
ಯಾದಗಿರಿ: ‘ಮಕ್ಕಳ ಆಧಾರ್ ನೋಂದಣಿ ಪರಿಶೀಲನೆ, ಜೆಜೆಎಂ ಅಡಿ ಶಾಲೆ, ಅಂಗನವಾಡಿಗಳಿಗೆ ನಲ್ಲಿ ಸಂಪರ್ಕ, ಶೌಚಾಲಯ, ಶಾಲಾ ಅವಧಿಗೆ ಅನುಗುಣವಾಗಿ ಬಸ್ ಸಂಪರ್ಕ ಸೇರಿದಂತೆ ಇತರೆ ಕೆಲಸಗಳನ್ನು ಒಂದು ವಾರದೊಳಗೆ ಇತ್ಯರ್ಥ ಮಾಡಿ, ವರದಿ ಸಲ್ಲಿಸದೆ ಇದ್ದರೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಲಾಗುವುದು’ ಎಂದು ರಾಜ್ಯ ಮಕ್ಕಳು ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ ಕೋಸಂಬೆ ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಮಕ್ಕಳ ರಕ್ಷಣಾ ನಿರ್ದೇಶನಾಲಯ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ವಿವಿಧ ಭಾಗೀದಾರ ಇಲಾಖೆಗಳು ಹಾಗೂ ಎನ್‌ಜಿಒಗಳ ಜೊತೆಗೆ ಆರ್‌ಟಿಇ, ಪೋಕ್ಸೊ, ಬಾಲ್ಯ ನ್ಯಾಯ ಕಾಯ್ದೆ ಅನುಷ್ಠಾನ ಹಾಗೂ ಮಕ್ಕಳ ಸಂಬಂಧಿತ ಯೋಜನೆಗಳ ಜಾರಿ ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಸಭೆಗೆ ಕೆಲವು ಅಧಿಕಾರಿಗಳು ಸರಿಯಾದ ಅಂಕಿಅಂಶ, ಮಾಹಿತಿ ಇಲ್ಲದೆ ಬಂದಿದ್ದಕ್ಕೆ ಅವರನ್ನು ತರಾಟೆಗೆ ತೆಗೆದುಕೊಂಡರು. ‘ಮಾಹಿತಿ ಇರಿಸಿಕೊಂಡು ಬಾರದೆ ಕಳ್ಳಾಟ್ಟ ಆಡುತ್ತಿದ್ದಿರಾ’ ಎಂದು ಪ್ರಶ್ನಿಸಿದರು.
‘ಶಾಲೆಯಲ್ಲಿ ಯಾರ ಸಹಕಾರದಿಂದ ಡುಪ್ಲಿಕೆಟ್ ದಾಖಲೆಗಳು ಆಗುತ್ತಿವೆ? ಡುಪ್ಲಿಕೆಟ್ ದಾಖಲಾತಿಯಲ್ಲಿಯೂ ತಪ್ಪು ಲೆಕ್ಕಾಚಾರವಿದೆಯಾ? ಮಕ್ಕಳ ಹಕ್ಕುಗಳ ರಕ್ಷಣೆ ಹಾಗೂ ಶಿಕ್ಷಣ ಕಲ್ಪಿಸುವಲ್ಲಿ ಕಾಯ, ವಾಚ, ಮನಸ್ಸಿನಿಂದ ಕೆಲಸ ಮಾಡಿ. 10 ವರ್ಷಗಳು ಕಳೆದರೂ ಜಿಲ್ಲೆಯಲ್ಲಿ ರಾಜ್ಯ ಮಕ್ಕಳ ರಕ್ಷಣಾ ನೀತಿ-2016 ಅನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರಲು ಆಗುತ್ತಿಲ್ಲ’ ಎಂದು ಕಿಡಿಕಾರಿದರು.
‘ಶಾಲಾ ಆವರಣ ಮೇಲಿಂದ ಹಾದುಹೋಗುವ ಹೈಟೆನ್ಷನ್ ವೈರ್ ಹಾಗೂ ಸಮೀಪದ ವಿದ್ಯುತ್ ಪರಿವರ್ತಕಗಳನ್ನು ಆದಷ್ಟು ಬೇಗ ಸ್ಥಳಾಂತರ ಮಾಡಬೇಕು. ತಪ್ಪಿದಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ಶಿಸ್ತು ಕ್ರಮಕ್ಕೆ ಇಲಾಖೆಯ ಅಧಿಕಾರಿಗೆ ಶಿಫಾರಸು ಮಾಡಲಾಗುವುದು’ ಎಂದು ಎಚ್ಚರಿಸಿದರು.
‘ಬಿಸಿಯೂಟಕ್ಕೆ ಗುಣಮಟ್ಟದ ಆಹಾರಧಾನ್ಯಗಳನ್ನು ಬಳಸಬೇಕು. ನಿತ್ಯದ ಮೆನು ಪ್ರಕಾರವೆ ಆಹಾರವನ್ನು ತಯಾರಿಸಿ ಬಡಿಸಬೇಕು. ಅತಿಥಿ ಶಿಕ್ಷಕರ ಹಿನ್ನೆಲೆ ಪರಿಶೀಲನೆ ಮಾಡಬೇಕು. 2.66 ಲಕ್ಷ ಮಕ್ಕಳ ಆಧಾರ್ ಪರಿಶೀಲನೆ ಮಾಡಿ, ಆಧಾರ್ ಸೀಡಿಂಗ್ ಸಹ ಆಗಬೇಕು. ಜನನ ಪ್ರಮಾಣ ಪತ್ರಗಳ ಸಮಸ್ಯೆಗಳನ್ನು ಎರಡು ವಾರಗಳ ಒಳಗೆ ಪರಿಹರಿಸಬೇಕು’ ಎಂದರು.
ಡಿಡಿಪಿಐ ಚನ್ನಬಸಪ್ಪ ಮುಧೋಳ ಮಾತನಾಡಿ, ‘ಸಭೆಯಲ್ಲಿ ಆಯೋಗದ ಅಧ್ಯಕ್ಷರು ಸೂಚಿಸಿರುವ ಕೆಲಸವನ್ನು ನಿಗದಿತ ಗಡುವಿನೊಳಗೆ ಪೂರ್ಣಗೊಳಿಸಬೇಕು. ಅದರ ಅನುಪಾಲನ ವರದಿಯನ್ನು ಸಹ ಸಲ್ಲಿಕೆ ಮಾಡಬೇಕು. ಇಲ್ಲದೆ ಇದ್ದರೆ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಹೇಳಿದರು.
ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ತಿಪ್ಪಣ್ಣ ಶಿರಸಗಿ, ಡಿಸಿಪಿಒ ಸಾವಿತ್ರಿ,
ಕ್ಷೇತ್ರ ಶಿಕ್ಷಣಾಧಿಕಾರಿಗಳು, ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
‘ವಿಜ್ಞಾನ ಗಣಿತ ವಿಷಯಗಳು ಕಠಿಣವಾಗಿದ್ದು ಅತಿಥಿ ಶಿಕ್ಷಕರ ಬದಲು ಕಾಯಂ ಶಿಕ್ಷರನ್ನು ನಿಯೋಜನೆ ಮಾಡಿ. ಎಸ್‌ಎಸ್‌ಎಲ್‌ಸಿ ಪರೀಕ್ಷೆಗಾಗಿ ಹೆಚ್ಚುವರಿ ಕ್ಲಾಸ್ ನಡೆಯುತ್ತಿದ್ದು ಬೆಳಿಗ್ಗೆ ಮತ್ತು ಸಂಜೆ ತರಗತಿಗೆ ಅನುಕೂಲ ಆಗುವಂತೆ ಬಸ್‌ಗಳನ್ನು ಓಡಿಸಿ’ ಎಂದು ವಿದ್ಯಾರ್ಥಿಗಳು ಅಧಕ್ಷರಿಗೆ ಮನವಿ ಮಾಡಿದರು. ಸಂವಾದದಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡು ತಾವು ನಿತ್ಯ ಎದುರಿಸುತ್ತಿರುವ ಸಮಸ್ಯೆಗಳನ್ನು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ ಕೋಸಂಬೆ ಅವರ ಮುಂದೆ ಇರಿಸಿದರು.
‘ಸರ್ಕಾರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದ್ದರೂ ಶಿಕ್ಷಕರ ಸಂಖ್ಯೆ ಕಡಿಮೆಯಾಗಿದೆ. ಅರಕೇರಾ ಕೆ ಶಾಲೆಯ ಎಸ್‌ಎಸ್‌ಎಲ್‌ಸಿಯಲ್ಲಿ 140 ಮಕ್ಕಳಿದ್ದಾರೆ. ಅತಿಥಿ ಶಿಕ್ಷಕರಿಗೆ ನಿಯಂತ್ರಣ ಮಾಡಲು ಆಗುತ್ತಿಲ್ಲ. ಇಬ್ಬರು ಶಿಕ್ಷಕರನ್ನು ನಿಯೋಜಿಸಬೇಕು’ ಎಂದು ವಿದ್ಯಾರ್ಥಿ ಹೇಳಿದಳು.
ಹಾಲಗೇರಾ ನಾಯಕಲ್ ಬಳಿಚಕ್ರ ಸೇರಿ ಇತರೆ ಶಾಲೆಗಳ ಮಕ್ಕಳೂ ಶಿಕ್ಷಕರ ಕೊರತೆಯನ್ನು ಪ್ರಸ್ತಾಪಿಸಿದರು. ‘ಹಾಲಗೇರಾ ಶಾಲೆಗೆ 11 ಹಳ್ಳಿಗಳಿಂದ ಸಹಪಾಠಿಗಳು ಬರುತ್ತಾರೆ. ಸಮಯಕ್ಕೆ ಸರಿಯಾಗಿ ಬಸ್‌ಗಳು ಬಾರದೆ ತರಗತಿಗಳು ತಪ್ಪುತ್ತಿವೆ. ಕೆಕೆಆರ್‌ಟಿಸಿ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಸ್ಪಂದನೆ ಸಿಕ್ಕಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು. ‘ಲೆಕ್ಕ ಮಾಡಲು ಬರುವುದಿಲ್ಲ ಎಂದು ಶಿಕ್ಷಕರು ಹೊಡೆದು ತರಗತಿಯಿಂದ ಹೊರಗೆ ಹಾಕುತ್ತಾರೆ. ತಾವು ಸರಿಯಾಗಿ ಬೋಧಿಸುತ್ತಿಲ್ಲ. ಚೆನ್ನಾಗಿ ಪಾಠ ಮಾಡುವ ಅತಿಥಿ ಶಿಕ್ಷರಿಗೂ ಅವಕಾಶ ಕೊಡುತ್ತಿಲ್ಲ’ ಎಂದು ಬಳಿಚಕ್ರ ವಿದ್ಯಾರ್ಥಿನಿ ಅಲವತ್ತುಕೊಂಡಳು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು ‘ಮಕ್ಕಳಿಗೆ ಹೊಡೆದು ತರಗತಿಯಿಂದ ಹೊರ ಹಾಕುವಂತಿಲ್ಲ. ಈ ರೀತಿ ನಡೆದುಕೊಳ್ಳುವ ಶಿಕ್ಷಕರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು’ ಎಂದು ಬಿಇಒಗೆ ಸೂಚಿಸಿದರು.