ಭೀಮಶೇನರಾವ್ ಕುಲಕರ್ಣಿ
ಹುಣಸಗಿ: ತಾಲ್ಲೂಕಿನ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಹುಣಸಗಿ ಹಾಗೂ ಸುರಪುರ ತಾಲ್ಲೂಕಿನಲ್ಲಿ 1,61, 500 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿಯಿದ್ದು, ಬಹುತೇಕ ಪೂರ್ಣಗೊಂಡಿದೆ. ಈ ಪ್ರದೇಶದಲ್ಲಿ ಭತ್ತ, ತೊಗರಿ ಹಾಗೂ ಹತ್ತಿಯನ್ನು ಬಿತ್ತನೆ ಮಾಡಲಾಗಿದೆ.
ಅದರಲ್ಲಿ 19 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಹಾಗೂ 63 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬಿತ್ತನೆ ಮಾಡಲಾಗಿದೆ. ಅಂದಾಜು 63 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿ ಮಾಡಲಾಗುತ್ತಿದ್ದು, ಹುಣಸಗಿ ತಾಲ್ಲೂಕಿನಲ್ಲಿ ಶೇ 80 ರಷ್ಟು ಪೂರ್ಣಗೊಂಡಿದೆ. ಸುರಪುರ ತಾಲ್ಲೂಕಿನಲ್ಲಿ ಶೇ 60 ರಷ್ಟು ನಾಟಿ ಮಾಡಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ರಾಮನಗೌಡ ಮಾಲಿಪಾಟೀಲ ತಿಳಿಸಿದರು.
ಹುಣಸಗಿ ತಾಲ್ಲೂಕಿನಲ್ಲಿ ಅಂದಾಜು 25 ಸಾವಿರ ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಸೋನಾ, ಸೂರಿ ಹಾಗೂ ಆರ್‌ಎನ್‌ಆರ್ ತಳಿಯ ಭತ್ತದ ನಾಟಿ ಮುಕ್ತಾಯವಾಗಿದೆ. ಇನ್ನೂ 5 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ನಾಟಿ ಕಾರ್ಯ ನಡೆದಿದ್ದು, ಇನ್ನೊಂದು ವಾರದಲ್ಲಿ ಪೂರ್ಣಗೊಳ್ಳಲಿದೆ’ ಎಂದು ರೈತರು ಮಾಹಿತಿ ನೀಡಿದ್ದಾರೆ.
ಈ ಬಾರಿ ಕಾಲುವೆಗೆ ಬೇಗನೆ(ಜುಲೈ 8) ನೀರು ಹರಿಸಿದ್ದರಿಂದ ರೈತರಿಗೆ ಅನುಕೂಲವಾಗಿದೆ. ನಾಟಿ ಕಾರ್ಯ ಅಡಚಣೆಯಿಲ್ಲದೆ ನಡೆದಿದ್ದು, ಮುಕ್ತಾಯ ಹಂತಕ್ಕೆ ಬಂದಿದೆ ಎಂದು ವಜ್ಜಲ ಗ್ರಾಮದ ರೈತ ನಿಂಗನಗೌಡ ಬಸನಗೌಡರ, ಕಾಮನಟಗಿ ಗ್ರಾಮದ ರೈತ ದತ್ತಾತ್ರೇಯ ಜಹಾಗೀರದಾರ ಹೇಳಿದರು.
ಕೆಲ ಗ್ರಾಮಗಳಲ್ಲಿ ಸ್ಥಳೀಯರು, ಇನ್ನೂ ಕೆಲ ಗ್ರಾಮಗಳಲ್ಲಿ ಸುತ್ತಲಿನ ಜಿಲ್ಲೆ ಹಾಗೂ ಉತ್ತರ ಪ್ರದೇಶದಿಂದಲೂ ಕಾರ್ಮಿಕರು ಬಂದಿದ್ದಾರೆ. ಹುಣಸಗಿ ಸುತ್ತಲಿನ ಗ್ರಾಮೀಣ ಭಾಗದಲ್ಲಿ ಸಿಂಧನೂರು, ಬಂಗಾಲಿ ಕ್ಯಾಂಪ್ ಹಾಗೂ ಲಿಂಗಸೂಗುರು ತಾಲ್ಲೂಕಿನ 50ಕ್ಕೂ ಹೆಚ್ಚು ತಂಡಗಳು ಬಂದಿವೆ. ಒಂದು ತಂಡದಲ್ಲಿ 30ರಿಂದ 50 ಕಾರ್ಮಿಕರಿದ್ದಾರೆ ಎಂದು ಗುಳಬಾಳ ಗ್ರಾಮದ ರೈತ ಸೋಮಣ್ಣ ಮೇಟಿ ಹಾಗೂ ಮಾಳನೂರು ಗ್ರಾಮದ ತಿಪ್ಪಣ್ಣ ಕಾರನೂರು ವಿವರಿಸಿದರು.
‘ನಮ್ಮದು ಮುಖ್ಯ ರಸ್ತೆಯಿಂದ ಸ್ವಲ್ಪ ದೂರದ ಗ್ರಾಮವಾಗಿದೆ. ಕಾರ್ಮಿಕರ ಸಮಸ್ಯೆ ಎದುರಾಗಿದ್ದು, ಇನ್ನೂ ಗೆದ್ದಲಮರಿ ಗ್ರಾಮದಲ್ಲಿ ಶೇ 50ರಷ್ಟು ನಾಟಿ ಕಾರ್ಯ ಪೂರ್ಣಗೊಂಡಿಲ್ಲ’ ಎಂದು ಗ್ರಾಮದ ಶಿವರಾಜ ಹೊಕ್ರಾಣಿ ಹೇಳಿದರು.
ಮಿತಿಮೀರಿದ ಗೊಬ್ಬರ ಬಳಕೆ ಬೇಡ
ಭತ್ತ ನಾಟಿ ಬಳಿಕ ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ರೈತರು ಮಿತಿಮೀರಿ ಗೊಬ್ಬರ ಬಳಕೆ ಮಾಡಲಾಗುತ್ತಿದೆ. ಗೊಬ್ಬರ ಮಿತಬಳಕೆಗೆ ಹಾಗೂ ಸಂಯಕ್ತ ಗೊಬ್ಬರ ಬಳಕೆಗೆ ಒತ್ತು ನೀಡಬೇಕು ಎಂದು ಕೃಷಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ‘ಸುರಪುರ ಹಾಗೂ ಹುಣಸಗಿ ತಾಲ್ಲೂಕಿಗೆ ಜುಲೈ ಅಂತ್ಯದವರೆಗೆ 31625 ಮೆಟ್ರಿಕ್ ಟನ್ ವಿವಿಧ ರೀತಿಯ ಗೊಬ್ಬರದ ಬೇಡಿಕೆಯಿದೆ. ಈವರೆಗೆ 24580 ಮೆಟ್ರಿಕ್ ಟನ್ ಪೂರೈಕೆಯಾಗಿದೆ’ ಎಂದು ಸುರಪುರದ ಅಧಿಕಾರಿ ರಾಮನಗೌಡ ಪಾಟೀಲ ತಿಳಿಸಿದರು. ಎರಡೂ ತಾಲ್ಲೂಕುಗಳಲ್ಲಿ 1222 ಮೆಟ್ರಿಕ್ ಟನ್ ಯೂರಿಯಾ 1108 ಮೆಟ್ರಿಕ್ ಟನ್ ಡಿಎಪಿ ಹಾಗೂ 4542 ಮೆಟ್ರಿಕ್ ಟನ್ ಸಂಯುಕ್ತ ಗೊಬ್ಬರ ಪೂರೈಕೆಯಾಗಿದೆ. ಅದರಲ್ಲಿ ದಾಸ್ತಾನು ಕೂಡ ಇದೆ. ರೈತರು ಸರ್ಕಾರದಿಂದ ಪ್ರಮಾಣೀಕೃತವಾಗಿರುವ ನ್ಯಾನೊ ಯೂರಿಯಾ ಡಿಎಪಿ ಹಾಗೂ ಸಂಯುಕ್ತ ಗೊಬ್ಬರ ಬಳಕೆ ಮಾಡುವ ಮೂಲಕ ಪರ್ಯಾಯ ಗೊಬ್ಬರದ ಮಹತ್ವ ಅರಿಯಬೇಕು ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.