ADVERTISEMENT

ಬೋರಬಂಡಾ: ಸಂಭ್ರಮದ ಜಾತ್ರಾ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2019, 11:51 IST
Last Updated 13 ನವೆಂಬರ್ 2019, 11:51 IST
ಗುರುಮಠಕಲ್ ಹತ್ತಿರದ ಬೋರಬಂಡಾ ಗ್ರಾಮದಲ್ಲಿ ಮಂಗಳವಾರ ಶ್ರೀಲಕ್ಷ್ಮೀ ತಿಮ್ಮಪ್ಪ ದೇವರ ಜಾತ್ರೆಯಲ್ಲಿ ರಥೋತ್ಸವ ಜರುಗಿತು
ಗುರುಮಠಕಲ್ ಹತ್ತಿರದ ಬೋರಬಂಡಾ ಗ್ರಾಮದಲ್ಲಿ ಮಂಗಳವಾರ ಶ್ರೀಲಕ್ಷ್ಮೀ ತಿಮ್ಮಪ್ಪ ದೇವರ ಜಾತ್ರೆಯಲ್ಲಿ ರಥೋತ್ಸವ ಜರುಗಿತು   

ಗುರುಮಠಕಲ್: ‘ದೈವ ಕಾರ್ಯಗಳೂ ಮನುಷ್ಯನನ್ನು ಸದ್ವಿಚಾರ ಹಾಗೂ ಸನ್ನಡೆತೆಯೆಡೆಗೆ ಕರೆದುಕೊಂಡು ಹೋಗುತ್ತವೆ’ ಎಂದು ಚಿತ್ತಾಪುರದ ಯಲ್ಲಾಲಿಂಗ ಪುಣ್ಯಾಶ್ರಮದ ಜೇಮ್ ಸಿಂಗ್ ಮಹಾರಾಜ ಅಭಿಪ್ರಾಯಪಟ್ಟರು.

ಇಲ್ಲಿಗೆ ಸಮೀಪದ ಬೋರಬಂಡಾ ಗ್ರಾಮದಲ್ಲಿ ಮಂಗಳವಾರ ನಡೆದ ಶ್ರೀಲಕ್ಷ್ಮೀ ತಿಮ್ಮಪ್ಪ ದೇವಸ್ಥಾನದ ಜಾತ್ರಾ ಮಹೋತ್ಸವದಲ್ಲಿ ಅವರು ಮಾತನಾಡಿದರು.

‘ಯುವಜನರು ವ್ಯಸನಗಳಿಗೆ ದಾಸರಾದರೆ ಇಡೀ ದೇಶದ ನೆಮ್ಮದಿ ಹಾಳಾಗುತ್ತದೆ’ ಎಂದು ಕಳವಳ ವ್ಯಕ್ತಪಡಿಸಿದರು.

ADVERTISEMENT

ಸಮಾಜ ಶಾಂತಿ, ನೆಮ್ಮದಿ ಹಾಗೂ ಆರೋಗ್ಯಯುತವಾಗಿ ಜೀವಿಸುವಂತಾದರೆ, ಜಗತ್ತಿನ ಬಹುತೇಕ ಸಮಸ್ಯೆಗಳು ಇಲ್ಲವಾಗುತ್ತವೆ. ಆದರೆ ತಂಬಾಕು, ಮದ್ಯ ಸೇರಿ ಹಲವು ವ್ಯಸನಗಳಿಂದ ಜನರು ಎಲ್ಲವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದರು.

ಖಾಸಾ ಮಠದ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಸಂಸದ ಉಮೇಶ್ ಜಾಧವ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಬಸವರಾಜ ಮತ್ತಿಮೂಡ, ದೇವಸ್ಥಾನ ಸಮಿತಿಯ ನರೇಂದ್ರ ರಾಠೋಡ, ರಜನಿಕಾಂತ್ ಚೌವ್ಹಾಣ್‌, ಅರಕೇರಾ ಶ್ರೀಗಳು, ನೇರಡಗುಂಬಾ ಶ್ರೀಗಳು, ಪರಮೇಶ್ವರ ಮಹಾರಾಜ, ಬಳಿರಾಮ್ ಮಹಾರಾಜ, ಲತಾದೇವಿ ಮಾತೆ, ವಿಠ್ಠಲ್ ಮಹಾರಾಜ, ಚಂದ್ರಾಮ ಮಹಾರಾಜ, ಲಿಂಬಜಿ ಮಹಾರಾಜ, ಮುರಾರಿ ಮಹಾರಾಜ, ಶಿವಾನಂದ ಮಹಾರಾಜ, ಅನೀಲ್ ಮಹಾರಾಜ, ಅನೀಲ್ ಸಾಹೇಬ್, ಲೋಕೇಶ ಮಹಾರಾಜ, ನಾಜಿಯಾ ಮಹಾರಾಜ, ದೇವಿದಾಸ್ ಮಹಾರಾಜ್, ಶಾಂತಾದೇವಿ, ಕಲಾವತಿದೇವಿ, ಗಣಪತಿ ಮಹಾರಾಜ, ಕಿಶನ್ ರಾಠೋಡ ಹಾಗೂ ನರಸರೆಡ್ಡಿ ಗಡ್ಡೆಸೂಗೂರ ಇದ್ದರು.

ಸಂಭ್ರಮದ ಜಾತ್ರೆ: ಸೋಮವಾರ ಕಾರ್ತೀಕ ದೀಪೋತ್ಸವದೊಂದಿಗೆ ಆರಂಭವಾದ ಶ್ರೀಲಕ್ಷ್ಮೀ ತಿಮ್ಮಪ್ಪ ದೇವರ ಜಾತ್ರೆ, ಲವ–ಕುಶ ನಾಟಕ ಪ್ರದರ್ಶನ, ಭಜನೆ, ಸಂಗೀತ, ಕೀರ್ತನೆಗಳೊಡನೆ ರಾತ್ರಿಯಿಡಿ ಸಂಭ್ರಮದಿಂದ ನಡೆಯಿತು.

ಮಂಗಳವಾರ ಬೆಳಿಗ್ಗೆ ಶ್ರೀಲಕ್ಷ್ಮೀ ತಿಮ್ಮಪ್ಪ ದೇವರ ಮೂಲ ವಿಗ್ರಹಕ್ಕೆ ವಿಶೇಷ ಅಭಿಷೇಕ, ಅಲಂಕಾರ, ಪೂಜೆ, ಹಾರತಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

ಬಳಿಕ ಗ್ರಾಮದ ಹನುಮ ಮಂದಿರದಿಂದ ದೇವರ ಉತ್ಸವ ಮೂರ್ತಿಯನ್ನು ಪಲ್ಲಕ್ಕಿ ಮೆರವಣಿಗೆಯ ಮೂಲಕ ದೇವಸ್ಥಾನಕ್ಕೆ ತರಲಾಯಿತು. ಬಳಿಕ ಕಲ್ಯಾಣೋತ್ಸವ, ರಥೋತ್ಸವ ಹಾಗೂ ಹಾರತಿ ಸೇವೆಗಳು ಹಾಗೂ ವಿಶೇಷ ಪೂಜಾ ಸೇವೆಗಳು ಜರುಗಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.