ADVERTISEMENT

ಶಹಾಪುರ: ಎಸ್.ಡಿ.ಪಿ.ಐ ಪಕ್ಷದ ಮುಖಂಡರ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2022, 16:15 IST
Last Updated 27 ಸೆಪ್ಟೆಂಬರ್ 2022, 16:15 IST
ಶಹಾಪುರ ತಾಲ್ಲೂಕಿನ ಗೋಗಿ ಠಾಣೆಯ ಪೊಲೀಸರು ಎಸ್.ಡಿ.ಪಿಐ ಪಕ್ಷದ ಮುಖಂಡರು ವಿಚಾರಣಗೆ ಕರೆದುಕೊಂಡು ತೆರಳಿದರು
ಶಹಾಪುರ ತಾಲ್ಲೂಕಿನ ಗೋಗಿ ಠಾಣೆಯ ಪೊಲೀಸರು ಎಸ್.ಡಿ.ಪಿಐ ಪಕ್ಷದ ಮುಖಂಡರು ವಿಚಾರಣಗೆ ಕರೆದುಕೊಂಡು ತೆರಳಿದರು   

ಶಹಾಪುರ: ಸಾಮಾಜಿಕ ಶಾಂತಿಗೆ ಭಂಗ ತರುವ ಆರೋಪದ ಮೇಲೆ ತಾಲ್ಲೂಕಿನ ಗೋಗಿ ಠಾಣೆಯ ಪೊಲೀಸರು ಮಂಗಳವಾರ ಎಸ್.ಡಿ.ಪಿ.ಐ ಹಾಗೂ ಪಿ.ಎಫ್.ಐ ಮುಖಂಡರನ್ನು ವಿಚಾರಣೆಗೆ ಕರೆದು ತೆರಳಿ ನಂತರ ಬಿಡುಗಡೆಗೊಳಿಸಿದ್ದಾರೆ.

ತಾಲ್ಲೂಕಿನ ಗೋಗಿ ಗ್ರಾಮದ ಬಂದೇನವಾಜ್, ಶೇಖ್‌ ಅಬ್ದುಲ್‌ ಘನಿ ಮುಲ್ಲಾ, ಮಹ್ಮದ ಹಾಸೀಂ ಜಹಂಗೀರ್‌ ಅವರನ್ನು ವಿಚಾರಣೆಗೆ ಒಳಪಡಿಸಿದ ವ್ಯಕ್ತಿಗಳು ಆಗಿದ್ದಾರೆ.

ತಾಲ್ಲೂಕಿನ ಗೋಗಿ(ಪಿ) ಗ್ರಾಮದ ಮಹಿಬೂಬ ರಸೂಲ್ ಸಾಬ್ ಜರ್ಮನ(32) ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಯಿಸಿದಾಗ ಪಿಎಫ್ಐ ಸಂಘಟನೆಯ ಹೆಸರಿನಲ್ಲಿ ಚಟುವಟಿಕೆಗಳ ಮುಂದಾಳತ್ವ ವಹಿಸಿದ್ದ ಆರೋಪ ಕೇಳಿರುವ ಹಿನ್ನೆಲೆಯಲ್ಲಿ ತಹಶೀಲ್ದಾರ್‌ ಮುಂದೆ ಹಾಜರುಪಡಿಸಿ ಅ.6ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಸಿ.ಎಸ್.ವೇದಮೂರ್ತಿ ಮಾಹಿತಿ ನೀಡಿದ್ದಾರೆ.

ADVERTISEMENT

ಪೊಲೀಸ್‌ ಜೀಪಿಗೆ ಮುತ್ತಿಗೆ:

ಬೆಳಿಗ್ಗೆ ಎಸ್.ಡಿ.ಪಿ.ಐ ಹಾಗೂ ಪಿ.ಎಫ್.ಐ ಮುಖಂಡರನ್ನು ಪೊಲೀಸರು ಜೀಪಿನಲ್ಲಿ ಕರೆದುಕೊಂಡು ತೆರಳುತ್ತಿದ್ದಾಗ ಎಸ್.ಡಿ.ಪಿ.ಐ ಕಾರ್ಯಕರ್ತರು ಪೊಲೀಸ್‌ ಜೀಪಿಗೆ ಅಡ್ಡಗಟ್ಟಿ ಪ್ರತಿಭಟನೆ ನಡೆಸಿ ಪೊಲೀಸರ ವಿರುದ್ಧ ಘೋಷಣೆ ಕೂಗುತ್ತಾ ತಳ್ಳಾಟ ನಡೆಸಿದರು. ಇದರಿಂದ ತುಸು ಹೊತ್ತು ಗೊಂದಲ ಉಂಟಾಯಿತು.

ಪೊಲೀಸರಿಂದ ಗೊಂದಲ ಸೃಷ್ಟಿ: ಬೆಳಿಗ್ಗೆ ಪೊಲೀಸರು ಎಷ್ಟು ಜನರನ್ನು ವಿಚಾರಣೆಗೆ ಕರೆದೊಯ್ಯುತ್ತಿರುವ ಬಗ್ಗೆ ಮಾಹಿತಿ ನೀಡದೆ ಇದ್ದುದರಿಂದ ಗೊಂದಲ ಉಂಟಾಯಿತು. ವಿಚಾರಣೆಗಾಗಿ ಬಂದೇನವಾಜ, ಮಹ್ಮದ ಹಾಸೀಂ ಜಹಂಗಿರ, ಶೇಖರ ಅನ್ವರ, ಶೌಕತ ಅಲಿ ಹೀಗೆ ಒಟ್ಟು 4 ಜನರನ್ನು ಮೊದಲು ವಿಚಾರಣೆಗೆ ಕರೆದುಕೊಂಡು ಹೋಗಿ ಬಿಡುಗಡೆಗೊಳಿಸಿದರು.

‘ನಂತರ ಮಹಬೂಬ್ ಜರ್ಮನ ಹಾಗೂ ಮುನೀರ್‌ವಾನ ಇಬ್ಬರನ್ನು ತಾಲ್ಲೂಕು ದಂಡಾಧಿಕಾರಿ ಮುಂದೆ ಹಾಜರು ಪಡಿಸುತ್ತಾರೆ. ಆದರೆ, ಪೊಲೀಸರು ಕಟ್ಟುಕತೆ ಕಟ್ಟಿ ಬೆಳಿಗ್ಗೆಯಿಂದ ಗೊಂದಲ ಉಂಟು ಮಾಡಿದ್ದಾರೆ. ಕೇವಲ ಮುನ್ನೆಚ್ಚರಿಕೆ ಕ್ರಮ ಇದಾಗಿದೆ. ಅನವಶ್ಯವಾಗಿ ಗೊಂದಲ ಸೃಷ್ಟಿ ಮಾಡಿರುವುದು ಬೇಸರ ಮೂಡಿಸಿದೆ‘ ಎಂದು ವಿಚಾರಣೆಗೆ ಒಳಪಡಿಸಿದ ವ್ಯಕ್ತಿಯ ಪರವಾಗಿ ಹಾಜರಾಗಿದ್ದ ವಕೀಲರು ಒಬ್ಬರು ತಿಳಿಸಿದರು.

ಇಬ್ಬರು ಹಾಜರು

ಶಹಾಪುರ: ಶಹಾಪುರ,ಗೋಗಿ ಠಾಣೆ 2 ಪ್ರತ್ಯೇಕ ಪ್ರಕರಣದಲ್ಲಿ ಮಹಿಬೂಬ ಜರ್ಮನ ಹಾಗೂ ಮುನೀರ್‌ ಬಾಗವಾನ ಅವರನ್ನು ಪೊಲೀಸರು ಮಂಗಳವಾರ ಹಾಜರುಪಡಿಸಿದ್ದಾರೆ. ಅದರಲ್ಲಿ ಸೂಕ್ತ ಭದ್ರತೆಯ ಜಾಮೀನು ನೀಡಿದ ಮುನೀರ್ ಬಾಗವಾನ ಅವರಿಂದ ಮುಚ್ಚಳಿಕೆ ಬರೆಸಿಕೊಂಡು ಬಿಡುಗಡೆ ಮಾಡಿದೆ. ಮಹಿಬೂಬ ಜರ್ಮನ ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ ಎಂದು ತಹಶೀಲ್ದಾರ್‌ ಮಧುರಾಜ ಕೂಡ್ಲಗಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.