ಸುರಪುರ: ‘ಪೊಲೀಸ್ ಇಲಾಖೆ ಇದುವರೆಗೆ ಪ್ರತಿಕ್ರಿಯೆ ಸೇವೆಯನ್ನು ಮಾತ್ರ ಒದಗಿಸುತ್ತಾ ಬಂದಿದೆ. ಆದರೆ, ಸರ್ಕಾರ ಒಂದು ಹೆಜ್ಜೆ ಮುಂದೆ ಹೋಗಿ ಇಲಾಖೆ ಮೇಲೆ ಹೆಚ್ಚಿನ ಜವಾಬ್ದಾರಿ ವಹಿಸಿದೆ. ಮನೆಮನೆಗೆ ಪೊಲೀಸ್ ಎನ್ನುವ ವಿನೂತನ ಕಾರ್ಯಕ್ರಮ ಜಾರಿಗೊಳಿಸಿದೆ. ಪೊಲೀಸ್ ಸೇವೆಯನ್ನು ಸಕ್ರಿಯ ಸೇವೆಯನ್ನಾಗಿ ಪರಿವರ್ತಿಸುವುದು ಈ ಕಾರ್ಯಕ್ರಮದ ಉದ್ದೇಶ’ ಎಂದು ಡಿವೈಎಸ್‍ಪಿ ಜಾವೇದ್ ಇನಾಮದಾರ ತಿಳಿಸಿದರು.
ನಗರದ ಪೊಲೀಸ್ ಠಾಣೆಯಲ್ಲಿ ಶನಿವಾರ ಏರ್ಪಡಿಸಿದ್ದ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಬೀಟ್ ಪೊಲೀಸರು ಗ್ರಾಮದಲ್ಲಿ ಮನೆ ಮನೆಗೆ ತೆರಳಿ ಆ ಕುಟುಂಬದ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆಯಬೇಕು. ಸಣ್ಣ ಪುಟ್ಟ ಸಮಸ್ಯೆಗಳಿದ್ದರೆ ಕುಟುಂಬದವರಿಂದ ಲಿಖಿತವಾಗಿ ಅಥವಾ ಮೌಖಿಕವಾಗಿ ದೂರು ಪಡೆಯಬೇಕು. ಸಾಧ್ಯವಾದಷ್ಟು ಅಲ್ಲಿಯೇ ಪರಿಹಾರ ಸೂಚಿಸಬೇಕು. ಗಂಭೀರ ವಿಷಯಗಳಿದ್ದಲ್ಲಿ ಮೇಲಧಿಕಾರಿ ಗಮನಕ್ಕೆ ತರಬೇಕು’ ಎಂದು ತಿಳಿಸಿದರು.
‘ಗ್ರಾಮದಲ್ಲಿ ಸಾರ್ವಜನಿಕರಿಗೆ ಕಾಣುವಂತೆ ಪೊಲೀಸ್ ಠಾಣೆ, ವೃತ್ತ ಕಚೇರಿ, ಉಪ ವಿಭಾಗ, ವೃತ್ತ ನಿರೀಕ್ಷಕರ ದೂರವಾಣಿ, ನಿಯಂತ್ರಣ ಕೋಣೆ ಸಂಖ್ಯೆ ಸೇರಿದಂತೆ ಅಧಿಕಾರಿಗಳ ದೂರವಾಣಿ ಸಂಖ್ಯೆ ನಮೂದಿಸಬೇಕು. ಜನಸ್ನೇಹಿಯಾಗಿ ವರ್ತಿಸಬೇಕು’ ಎಂದು ಸಲಹೆ ನೀಡಿದರು.
‘ಮಹಿಳೆಯರ, ಮಕ್ಕಳ ಸುರಕ್ಷತೆ, ಮಾನವ ಕಳ್ಳ ಸಾಗಾಣಿಕೆ, ಮಕ್ಕಳ ಭಿಕ್ಷಾಟನೆ ಸೇರಿದಂತೆ ಪ್ರಚಲಿತ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಲು ಸಂಘ, ಸಂಸ್ಥೆ, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಿಗೆ ತಿಳಿ ಹೇಳಬೇಕು. ಭದ್ರತಾ ಹಿತದೃಷ್ಟಿಯಿಂದ ಆಯಾ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಸೂಚಿಸಬೇಕು’ ಎಂದು ತಿಳಿಸಿದರು.
ಇನ್‍ಸ್ಪೆಕ್ಟರ್ ಉಮೇಶ, ಶಹಾಪುರ ಇನ್‍ಸ್ಪೆಕ್ಟರ್ ಮಹಾಂತೇಶ, ಪಿಎಸ್‍ಐಗಳಾದ ಶರಣಪ್ಪ ಹವಾಲ್ದಾರ್, ಕೃಷ್ಣ ಸುಬೇದಾರ, ಸಿದ್ದಣ್ಣ, ಶಿವರಾಜ ಪಾಟೀಲ, ಪಿಎಸ್‍ಐ ಶರಣಗೌಡ, ರಾಜಶೇಖರ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.