾಡಿ ದನಗಳ ಮಾಲೀಕರಿಗೆ ದಂಡ ಪ್ರಹಾರ! ‘ಪ್ರಮುಖ ರಸ್ತೆಗಳಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿ ಜೀವಕ್ಕೆ ಎರವಾಗುತ್ತಿವೆ. ದನಗಳು ಹಿಡಿದು ಮಂತ್ರಾಲಯಕ್ಕೆ ಬಿಟ್ಟು ಬಂದಿದ್ದರೂ ಅವುಗಳ ಮಾಲೀಕರು ₹ 5 ಸಾವಿರ ದಂಡ ಕಟ್ಟಿ ಬಿಡಿಸಿಕೊಂಡು ಬಂದಿದ್ದಾರೆ. ಇದಕ್ಕೆ ಕಡಿವಾಣ ಹಾಕದೆ ಇದ್ದರೆ ಇನ್ನಷ್ಟು ಜನರ ಜೀವಕ್ಕೆ ಅಪಾಯ ಆಗಬಹುದು’ ಎಂದು ಅಧ್ಯಕ್ಷೆ ಲಲಿತಾ ಅನಪುರ ಕಳವಳ ವ್ಯಕ್ತಪಡಿಸಿದರು. ‘ರಾತ್ರಿ ಭದ್ರತಾ ಸಿಬ್ಬಂದಿ ಸಹಿತ ಮೂವರನ್ನು ನಿಯೋಜನೆ ಮಾಡಿ ನಗರ ಸಭೆಯ ಜಾಗದಲ್ಲಿ ಪೋಷಣ ಕೇಂದ್ರವನ್ನು ತೆರೆಯಲಾಗುವುದು. ಬೀಡಾಡಿ ದನಗಳನ್ನು ಅವುಗಳಲ್ಲಿ ಕೂಡಿ ಹಾಕಿ ಮೊದಲ ಬಾರಿ ಬೀದಿಗೆ ಬಿಟ್ಟ ಮಾಲೀಕರಿಗೆ ₹ 2500 ಹಾಗೂ 2ನೇ ಬಾರಿಗೆ ₹ 5000 ದಂಡ ಹಾಕಲಾಗುವುದು. ಇದು ಪುನರಾವರ್ತನೆಯಾದರೆ ದನವನ್ನು ಮರಳಿಸುವುದಿಲ್ಲ’ ಎಂದರು. ಇದಕ್ಕೆ ಕೆಲ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ ‘ದನಗಳನ್ನು ಸಾಕುವ ಬಹುತೇಕರು ಬಡವರೇ ಇದ್ದಾರೆ. ಈ ದಂಡದ ಮೊತ್ತ ಅವರಿಗೆ ಹೊರೆಯಾಗಲಿದೆ’ ಎಂದರು. ‘ಬಹಳ ವರ್ಷಗಳ ಸಮಸ್ಯೆ ಇದು. ವಾಹನ ಸವಾರರು ದನಗಳಿಂದ ಬಿದ್ದು ಗಾಯಗೊಂಡು ಕೆಲವರು ಜೀವ ಕಳೆದುಕೊಂಡಿದ್ದಾರೆ. ಪೋಷಣ ಕೇಂದ್ರದಲ್ಲಿ ವೈದ್ಯರನ್ನು ನಿಯೋಜನೆ ಮಾಡಿ ದನಗಳಿಗೆ ಮೇವು ನೀರು ಕೊಡಬೇಕಾಗುತ್ತದೆ. ಇಷ್ಟೊಂದು ದಂಡ ಅನಿವಾರ್ಯ’ ಎಂದು ಅಧ್ಯಕ್ಷೆ ಪ್ರತಿಕ್ರಿಯಿಸಿದರು.
Cut-off box - ‘ನಿವೇಶನಗಳ ವ್ಯಾಜ್ಯ: ಕೋರ್ಟ್ ಮೊರೆ ಹೋಗಲಿ’ ‘ನಕಲಿ ದಾಖಲೆಗಳನ್ನು ಸೃಷ್ಟಿಸಿ ನಗರ ಸಭೆ ಹಾಗೂ ಆಶ್ರಯ ಬಡಾವಣೆಗಳಲ್ಲಿ ನಿವೇಶನಗಳನ್ನು ಪಡೆದವರು ನ್ಯಾಯಾಲಯದ ಮೊರೆ ಹೋಗಿ ಇತ್ಯರ್ಥ ಮಾಡಿಕೊಳ್ಳಲಿ. ನ್ಯಾಯಾಲಯದ ಆದೇಶವನ್ನು ನೋಡಿಕೊಂಡು ಅಕ್ರಮವಾಗಿ ಕಟ್ಟಿಕೊಂಡ ಕಟ್ಟಡಗಳನ್ನು ತೆರವು ಮಾಡಬೇಕೆ ಅಥವಾ ಬೇಡವೆ ಎಂಬುದನ್ನು ನಿರ್ಣಯ ಮಾಡಬೇಕು’ ಎಂದು ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದರು. ‘ಸರ್ವೆ ನಂಬರ್ 151ರ ಆಶ್ರಯ ಬಡಾವಣೆಯಲ್ಲಿ ನಗರ ಸಭೆಗೆ ಸೇರಿದ 48 ನಿವೇಶನಗಳಿವೆ. ಅವುಗಳಲ್ಲಿ 25 ನಿವೇಶನಗಳು ಖಾಲಿ ಇದ್ದು ಉಳಿದಡೆ ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿದೆ. ಹೈ ಟೆನ್ಷನ್ ವೈರ್ ಕೆಳಗಡೆ 13 ಮನೆಗಳು ನಿರ್ಮಾಣವಾಗಿದ್ದು ರಸ್ತೆಯನ್ನು ಒತ್ತುವರಿ ಮಾಡಿಕೊಂಡು ಸಹ ಮನೆಗಳನ್ನು ಕಟ್ಟಿಸಿಕೊಂಡಿದ್ದಾರೆ. ಕೆಲವೆಡೆ ಉದ್ಯಾನದ ಜಾಗದಲ್ಲೂ ವಸತಿಗಳು ತಲೆ ಎತ್ತಿವೆ. ಇಂತಹ ಅಕ್ರಮಗಳಿಗೆ ಕಡಿವಾಣ ಹಾಕಬೇಕು’ ಎಂದು ಅಧ್ಯಕ್ಷೆ ಲಲಿತಾ ಅನಪುರ ಹೇಳಿದರು.
Cut-off box - ‘ಆ.4ರಂದು ಸ್ಥಾಯಿ ಸಮಿತಿಗಳ ಅಧ್ಯಕ್ಷರ ನೇಮಕ’ ಸಭೆ ಆರಂಭ ಆಗುತ್ತಿದ್ದಂತೆ ಮಾಜಿ ಅಧ್ಯಕ್ಷರೂ ಆಗಿರುವ ಸದಸ್ಯ ಸುರೇಶ ಅಂಬಿಗೇರ ಅವರು ‘ಬಹು ದಿನಗಳಿಂದ ನನೆಗುದಿಗೆ ಬಿದ್ದಿರುವ ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರ ನೇಮಕ ಮಾಡಿಯೇ ಸಭೆಯನ್ನು ಮುಂದುವರೆಸಬೇಕು’ ಎಂದು ಪಟ್ಟು ಹಿಡಿದರು. ಸದಸ್ಯರಾದ ವಿಲಾಸ್ ಪಾಟೀಲ ವೆಂಕಟರಡ್ಡಿ ಹೊನಕೇರಿ ಚನ್ನಕೇಶವ ಬಾಣತಿಹಾಳ್ ಅವರು ‘ಅಜೆಂಡಾ ಪ್ರಕಾರ ಸಭೆ ನಡೆಯಲಿ. ಅಜೆಂಡಾದಲ್ಲಿ ಇಲ್ಲದ ವಿಷಯ ಪ್ರಸ್ತಾಪ ಏಕೆ’ ಎಂದರು. ‘ಈ ಹಿಂದಿನ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಆಗಿತ್ತು’ ಎಂದು ಸುರೇಶ ಪ್ರತಿಕ್ರಿಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷೆ ಲಲಿತಾ ಅನಪುರ ‘ಅಧ್ಯಕ್ಷರ ಆಯ್ಕೆ ಸಂಬಂಧ ಎಲ್ಲರಿಗೂ ನೋಟಿಸ್ ನೀಡಿ ಮೂರು ದಿನಗಳ ನಂತರ (ಆಗಸ್ಟ್ 4ರಂದು) ಪ್ರಕ್ರಿಯೆಯನ್ನು ನಡೆಸಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.