ADVERTISEMENT

ನಿರುದ್ಯೋಗಿಗಳಿಗೆ ‘ಕೌಶಲ ಕೇಂದ್ರ’ ವರದಾನ

ನಗರವೊಂದರಲ್ಲೇ 6,090 ನಿರುದ್ಯೋಗಿಗಳನ್ನು ಗುರುತಿಸಿರುವ ಕೌಶಲ ಕೇಂದ್ರ ಸಮೀಕ್ಷೆ

ಮಲ್ಲೇಶ್ ನಾಯಕನಹಟ್ಟಿ
Published 1 ಜುಲೈ 2018, 13:42 IST
Last Updated 1 ಜುಲೈ 2018, 13:42 IST
ಯಾದಗಿರಿಯಲ್ಲಿ ಸ್ಥಾಪನೆಯಾಗಿರುವ ಪ್ರಧಾನಮಂತ್ರಿ ಕೌಶಲ ತರಬೇತಿ ಕೇಂದ್ರ
ಯಾದಗಿರಿಯಲ್ಲಿ ಸ್ಥಾಪನೆಯಾಗಿರುವ ಪ್ರಧಾನಮಂತ್ರಿ ಕೌಶಲ ತರಬೇತಿ ಕೇಂದ್ರ   

ಯಾದಗಿರಿ: ನಿರುದ್ಯೋಗ ದೇಶ ದೊಡ್ಡ ಸಮಸ್ಯೆ. ಅಂತಹ ನಿರುದ್ಯೋಗ ನೀಗಿ ದುಡಿಯುವ ಕೈಗಳನ್ನು ಹೆಚ್ಚಿಸುವ ದೃಷ್ಟಿಯಿಂದ ಕೇಂದ್ರ ಸರ್ಕಾರ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ‘ಪ್ರಧಾನಮಂತ್ರಿ ಕೌಶಲ ಕೇಂದ್ರ’ ಆರಂಭಗೊಂಡಿರುವುದು ನಗರದ ಯುವಕರಿಗೆ ವರದಾನವಾಗಿದೆ.

ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ನಡೆಸಿರುವ ಸಮೀಕ್ಷೆ ಪ್ರಕಾರ 5,770 ಮಂದಿ ನಿರುದ್ಯೋಗಿಗಳು ಜಿಲ್ಲೆಯಲ್ಲಿ ಇದ್ದಾರೆ. ಅದರಲ್ಲಿ 4,624 ಮಂದಿ ಪುರುಷರು, 1145 ಮಂದಿ ಮಹಿಳೆಯರು ಸೇರಿದ್ದಾರೆ. ಆದರೆ, ಜಿಲ್ಲೆಯಲ್ಲಿ ಈಚೆಗೆ ನಿರುದ್ಯೋಗಿಗಳ ಸಮೀಕ್ಷೆ ನಡೆಸಿರುವ ಪ್ರಧಾನಮಂತ್ರಿ ಕೌಶಲ ಕೇಂದ್ರದ ಸಮೀಕ್ಷೆ ಪ್ರಕಾರ ಜಿಲ್ಲೆಯಲ್ಲಿ ಒಟ್ಟು 14,403 ಮಂದಿ ನಿರುದ್ಯೋಗಿಗಳಿದ್ದಾರೆ. ಅದರಲ್ಲಿ 6,090 ನಿರುದ್ಯೋಗಿಗಳು ನಗರ ಪ್ರದೇಶದಲ್ಲಿಯೇ ಇದ್ದಾರೆ.

ಇಲಾಖೆ ಮತ್ತು ಕೌಶಲ ಕೇಂದ್ರಗಳ ನಡುವಿನ ಸಮೀಕ್ಷೆಯ ಅಂಕಿಅಂಶದಲ್ಲಿ ವ್ಯತ್ಯಾಸ ಇದೆ. ಕೌಶಲ ಕೇಂದ್ರ ಆನ್‌ಲೈನ್‌ ನೋಂದಣಿಯನ್ನು ಪರಿಗಣಿಸಿ ಸಮೀಕ್ಷೆ ನಡೆಸಿದೆ. ರಾಜ್ಯದಲ್ಲಿ ಹೆಚ್ಚು ನಿರುದ್ಯೋಗಿಗಳಿರುವ ಜಿಲ್ಲಾಕೇಂದ್ರಗಳಲ್ಲಿ ಯಾದಗಿರಿಯೂ ಗುರುತಿಸಿಕೊಂಡಿದೆ. ಈ ಕಾರಣಕ್ಕಾಗಿಯೇ ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯ ಖಾಸಗಿ ಸಹಭಾಗಿತ್ವದಲ್ಲಿ ಕೌಶಲ ಕೇಂದ್ರ ಸ್ಥಾಪಿಸಿದೆ.

ADVERTISEMENT

‘ಉದ್ಯೋಗಾವಕಾಶ ಕಲ್ಪಿಸುವ ವಿಶೇಷ ಯೋಜನೆಗಳನ್ನು ಇಟ್ಟುಕೊಂಡಿರುವ ಇಲ್ಲಿನ ಕೌಶಲ ಕೇಂದ್ರದಲ್ಲಿ ಈಗಾಗಲೇ 120 ಮಂದಿ ಯುವಕರು ವಿವಿಧ ಕೌಶಲ ತರಬೇತಿ ಪಡೆದುಕೊಂಡಿದ್ದು, ವಿವಿಧ ಖಾಸಗಿ ಕಂಪೆನಿಗಳಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಹೊಲಿಗೆಯಂತ್ರ ತರಬೇತಿ, ಗಣಿಗಾರಿಕೆ ವಿದ್ಯುದ್ಧೀಕರಣ, ವೇರ್‌ಹೌಸ್‌, ಕೌಂಟರ್ ಸೇಲ್ ಎಕ್ಸಿಕಟಿವ್‌, ಜನರಲ್‌ ಪ್ಲಂಬರ್‌ ವಿಭಾಗಗಳಲ್ಲಿ ಯುವಕ, ಯುವತಿಯರಿಗೆ ಇಲ್ಲಿ ತರಬೇತಿ ನೀಡಲಾಗುತ್ತದೆ. ಈ ತರಬೇತಿಯ ಜತೆಗೆ ವ್ಯಕ್ತಿತ್ವ ವಿಕಸನ ಹಾಗೂ ಸ್ಪೋಕನ್‌ ಇಂಗ್ಲಿಷ್, ಕಂಪ್ಯೂಟರ್ ತರಬೇತಿ ಕೂಡ ಇರುತ್ತದೆ’ ಎಂದು ಕೌಶಲ ಕೇಂದ್ರದ ವ್ಯವಸ್ಥಾಪಕ ಪ್ರದೀಪ್‌ ಕುಮಾರ್ ವಿವರಿಸುತ್ತಾರೆ.

‘ಪ್ರತಿ ವಿಭಾಗಗಳಲ್ಲಿ 30 ಮಂದಿಗೆ ಮಾತ್ರ ತರಬೇತಿಯ ಅವಕಾಶ ಇರುತ್ತದೆ. ಗರಿಷ್ಠ ಮೂರು ತಿಂಗಳ, ಕನಿಷ್ಠ 45 ದಿನಗಳವರೆಗಿನ ಕೌಶಲ ತರಬೇತಿ ಇಲ್ಲಿ ನೀಡಲಾಗುತ್ತದೆ. ಈಗಾಗಲೇ ಹೊಲಿಗೆ ಯಂತ್ರ ತರಬೇತಿ ಪಡೆದ ನಗರದ ಯುವತಿಯರು ಬೆಂಗಳೂರಿನಲ್ಲಿನ ಶಾಹಿ ಗಾರ್ಮೆಂಟ್ಸ್‌ ನಲ್ಲಿ ಉದ್ಯೋಗ ಮಾಡುತ್ತಿದ್ದಾರೆ’ ಎಂದೂ ಅವರು ಹೇಳುತ್ತಾರೆ.

‘ಕೌಶಲ ಕೇಂದ್ರದಲ್ಲಿ ನೀಡುವ ತರಬೇತಿ ಸಂಪೂರ್ಣ ಉಚಿತವಾಗಿರುತ್ತದೆ. 10ನೇ ತರಗತಿ ಅನುತ್ತೀರ್ಣಗೊಂಡವರಿಂದ ಹಿಡಿದು ಐಟಿಐ, ಡಿಪ್ಲೋಮಾ ಶೈಕ್ಷಣಿಕ ಅರ್ಹತೆ ಪಡೆದವರಿಗೆ ಇಲ್ಲಿ ತರಬೇತಿ ಅವಕಾಶ ಕಲ್ಪಿಸಲಾಗುತ್ತದೆ. ತರಬೇತಿ ಪಡೆದ ನಂತರ ಕೇಂದ್ರ ಸರ್ಕಾರದ ವತಿಯಿಂದ ಪ್ರಮಾಣಪತ್ರ ಲಭಿಸಲಿದೆ. ನಂತರ ಉದ್ಯೋಗ ಮಾಡಲು ಖಾಸಗಿ ಕಂಪೆನಿಗಳಲ್ಲಿ ಅವಕಾಶ ಕಲ್ಪಿಸಿಕೊಡಲಾಗುತ್ತದೆ’ ಎನ್ನುತ್ತಾರೆ ತರಬೇತಿ ಪಡೆದು ಈಗ ಹೈದರಾಬಾದಿನ ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿರುವ ಶಂಕರಪ್ಪ.

‘ಉದ್ಯೋಗ ವಿನಿಮಯ ಕೇಂದ್ರದಲ್ಲಿ ನೋಂದಣಿಯಾದ ಅರ್ಹರಿಗೆ ಕೌಶಲ ಕೇಂದ್ರದಲ್ಲಿ ತರಬೇತಿ ಪಡೆಯಲು ಪ್ರೋತ್ಸಾಹಿಸಲಾಗುತ್ತಿದೆ. ಈಚೆಗೆ ಇಲಾಖೆಯಿಂದಲೂ ಉದ್ಯೋಗ ಮೇಳ ಹಮ್ಮಿಕೊಂಡು ಒಟ್ಟು 65 ಮಂದಿ ನಿರುದ್ಯೋಗಿಗಳಿಗೆ ಖಾಸಗಿ ವಲಯದಲ್ಲಿ ಉದ್ಯೋಗ ಕಲ್ಪಿಸಲಾಗಿದೆ. ಕೌಶಲ ಕೇಂದ್ರ ಸ್ಥಾಪನೆ ಇಲಾಖೆಗೆ ಮತ್ತಷ್ಟೂ ಬೆಂಬಲ ಸಿಕ್ಕಂತಾಗಿದೆ’ ಎಂದು ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ಭಾರತಿ ಹೇಳುತ್ತಾರೆ.

ನಿರುದ್ಯೋಗಿಗಳು ಹೆಚ್ಚಿನ ಮಾಹಿತಿಗಾಗಿ ಮೊಬೈಲ್‌: 97434 85653, 85500 08080 ಗೆ ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.