
ಸುರಪುರದಲ್ಲಿ ಕೆವೈಡಿಸಿಸಿ ಬ್ಯಾಂಕ್ ನೂತನ ನಿರ್ದೇಶಕ ಸುರೇಶ ಸಜ್ಜನ್ ಅವರಿಗೆ ಸನ್ಮಾನಿಸಲಾಯಿತು
ಸುರಪುರ: ‘ಕಳೆದ ಅವಧಿಯ ನಮ್ಮ ಆಡಳಿತದಲ್ಲಿ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳ ಎಲ್ಲಾ ವ್ಯವಸಾಯ ಸೇವಾ ಸಹಕಾರ ಸಂಘಗಳಿಗೆ ₹ 1000 ಕೋಟಿ, ಆ ಪೈಕಿ ಸುರಪುರ ತಾಲ್ಲೂಕಿಗೆ ₹ 120 ಕೋಟಿ ಸಾಲ ವಿತರಣೆ ಮಾಡಲಾಗಿದೆ’ ಎಂದು ಕೆವೈಡಿಸಿಸಿ ಬ್ಯಾಂಕ್ ನೂತನ ನಿರ್ದೇಶಕ ಸುರೇಶ ಸಜ್ಜನ ತಿಳಿಸಿದರು.
ಬಸವೇಶ್ವರ ಪತ್ತಿನ ಸಹಕಾರ ಸಂಘದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ‘ನಾವು ಅಧಿಕಾರದ ಚುಕ್ಕಾಣಿಯಿಡಿದಾಗ ಕೆವೈಡಿಸಿಸಿ ಬ್ಯಾಂಕ್ ₹ 58 ಕೋಟಿ ರೂಪಾಯಿ ನಷ್ಟದಲ್ಲಿತ್ತು. ಮೂರು ವರ್ಷಗಳಿಂದ ರೈತರಿಗೆ ಯಾವ ಸಾಲ, ಸೌಲಭ್ಯ ಕೊಟ್ಟಿರಲಿಲ್ಲ. ಅಪೆಕ್ಸ್ ಮತ್ತು ನಬಾರ್ಡ್ ಬ್ಯಾಂಕ್‍ಗೆ ದುಡ್ಡು ಕಟ್ಟಬೇಕಾಗಿತ್ತು. ಇಂತಹ ಸಂದಿಗ್ಧ ಪರಿಸ್ಥಿಯಲ್ಲಿ ಬ್ಯಾಂಕ್‍ನ್ನು ಉತ್ತಮ ಹಳಿಗೆ ತಂದ ತೃಪ್ತಿ ಇದೆ’ ಎಂದರು.
‘ಈ ಬಾರಿಯ ನಿರ್ದೇಶಕ ಮಂಡಳಿ ಚುನಾವಣೆ ಭಾರಿ ಪೈಪೋಟಿಯಿಂದ ಕೂಡಿತ್ತು. ಈ ಬಾರಿ 104 ಮತಗಳಲ್ಲಿ 89 ಮತಗಳು ನನಗೆ ಬಂದು ನಾನು ಜಯಶೀಲನಾದೆ. ದೊಡ್ಡ ಬಹುಮತದಿಂದ ನನಗೆ ಚುನಾಯಿಸಿದರು. ಯಾದಗಿಯಲ್ಲಿ ಡಿಸಿಸಿ ಬ್ಯಾಂಕ್ ಆರಂಭಿಸುವ ಕನಸು ಹೊತ್ತಿದ್ದೇನೆ’ ಎಂದರು.
ಬಸವೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ಸಿ.ಪಾಟೀಲ, ಉಪಾಧ್ಯಕ್ಷ ವಿರೇಂದ್ರ ನಿಷ್ಠಿ ದೇಶಮುಖ, ಆಡಳಿತ ಮಂಡಳಿ ನಿರ್ದೇಶಕರು, ಪ್ರಮುಖರಾದ ಬಸವರಾಜ ಜಮದ್ರಖಾನಿ ಸೇರಿ ಶೇರುದಾರರು, ಸಮಾಜ ಬಾಂಧವರು, ಅಭಿಮಾನಿಗಳು ಇದ್ದರು.