ADVERTISEMENT

‘ಚೌಡಯ್ಯ ನಿಗಮಕ್ಕೆ ₹200 ಕೋಟಿ ಒದಗಿಸಿ’

ಟೋಕ್ರೆ ಕೋಲಿ ಸಮಾಜದ ಜಿಲ್ಲಾ ಅಧ್ಯಕ್ಷ ಉಮೇಶ ಕೆ. ಮುದ್ನಾಳ ಆಗ್ರಹ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2019, 15:37 IST
Last Updated 7 ಮಾರ್ಚ್ 2019, 15:37 IST
ಯಾದಗಿರಿ ಜಿಲ್ಲೆ, ಶಹಾಪುರ ತಾಲ್ಲೂಕಿನ ನಾಲ್ವಡಿಗಿ ಗ್ರಾಮದಲ್ಲಿ ಬುಧವಾರ ಕೋಲಿ ಸಮಾಜದ ಹೋಬಳಿ ಮಟ್ಟದ ಕಚೇರಿಯನ್ನು ಟೋಕ್ರೆ ಕೋಲಿ ಸಮಾಜದ ಜಿಲ್ಲಾ ಅಧ್ಯಕ್ಷ ಉಮೇಶ ಕೆ. ಮುದ್ನಾಳ ಉದ್ಘಾಟಿಸಿದರು
ಯಾದಗಿರಿ ಜಿಲ್ಲೆ, ಶಹಾಪುರ ತಾಲ್ಲೂಕಿನ ನಾಲ್ವಡಿಗಿ ಗ್ರಾಮದಲ್ಲಿ ಬುಧವಾರ ಕೋಲಿ ಸಮಾಜದ ಹೋಬಳಿ ಮಟ್ಟದ ಕಚೇರಿಯನ್ನು ಟೋಕ್ರೆ ಕೋಲಿ ಸಮಾಜದ ಜಿಲ್ಲಾ ಅಧ್ಯಕ್ಷ ಉಮೇಶ ಕೆ. ಮುದ್ನಾಳ ಉದ್ಘಾಟಿಸಿದರು   

ಯಾದಗಿರಿ: ‘ಚೌಡಯ್ಯ ಅಭಿವೃದ್ಧಿ ನಿಗಮಕ್ಕೆ ಕೂಡಲೇ ಸರ್ಕಾರ ₹200 ಕೋಟಿ ಅನುದಾನ ಒದಗಿಸಬೇಕು’ ಟೋಕ್ರೆ ಕೋಲಿ ಸಮಾಜದ ಜಿಲ್ಲಾ ಅಧ್ಯಕ್ಷ ಉಮೇಶ ಕೆ. ಮುದ್ನಾಳ ಆಗ್ರಹಿಸಿದರು.

ಶಹಾಪುರ ತಾಲ್ಲೂಕಿನ ನಾಲ್ವಡಿಗಿ ಗ್ರಾಮದಲ್ಲಿ ಬುಧವಾರ ಹೋಬಳಿ ಮಟ್ಟದ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದರು.

ಕೋಲಿ ತಕ್ಷಣ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು. ಅದಕ್ಕಾಗಿ ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಬೇಕು. ವಿಧಾನಸೌಧದ ಮುಂದೆ 21 ಅಡಿಯ ಪಂಚಲೋಹದ ಚೌಡಯ್ಯ ಮೂರ್ತಿ ಅನಾವರಣ ಮಾಡಬೇಕು. ಜಿಲ್ಲೆಯಾದ್ಯಂತ ಸಮುದಾಯ ಭವನ ನಿರ್ಮಿಸಲು ನಿವೇಶನ ನೀಡಬೇಕು. ಅದರಲ್ಲಿ ಬೃಹತ್ ಆಕಾರದ ಸಮುದಾಯ ಭವನ ನಿರ್ಮಾಣ ಮಾಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘16ರಾಜ್ಯದಲ್ಲಿ ಪರಿಶಿಷ್ಟ ಜಾತಿ, 9 ರಾಜ್ಯದಲ್ಲಿ ಪರಿಶಿಷ್ಟ ಪಂಗಡಕ್ಕೆ ಕೋಲಿ ಸಮಾಜವನ್ನು ಸೇರ್ಪಡೆಗೊಳಿಸಲಾಗಿದೆ. ಆದರೆ, ಕರ್ನಾಟಕ ರಾಜ್ಯದಲ್ಲಿ ಎಲ್ಲಾ ರಂಗಗಳಲ್ಲಿ ಹಿಂದುಳಿದಿರುವ ಕೋಲಿ ಸಮಾಜಕ್ಕೆ ಪರಿಶಿಷ್ಟ ಮೀಸಲಾತಿ ಮಾತ್ರ ನೀಡಿಲ್ಲ. ಇದರಿಂದ ಸಮಾಜಕ್ಕೆ ಅನ್ಯಾಯವಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಸಮಾಜಕ್ಕೆ ರಾಜ್ಯದಲ್ಲಿ ರಾಜಕೀಯ ಪ್ರಾತಿನಿಧ್ಯ ಕೂಡ ಸಿಕ್ಕಿಲ್ಲ. ಶೈಕ್ಷಣಿಕವಾಗಿಯೂ ಹಿಂದುಳಿದಿರುವ ಕೋಲಿ ಕಬ್ಬಲಿಗರು ಇಂದಿಗೂ ಬಹುಸಂಖ್ಯೆಯಲ್ಲಿ ಅನಕ್ಷರಸ್ಥರಾಗಿಯೇ ಇದ್ದಾರೆ. ಈ ಸಮಾಜದಲ್ಲಿನ ಮಹಿಳೆಯರ ಸ್ಥಿತಿಗತಿಯೂ ಕೂಡ ಸುಧಾರಿಸಿಲ್ಲ. ಹಿಂದುಳಿದವರಿಂದ ಮತ ಪಡೆಯುತ್ತಾ ರಾಜಕೀಯ ಅಧಿಕಾರ ಅನುಭವಿಸಿರುವವರಿಗೆ ಕಬ್ಬಲಿಗರ ಸಂಕಷ್ಟ ಕಾಣುತ್ತಿಲ್ಲ. ಇಂಥಾ ರಾಜಕಾರಣಿಗಳ ಬಗ್ಗೆ ಜನರು ಕೂಡ ಎಚ್ಚರದಿದಂದ ಇರಬೇಕು’ ಎಂದು ಕಿವಿಮಾತು ಹೇಳಿದರು.

‘ಕೋಲಿ ಸಮಾಜದಲ್ಲಿ ಸಂಘಟಿತ ಹೋರಾಟ ಇಲ್ಲದೇ ಇರುವುದರಿಂದ ಇಂದು ಹಿಂದುಳಿದಿರಲು ಕಾರಣವಾಗಿದೆ. ತಾಲ್ಲೂಕು, ಹೋಬಳಿ ಮಟ್ಟದಲ್ಲಿ ಕೋಲಿ ಸಮಾಜ ಕಚೇರಿಗಳನ್ನು ಆರಂಭಿಸಿ ಸಮಾಜದ ಅಭಿವೃದ್ಧಿ ಪರ ಚರ್ಚೆಗಳನ್ನು ಸಮಾಜದ ಮುಖಂಡರು ನಡೆಸುವ ಅಗತ್ಯ ಇದೆ’ ಎಂದರು.

ಇದಕ್ಕೂ ಮುನ್ನ ಅಂಬಿಗರ ಚೌಡಯ್ಯ ಭಾವಚಿತ್ರಕ್ಕೆ ತಿಪ್ಪಣ್ಣ ಪೂಜಾರಿ ನಾಯ್ಕಲ್ ಪೂಜೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.