ADVERTISEMENT

ಕೆಂಭಾವಿ| ದೇಶದ ಕಾನೂನು ಬಲಿಷ್ಠವಾಗಿದೆ: ಎಸ್‌ಪಿ

​ಪ್ರಜಾವಾಣಿ ವಾರ್ತೆ
Published 11 ಜನವರಿ 2026, 6:13 IST
Last Updated 11 ಜನವರಿ 2026, 6:13 IST
ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಶನಿವಾರ ಜಿಲ್ಲಾ ಪೊಲೀಸ್ ಇಲಾಖೆಯಿಂದ ಏರ್ಪಡಿಸಿದ್ದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಕುಂದುಕೊರತೆ ಸಭೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ ಶಂಕರ ಉದ್ಘಾಟಿಸಿದರು  
ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಶನಿವಾರ ಜಿಲ್ಲಾ ಪೊಲೀಸ್ ಇಲಾಖೆಯಿಂದ ಏರ್ಪಡಿಸಿದ್ದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಕುಂದುಕೊರತೆ ಸಭೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ ಶಂಕರ ಉದ್ಘಾಟಿಸಿದರು     

ಕೆಂಭಾವಿ: ದೇಶದ ಕಾನೂನಿನಲ್ಲಿ ಎಲ್ಲರೂ ಸರಿಸಮಾನರು, ಯಾವುದೆ ಒಂದು ಸಮಾಜ, ಸಮುದಾಯಕ್ಕೆ ಅಪಮಾನವಾದಾಗ ಕಾನೂನಿನ ರೀತಿಯಲ್ಲಿ ಕ್ರಮ ಕೈಗೊಳ್ಳುವುದು ಪೊಲೀಸ್ ಇಲಾಖೆಯ ಆದ್ಯ ಕರ್ತವ್ಯವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ ಶಂಕರ ಹೇಳಿದರು.

ಪಟ್ಟಣದ ಪೊಲೀಸ್ ಠಾಣೆಯಲ್ಲಿ ಶನಿವಾರ ಜಿಲ್ಲಾ ಪೊಲೀಸ್ ಇಲಾಖೆಯಿಂದ ಏರ್ಪಡಿಸಿದ್ದ ಪರಿಶಿಷ್ಠ ಜಾತಿ ಪರಿಶಿಷ್ಠ ಪಂಗಡಗಳ ಕುಂದುಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಮ್ಮ ದೇಶದ ಕಾನೂನು ಬಲಿಷ್ಠವಾಗಿದ್ದು ಕಾನೂನು ಮೀರಿ ಅಪರಾಧ ಕೃತ್ಯ ಮಾಡುವ ಯಾವುದೆ ವ್ಯಕ್ತಿ ಸಮಾಜದಲ್ಲಿ ಎಷ್ಟೆ ದೊಡ್ಡವರಾಗಿದ್ದರೂ ಅವರ ವಿರುದ್ಧ ದೂರು ಬಂದರೆ ಅವರನ್ನು ಬಂಧಿಸುವ ಅಧಿಕಾರ ಪೊಲೀಸ್ ಇಲಾಖೆಗೆ ಇದೆ ಎಂದು ಹೇಳಿದರು.

21ನೇ ಶತಮಾನಕ್ಕೆ ನಾವು ಕಾಲಿಟ್ಟಿದ್ದರೂ ಇಂದಿನ ಪ್ರತಿಯೊಂದು ರಂಗದಲ್ಲಿ ಜಾತಿ ವ್ಯವಸ್ಥೆ ಎದ್ದು ಕಾಣುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ, ತಿರುಗಾಡುವ ವಾಹನಗಳಲ್ಲಿ, ಮನೊರಂಜನೆ ನೀಡುವ ವಿವಿಧ ಕ್ಷೇತ್ರಗಳಲ್ಲಿ ಇನ್ನೂ ಜಾತಿ ವ್ಯವಸ್ಥೆ ಎದ್ದು ಕಾಣುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ 2025-26ನೇ ಸಾಲಿನಲ್ಲಿ 84 ಪ್ರಕರಣಗಳು ಎಸ್.ಸಿ ಮತ್ತು ಎಸ್.ಟಿ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದರೆ ಅತೀ ಹೆಚ್ಚು ಲೈಂಗಿಕ ದೌರ್ಜನ್ಯ (ಪೊಕ್ಸೊ) ಪ್ರಕರಣ ನಮ್ಮ ಜಿಲ್ಲೆಯಲ್ಲಿ ದಾಖಲಾಗಿವೆ ಎಂದು ಹೇಳಿದರು. ಗ್ರಾಮೀಣ ಪ್ರದೇಶಗಳಲ್ಲಿ ಜಾತಿಗಳ ಮೇಲಾಗುವ ದೌರ್ಜನ್ಯಗಳನ್ನು ತಡೆಗಟ್ಟಲು ಮುಖ್ಯವಾಗಿ ಪ್ರಕರಣ ದಾಖಲಾಗಬೇಕು. ಒಬ್ಬ ವ್ಯಕ್ತಿಗೆ ಒಂದು ಸಮುದಾಯದ ಅಥವಾ ಒಂದು ಜಾತಿಯ ವ್ಯಕ್ತಿಗಳಿಂದ ಅಥವಾ ಹಲವರಿಂದ ತೊಂದರೆಯಾಗುತ್ತಿದ್ದರೆ ಅಂತವರು ಧೈರ್ಯದಿಂದ ಮುಂದೆ ಬಂದು ಸಂಬಂಧಿಸಿದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದರೆ ಮುಲಾಜಿಲ್ಲದೆ ಅಂಥಾ ಪ್ರಕರಣಕ್ಕೆ ನಮ್ಮ ಇಲಾಖೆ ಕಾನೂನು ರೀತಿ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.

ADVERTISEMENT

ಇದೇ ಸಂದರ್ಭದಲ್ಲಿ ವಿವಿಧ ದಲಿತ ಮುಖಂಡರುಗಳು ಮತ್ತು ವಾಲ್ಮೀಕಿ ಸಮುದಾಯದ ಮುಖಂಡರುಗಳು ಮಾತನಾಡಿ ಕೆಂಭಾವಿ ವಲಯದ ಹಲವು ಗ್ರಾಮಗಳಲ್ಲಿ ಇನ್ನೂ ಅಸ್ಪ್ರಶ್ಯತೆ ಮತ್ತು ದಲಿತರಿಗೆ ಸ್ಮಶಾನ ಭೂಮಿಯ ಸಮಸ್ಯೆ ಜೀವಂತವಿದ್ದು ಇದನ್ನು ಹೋಗಲಾಡಿಸಲು ಗ್ರಾಮೀಣ ಪ್ರದೇಶದಲ್ಲಿಯೂ ಇಂಥಾ ಸಭೆಗಳು ಪೊಲೀಸ್ ಇಲಾಖೆಯಿಂದ ಆಯೋಜನೆ ಮಾಡಬೇಕು ಎಂದು ಮನವಿ ಮಾಡಿದರು.

ಡಿವೈಎಸ್‍ಪಿ ಜಾವೇದ ಇನಾಮದಾರ, ಸಿಪಿಐ ರವಿಕುಮಾರ, ಗ್ರೇಡ್-2 ತಹಸೀಲ್ದಾರ ಮಲ್ಲಯ್ಯ ದಂಡು, ಎಸ್.ಸಿ, ಎಸ್.ಟಿ ತಡೆಕಾಯ್ದೆ ಸಮಿತಿ ಸದಸ್ಯರಾದ ಮರೆಪ್ಪ, ನಿಂಗಪ್ಪ, ಅಪರಾಧ ವಿಭಾಗದ ಪಿಎಸ್‍ಐ ಹಣಮಂತ ಸಿದ್ದಾಪೂರ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಅಪ್ಪು ರಾಠೋಡ, ತಾಪಂ ಅಧಿಕಾರಿ ನಾಗರಾಜ, ಪುರಸಭೆ ಸಿಬ್ಬಂದಿ ಸಿದ್ರಾಮಯ್ಯ ಇಂಡಿ ಇದ್ದರು. ಪಿಎಸ್‍ಐ ಅಮೋಜ ಕಾಂಬಳೆ ಸ್ವಾಗತಿಸಿದರು. ಪಿಸಿ ರೇಖಾ ನಿರೂಪಿಸಿದರು.

ಶನಿವಾರ ಪೊಲೀಸ್ ಠಾಣೆಯಲ್ಲಿ ನಡೆದ ಸಭೆಯಲ್ಲಿ ಹಲವು ಘಟನೆಗಳು ಬೆಳಕಿಗೆ ಬಂದವು. ವಲಯದ ಹಲವು ಗ್ರಾಮಗಳಲ್ಲಿ ಅಸ್ಪ್ರಶ್ಯತೆ ಜೀವಂತವಾಗಿರುವುದಕ್ಕೆ ಹಲವು ದಲಿತಪರ ಮುಖಂಡರುಗಳು ಧ್ವನಿ ಎತ್ತಿದರು. ಇನ್ನು ಕೆಲವು ಗ್ರಾಮಗಳಲ್ಲಿ ದಲಿತ ವ್ಯಕ್ತಿಗಳು ಮರಣ ಹೊಂದಿದರೆ ಅಂತ್ಯಕ್ರಿಯೆ ನಡೆಸಲು ಸ್ಮಶಾನ ಭೂಮಿ ಇಲ್ಲದೆ ಇರುವುದು ಕೆಲವು ಕಡೆ ಸ್ಮಶಾನ ಭೂಮಿ ಇದ್ದರೂ ಅಲ್ಲಿಗೆ ತೆರಳಲು ಸರಿಯಾದ ರಸ್ತೆ ಸಂಪರ್ಕ ಇಲ್ಲದಿರುವುದು ಸೇರಿದಂತೆ ಹಲವು ಸಂಗತಿಗಳು ಬೆಳಕಿಗೆ ಬಂದವು. ಕೆಂಭಾವಿ ವಲಯದಲ್ಲಿ ಬಾಲ ಕಾರ್ಮಿಕರನ್ನು ಹೊತ್ತೊಯ್ಯುತ್ತಿರುವ ವಾಹನಗಳ ಸಂಖ್ಯೆ ಹೆಚ್ಚಾಗಿದ್ದು ಇವುಗಳಿಗೆ ಕಡಿವಾಣ ಹಾಕಲು ಸ್ಥಳೀಯ ಪಿಎಸ್‍ಐ ಅವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಈ ಭಾಗದಲ್ಲಿ ಹಲವು ಖಾಸಗಿ ಶಾಲೆಯ ವಾಹನಗಳು ವಾಣಿಜ್ಯ ಬಳಕೆಯ ಉದ್ದೇಶಕ್ಕೆ ಬಳಕೆಯಾಗುತ್ತಿರುವ ಬಗ್ಗೆ ಮೌಖಿಕ ದೂರು ಬಂದಿದ್ದು ಅಂಥಹ ವಾಹನಗಳ ಬಗ್ಗೆ ಸಾರಿಗೆ ಇಲಾಖೆಯ ಗಮನಕ್ಕೆ ತಂದು ಅಂಥವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು’ ಎಂದು ಎಸ್‌ಪಿ ಪೃಥ್ವಿಕ ಶಂಕರ ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.