ಯಾದಗಿರಿ ತಾಲ್ಲೂಕಿನ ಬಂದಳ್ಳಿ ಗ್ರಾಮದಲ್ಲಿ ಮಾಡಿರುವ ಜೆಜೆಎಂ ಕಾಮಗಾರಿ ಪರಿಸ್ಥಿತಿ
ಪ್ರಜಾವಾಣಿ ಚಿತ್ರ: ರಾಜಕುಮಾರ ನಳ್ಳಿಕರ್
ಯಾದಗಿರಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಜಲ ಜೀವನ ಮಿಷನ್ (ಜೆಜೆಎಂ) ಯೋಜನೆ ಕಾಮಗಾರಿ ಜಿಲ್ಲೆಯಲ್ಲಿ ಕುಟುಂತ್ತ ಸಾಗುತ್ತಿದೆ.
ಹರ್ ಘರ್ ಜಲ್ (ಮನೆ ಮನೆಗೆ ಗಂಗೆ) ಯೋಜನೆಯಡಿ 2020ರ ಅಕ್ಟೋಬರ್‌ನಲ್ಲಿ ನೀರು ಕಲ್ಪಿಸುವ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಇಲ್ಲಿಯತನಕ ಎಲ್ಲಿಯೂ ಪೂರ್ಣ ಪ್ರಮಾಣದಲ್ಲಿ ನೀರು ನಲ್ಲಿಯಲ್ಲಿ ಹರಿದಿಲ್ಲ.
ಜಿಲ್ಲೆಯಲ್ಲಿ ನಾಲ್ಕು ಹಂತಗಳಲ್ಲಿ ಕಾಮಗಾರಿ ಕೈಗೊಳ್ಳಲಾಗಿದ್ದರೂ ಇನ್ನೂ ಪೂರ್ಣ ಪ್ರಮಾಣದಲ್ಲಿ ಪೂರ್ಣಗೊಂಡಿಲ್ಲ. 2024ರ ಮಾರ್ಚ್ ತಿಂಗಳಲ್ಲಿ 695 ಕಾಮಗಾರಿಗಳಲ್ಲಿ 384 ಪೂರ್ಣವಾಗಿತ್ತು. ಇದಾದ ಒಂದು ವರ್ಷದಲ್ಲಿ 97 ಕಡೆ ಪೂರ್ಣಗೊಳಿಸಲಾಗಿದೆ. ಇನ್ನೂ 214 ಕಾಮಗಾರಿ ಬಾಕಿ ಇದೆ.
ಕೆಲ ಗ್ರಾಮಗಳಲ್ಲಿ ಜೆಜೆಎಂ ಯೋಜನೆಯಡಿ ರಸ್ತೆಯ ಬದಿಯಲ್ಲಿ ಪೈಪ್‌ಲೈನ್ ಮಾಡಲಾಗಿದೆ. ಇನ್ನೂ ನಲ್ಲಿ ಸಂಪರ್ಕಕ್ಕಾಗಿ ಅಳವಡಿಸಲಾಗಿರುವ ಸಿಮೆಂಟ್ ಕಂಬಗಳು ಅವಶೇಷಗಳಂತೆ ನಿಂತಿದ್ದು, ಅಲ್ಲಲ್ಲಿ ಬಿರುಕು ಬಿಟ್ಟು ಹೋಗಿವೆ. ಯೋಜನೆ ಆರಂಭಕ್ಕೂ ಮುನ್ನವೇ ಈ ಸ್ಥಿತಿ ಇದೆ ಎಂದು ಗ್ರಾಮೀಣ ಭಾಗದ ಜನತೆ ಹೇಳುತ್ತಾರೆ.
ಜಿಲ್ಲೆಯ ಗ್ರಾಮಾಂತರ ಪ್ರದೇಶದಲ್ಲಿ ವಾಸಿಸುವ ಪ್ರತಿಯೊಬ್ಬ ವ್ಯಕ್ತಿಗೆ ಪ್ರತಿನಿತ್ಯ 55 ಲೀಟರ್ ಶುದ್ಧವಾದ ನೀರನ್ನು ಈ ಯೋಜನೆ ಮುಖಾಂತರ ಪೂರೈಸಲಾಗುತ್ತದೆ. ಈ ಮೂಲಕ ಪ್ರತಿಯೊಬ್ಬರಿಗೆ ಶುದ್ಧ ಕುಡಿಯುವ ನೀರು ಸಿಗಬೇಕು ಎನ್ನುವುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ. ಆದರೆ, ಉದ್ದೇಶ ಮಾತ್ರ ಈಡೇರುತ್ತಿಲ್ಲ. ಎಲ್ಲೆಡೆ ಜೆಜೆಎಂ ಕಾಮಗಾರಿ ಮಾಡಿದ್ದರೂ ಒಂದು ಹನಿ ನೀರು ಹರಿದಿಲ್ಲ. ಇದರಿಂದ ಯೋಜನೆ ಕಾಮಗಾರಿ ಮಾತ್ರ ಜನತೆಗೆ ಉಪಯೋಗವಾಗುತ್ತಿಲ್ಲ.
‘ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಯೋಜನೆಯ ಕಾಮಗಾರಿಯ ಉದ್ಘಾಟನೆಯು ಪ್ರಚಾರಕ್ಕೆ ಸೀಮಿತಗೊಂಡಿತು. ನಂತರ ಸ್ಥಳೀಯ ರಾಜಕೀಯ ಮುಖಂಡರು ಪಕ್ಷಭೇದ ಮರೆತು ಗುತ್ತಿಗೆಯ ಕೆಲಸವನ್ನು ದಕ್ಕಿಸಿಕೊಂಡರು. ಕಳಪೆಮಟ್ಟದ ಕೆಲಸ ನಿರ್ವಿಸುತ್ತಿರುವ ಬಗ್ಗೆ ದೂರು ನೀಡಿದರೆ ಅದನ್ನು ಅಲ್ಲೆ ಚಿವುಟಿ ಹಾಕಿ ದಾಖಲೆಯಲ್ಲಿ ಭರಪೂರವಾಗಿ ನೀರು ಹರಿದವು. ವಾಸ್ತವವಾಗಿ ಬೇಸಿಗೆ ಸಮಯದಲ್ಲಿ ಯೋಜನೆಯ ಇನ್ನೊಂದು ಮುಖ ಬಯಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ನೀರಿಗಾಗಿ ಪರದಾಟ ಸಾಮಾನ್ಯವಾಗಿದೆ. ಆದರೆ ಯೋಜನೆ ವೈಫಲ್ಯದ ಬಗ್ಗೆ ಒಬ್ಬರೂ ಚಕಾರ ಎತ್ತುವುದಿಲ್ಲದಿರುವುದು ನಮ್ಮ ದೌರ್ಬಲ್ಯವಾಗಿದೆ’ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಮಾನಪ್ಪ ಹಡಪದ.
ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗಾಗಿ ಗ್ರಾಮ ಮುಖ್ಯ ರಸ್ತೆಯನ್ನು ಕೊರೆದು ಕಳಪೆಮಟ್ಟದ ಪೈಪು ಅಳವಡಿಸಿದರು. ರಸ್ತೆಯು ಹಾಳು ಮಾಡುವುದರ ಜೊತೆಗೆ ಕಳಪೆ ಕಾಮಗಾರಿಯಿಂದ ಮತ್ತಷ್ಟು ನಷ್ಟವನ್ನು ಸಾರ್ವಜನಿಕರು ಅನುಭವಿಸುವಂತೆ ಆಯಿತು.
ಪೂರಕ ವರದಿ: ಟಿ.ನಾಗೇಂದ್ರ, ಅಶೋಕ ಸಾಲವಾಡಗಿ, ಭೀಮಶೇನರಾವ ಕುಲಕರ್ಣಿ.
ಜಲ ಜೀವನ ಮಿಷನ್ ಯೋಜನೆಯಡಿ ಜಿಲ್ಲೆಯಲ್ಲಿ ಬಾಕಿ ಇರುವ ಕಾಮಗಾರಿ ಶೀಘ್ರದಲ್ಲೇ ಪೂರ್ಣಗೊಳಿಸಲಾಗುವುದುಆನಂದ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್
ಸುರಪುರ ತಾಲ್ಲೂಕಿನ ಚಂದಲಾಪುರ ಗ್ರಾಮದಲ್ಲಿ ಎರಡು ವರ್ಷಗಳಿಂದ ಜೆಜೆಎಂ ಕಾಮಗಾರಿ ಸ್ಥಗಿತಗೊಂಡಿದೆ. ನೀರಿನ ಟ್ಯಾಂಕ್ ಕಾಮಗಾರಿ ಅರ್ಧಕ್ಕೆ ನಿಂತಿದೆವಿಶ್ವರಾಜ ಒಂಟೂರ ಗ್ರಾಮಸ್ಥ
ಸುರಪುರ ಹುಣಸಗಿ ತಾಲ್ಲೂಕುಗಳ ಎಲ್ಲ ಗ್ರಾಮಗಳಲ್ಲಿ ಜೆಜೆಎಂ ಅನುಷ್ಠಾನಗೊಳಿಸಲಾಗುತ್ತಿದೆ. ಗ್ರಾಮಸ್ಥರ ಸಹಕಾರ ಮುಖ್ಯಎಚ್.ಡಿ. ಪಾಟೀಲ ಎಇಇ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ
ಜೆಜೆಎಂ ಯೋಜನೆ ಉಳ್ಳವರ ಪಾಲಾಗಿದೆ. ಗ್ರಾಮದಲ್ಲಿ ಗುಣಮಟ್ಟದ ಕೆಲಸ ತೆಗೆದುಕೊಳ್ಳುವಲ್ಲಿ ಜನತೆ ಸೋತು ಹೋಗಿದ್ದಾರೆ. ಇದಕ್ಕೆ ರಾಜಕೀಯ ಅಸ್ತ್ರ ಬಳಸಿ ಯೋಜನೆ ಯಾಮಾರಿಸಿದ್ದಾರೆಸಗರ ಗ್ರಾಮದ ನಿವಾಸಿಗರು
ಯಾದಗಿರಿ ತಾಲ್ಲೂಕಿನ ಕಟಗಿ ಶಹಾಪುರ ಗ್ರಾಮದಲ್ಲಿ ಜೆಜೆಎಂ ಕಾಮಗಾರಿ ಕಳಪೆ ಅಪೂರ್ಣ ಮಾಡಿದ್ದು ತನಿಖೆ ನಡೆಸಿ ಬಿಲ್ ತಡೆಹಿಡಿಯಬೇಕುನಿಂಗಪ್ಪ ತಿಪ್ಪಣ್ಣ ಸಾಮಾಜಿಕ ಕಾರ್ಯಕರ್ತ
ಸುರಪುರ: ತಾಲ್ಲೂಕಿನಲ್ಲಿ ಜೆಜೆಎಂ ಕಾಮಗಾರಿಗಳು ಯಶಸ್ವಿಯಾಗಿ ನಡೆಯುತ್ತಿಲ್ಲ. ಒಟ್ಟು 165 ಗ್ರಾಮಗಳಲ್ಲಿ ಕೇವಲ 35 ಗ್ರಾಮಗಳಲ್ಲಿ ಈ ಕಾಮಗಾರಿ ಪೂರ್ಣಗೊಂಡಿವೆ. ಕಾಮಗಾರಿ ಪೂರ್ಣಗೊಂಡ ಬಹುತೇಕ ಗ್ರಾಮಗಳಲ್ಲಿ ಮನೆ ಮನೆಗೆ ನಲ್ಲಿ ನೀರು ಬರುತ್ತಿದ್ದು ಕೆಲ ಗ್ರಾಮಗಳಲ್ಲಿ ವಿದ್ಯುತ್ ಸಮಸ್ಯೆ ಅಸಮರ್ಪಕ ನಿರ್ವಹಣೆ ಇತರ ಕಾರಣಗಳಿಂದ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದೆ.
85 ಗ್ರಾಮಗಳಲ್ಲಿ ಜೆಜೆಎಂ ಕಾಮಗಾರಿ ಪ್ರಗತಿಯಲ್ಲಿದೆ. ಅವುಗಳಲ್ಲಿ ಕೆಲವು ಕಾಮಗಾರಿಗಳು ಸ್ಥಳೀಯ ಸಮಸ್ಯೆ ಸ್ಥಳದ ಕಿರಿಕಿರಿ ಇತರ ಕಾರಣಗಳಿಗಾಗಿ ಸ್ಥಗಿತಗೊಂಡಿವೆ. ಕೆಲ ಗ್ರಾಮಗಳಲ್ಲಿ ಎರಡು ಮೂರು ವರ್ಷಗಳಿಂದ ಕಾಮಗಾರಿ ನನೆಗುದಿಗೆ ಬಿದ್ದಿದೆ. ಟೆಂಡರ್ ಪಡೆದ ಗುತ್ತಿಗೆದಾರರು ಉಪ ಗುತ್ತಿಗೆ ನೀಡುತ್ತಾರೆ. ಈ ವ್ಯವಹಾರದಲ್ಲಿ ಹಣದ ಸಮಸ್ಯೆ ಮತ್ತು ಕಾಮಗಾರಿ ವೆಚ್ಚ ಹೆಚ್ಚುವುದು ಸ್ಥಳೀಯ ಸಮಸ್ಯೆಗಳಿಂದ ಕಾಮಗಾರಿ ನನೆಗುದಿಗೆ ಬಿದ್ದಿವೆ. ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ ಎನ್ನುತ್ತಾರೆ ಅಧಿಕಾರಿಗಳು.
ಶಹಾಪುರ: ಜಲ ಜೀವನ್ ಮಿಷನ್ ಯೋಜನೆಯು ಜನತೆಯ ಜಾಣ ಕಿವುಡತನ ಹಾಗೂ ಅನುಷ್ಠನಗೊಳಿಸಬೇಕಾದ ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದ ಯೋಜನೆ ಸಂಪೂರ್ಣವಾಗಿ ಉಳ್ಳವರಿಗೆ ಮೃಷ್ಟಾನ್ನವಾಗಿ ಪರಿಣಮಿಸಿದೆ.
‘ತಾಲ್ಲೂಕಿನಲ್ಲಿ ಜೆಜೆಎಂ ಕಾಮಗಾರಿಗಾಗಿ ₹140 ಕೋಟಿ ಹಣ ವಿನಿಯೋಗಿಸಿದೆ. 197 ಹಳ್ಳಿಗಳಿಗೆ ಯೋಜನೆ ದಾಖಲೆಯಲ್ಲಿ ತಲುಪಿದೆ. ವಾಸ್ತವಾಗಿ ಬಹುತೇಕ ಜೆಜೆಎಂ ಕಾಮಗಾರಿ ನಿರ್ವಹಿಸಿದ ಕಡೆ ನೀರು ಸರಬರಾಜು ಮಾಡುವ ಮೂಲ ಸೆಲೆ ಬತ್ತಿದೆ. ನಿರ್ಮಿಸಿದ ನಲ್ಲಿ ಕಿತ್ತುಕೊಂಡು ಹೋಗಿವೆ. ಅಲ್ಲಲ್ಲಿ ಹಾಕಿದ ಪೈಪು ಒಡೆದು ಹೋಗಿರುವುದು ಕಣ್ಣಿಗೆ ಕಾಣುತ್ತವೆ ಇದಕ್ಕೆ ಜನತೆಯು ಹೊಣೆಯಾಗಿದ್ದಾರೆ’ ಎನ್ನುತ್ತಾರೆ ವನದುರ್ಗ ಗ್ರಾಮದ ಮಾನಪ್ಪ.
ಹುಣಸಗಿ: ಪಟ್ಟಣ ಸೇರಿದಂತೆ ತಾಲ್ಲೂಕಿನ 18 ಗ್ರಾಮ ಪಂಚಾಯಿತಿ ವ್ಯಾಪ್ತಿಗಳ ಗ್ರಾಮಗಳಲ್ಲಿ ಜೆಜೆಎಂ ಕಾಮಗಾರಿ ವರ್ಷದಿಂದ ನಡೆದಿವೆ. ಆದರೂ ಇನ್ನೂ ಬಹುತೇಕ ಗ್ರಾಮಗಳಿಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಿಲ್ಲ. ಇದರಿಂದಾಗಿ ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಮಹತ್ವದ ಯೋಜನೆ ಆರಂಭಿಸಿದರೂ ಸಾರ್ವಜನಿಕರಿಗೆ ಈ ಯೋಜನೆಯ ಸೌಲಭ್ಯ ದೊರಕಿಸಿಕೊಡಲು ಸಾಧ್ಯವಾಗಿಲ್ಲ ಎಂಬ ಆರೋಪಗಳು ಕೇಳಿಬರುತ್ತದೆ.
‘ನಮ್ಮ ಗ್ರಾಮಗಳಿಗೆ ಹಲವಾರು ವರ್ಷಗಳಿಂದಲೂ ಕುಡಿಯುವ ನೀರಿನ ಸಮಸ್ಯೆ ಇತ್ತು. ಆದರೆ ಜೆಜೆಎಂ ಕಾಮಗಾರಿ ಆರಂಭವಾಗಿದ್ದರಿಂದ ಶುದ್ಧ ಕುಡಿಯುವ ನೀರು ದೊರೆಯುತ್ತದೆ ಎಂದು ಜಾತಕ ಪಕ್ಷಯಂತೆ ಕಾಯುತ್ತಿದ್ದೆವು. ಆದರೆ ಇಂದಿಗೂ ಈ ಯೋಜನೆಯಿಂದಾಗಿ ಹನಿ ನೀರು ತಲುಪಿಲ್ಲ’ ಎಂದು ಮಾರಲಬಾವಿ ಗ್ರಾಮದ ಸಾಯಬಣ್ಣ ಹಾಗೂ ಹನುಮಂತ್ರಾಯ ನೈಕೊಡಿ ಹೇಳಿದರು. ‘ಕಾಮಗಾರಿ ಬೇಗನೆ ಪೂರ್ಣಗೊಳಿಸಿ ಗ್ರಾಮೀಣ ಜನತೆಗೆ ಕೊಡುವ ನೀರಿನ ಸೌಲಭ್ಯ ಕಲ್ಪಿಸಲು ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಲಿ’ ಎಂದು ರಾಜ್ಯ ರೈತ ಸಂಘದ ನಾಯಕಿ ಮಹಾದೇವಿ ಬೇನಾಳಮಠ ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.