ADVERTISEMENT

300ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ನೀರು

ಶಹಾಪುರ: ರಾತ್ರಿಯಿಡೀ ಸುರಿದ ಧಾರಾಕಾರ ಮಳೆಗೆ ನಲುಗಿದ ನಗರ ನಿವಾಸಿಗಳು

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2020, 2:12 IST
Last Updated 27 ಸೆಪ್ಟೆಂಬರ್ 2020, 2:12 IST
ಶಹಾಪುರ ನಗರದ ಹಳೆ ಬಸ್ ನಿಲ್ದಾಣದ ಹಿಂದುಗಡೆ ಹರಿಯುತ್ತಿರುವ ಹಳ್ಳ
ಶಹಾಪುರ ನಗರದ ಹಳೆ ಬಸ್ ನಿಲ್ದಾಣದ ಹಿಂದುಗಡೆ ಹರಿಯುತ್ತಿರುವ ಹಳ್ಳ   

ಶಹಾಪುರ: ‘ಶುಕ್ರವಾರ ರಾತ್ರಿಯಿಂದ ಮುಗುಲಿಗಿ ತೂತು ಬಿದ್ದಂಗ (ರಂಧ್ರ) ಆಗಿ ಒಂದೇ ಸವನೆ ಮಳೆ ಬರಕತ್ತ್ಯಾದ. ಮನಿಯ್ಯಾಗ ನೀರು ನುಗ್ಗ್ಯಾವ್. ಬ್ಯಾರೇ ಊರಿನಿಂದ ಜಗ್ಗಿ ಮಳೆಯ್ಯಾಗ್ಯಾದ ಅಂತ ಫೋನು ಮಾಡಿ ಕೇಳಕತ್ತ್ಯಾರ್. ನಾಗರಕೆರೆ ತುಂಬಿಕೊಂಡು ನಿಂತದ ಯಾವ ಹೊತ್ತಿನ್ಯಾಗ ಹೊಡಿತಾದ ಅಂತ ಭಯ ಆಗ್ಯಾದ್. ಇನ್ನಾದರು ಸಾಕು ಮಳೆ ಸಾಕು ಮಾಡು ಶಿವನೇ’..

ಇದು ತಾಲ್ಲೂಕಿನಲ್ಲಿ ಶುಕ್ರವಾರ ರಾತ್ರಿಯಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ನಲುಗಿ ಹೋಗಿರುವ ಜನರ ಮಾತು. ನಗರದ ತಗ್ಗು ಪ್ರದೇಶದ ಬಡಾವಣೆಗಳಾದ ದೇವಿನಗರ, ಸಿ.ಬಿ.ಕಮಾನ. ಲಕ್ಷ್ಮಿನಗರ, ಕನಕನಗರ, ಬಸವೇಶ್ವರ ನಗರ, ಆಶ್ರಯ ಕಾಲೊನಿ ಸೇರಿದಂತೆ 300ಕ್ಕೂ ಹೆಚ್ಚು ಮನೆಗೆ ನೀರು ನುಗ್ಗಿದ್ದರಿಂದ ಸಂಗ್ರಹಿಸಿಟ್ಟಿದ್ದ ಆಹಾರ ಸಾಮಗ್ರಿ ಮಳೆಗೆ ಆಹುತಿಯಾಗಿವೆ.

ಹಳೆ ಬಸ್ ನಿಲ್ದಾಣದ ಹಿಂದುಗಡೆಯ ಹಳ್ಳವನ್ನು ಒತ್ತುವರಿ ಮಾಡಿ ಮನೆ ನಿರ್ಮಿಸಿದ್ದರಿಂದ ಅಲ್ಲಿ ಹೆಚ್ಚಿನ ಅನಾಹುತ ಆಗಿದೆ ಎನ್ನುತ್ತಾರೆ ಕನಕನಗರದ ನಿವಾಸಿಗರು. ನಗರದ ಹೃದಯ ಭಾಗದಲ್ಲಿರುವ ಬಸವೇಶ್ವರ ವೃತ್ತದಲ್ಲಿ ಚರಂಡಿ ಹಾಗೂ ಮಳೆ ನೀರು ಸಂಗ್ರಹವಾಗಿ ರಸ್ತೆಯನ್ನು ಆಕ್ರಮಿಸಿಕೊಂಡಿವೆ. ಇದರಿಂದ ಅಲ್ಲಿನ ಅಕ್ಕಪಕ್ಕದ ಸುಮಾರು 40ಕ್ಕೂ ಹೆಚ್ಚು ಅಂಗಡಿಗಳಿಗೆ ನೀರು ನುಗ್ಗಿವೆ.

ADVERTISEMENT

ತಾಲ್ಲೂಕು ಪಂಚಾಯಿತಿ ನೆಲ ಮಹಡಿಯ ಮಳಿಗೆಗೆ ನೀರು ಬಂದಿದ್ದರಿಂದ ಅಂಗಡಿ ನೀರಿನಲ್ಲಿ ನಿಂತಿವೆ. ಗ್ರಾಮೀಣ ಪ್ರದೇಶದಲ್ಲಿಯೂ ಹೆಚ್ಚಿನ ಮಳೆಯಾಗಿದೆ. ತಾಲ್ಲೂಕಿನ ಟೊಣ್ಣುರ, ಶಾರದಹಳ್ಳಿ ಸೇರಿದಂತೆ ಹಲವು ಕಡೆ 5ಕ್ಕೂ ಹೆಚ್ಚು ಮಣ್ಣಿನ ಮನೆ ಭಾಗಶಃ ಕುಸಿದಿವೆ. ಆದರೆ ಯಾವುದೇ ಹಾನಿಯಾಗಿಲ್ಲ.

ಬೆಳೆದು ನಿಂತ ಹತ್ತಿ, ತೊಗರಿ, ಶೇಂಗಾ, ಬೆಳೆಗೆ ನೀರು ನುಗ್ಗಿದ್ದರಿಂದ ಹೆಚ್ಚಿನ ಹಾನಿಯಾಗಿದೆ. ಶುಕ್ರವಾರ ಮಳೆ ಮಾಪನದಲ್ಲಿ ದಾಖಲಾಗಿರುವ ಮಳೆ ಪ್ರಮಾಣ ಇಂತಿದೆ. ಶಹಾಪುರ 130 ಮಿ.ಮೀ, ಭೀಮರಾಯನಗುಡಿ 139, ಗೋಗಿ 32, ದೋರನಹಳ್ಳಿ 114, ಹಯ್ಯಾಳ 64, ವಡಗೇರಾ 98, ಹತ್ತಿಗೂಡೂರ 119 ಮಿ.ಮೀ ಮಳೆಯಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.