ADVERTISEMENT

‘ಬಂಜಾರ ಭವನ ಉದ್ಘಾಟನೆಗೆ ವ್ಯವಸ್ಥೆ ಮಾಡಲಿ’

ಮುಖ್ಯಮಂತ್ರಿಗೆ ಕಪ್ಪು ಬಾವುಟ ಪ್ರದರ್ಶನದ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 8 ಜೂನ್ 2025, 15:50 IST
Last Updated 8 ಜೂನ್ 2025, 15:50 IST
ಯಾದಗಿರಿ ನಗರದ ಚಿತ್ತಾಪುರ ರಸ್ತೆಯಲ್ಲಿ ಉದ್ಘಾಟನೆಗೆ ಕಾದಿರುವ ಬಂಜಾರ ಭವನ
ಯಾದಗಿರಿ ನಗರದ ಚಿತ್ತಾಪುರ ರಸ್ತೆಯಲ್ಲಿ ಉದ್ಘಾಟನೆಗೆ ಕಾದಿರುವ ಬಂಜಾರ ಭವನ   

ಯಾದಗಿರಿ: ಶನಿವಾರ (ಜೂನ್‌ 14) ಜಿಲ್ಲೆಗೆ ಆಗಮಿಸಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ನಗರದ ಚಿತ್ತಾಪುರ ರಸ್ತೆಯಲ್ಲಿರುವ ಬಂಜಾರ ಭವನವನ್ನು ಉದ್ಘಾಟನೆ ಮಾಡಲು ಜಿಲ್ಲಾಡಳಿತ ವ್ಯವಸ್ಥೆ ಮಾಡಿಕೊಳ್ಳಬೇಕು. ಇಲ್ಲವಾದರೆ ಬಂಜಾರ ಸಮಾಜದಿಂದ ಸಿಎಂ ಅವರಿಗೆ ಕಪ್ಪು ಬಾವುಟ ಪ್ರದರ್ಶಿಸಲಾಗುತ್ತದೆ’ ಎಂದು ಬಂಜಾರ ಸಮಾಜದ ಮುಖಂಡರು ಎಚ್ಚರಿಸಿದರು.

ನಗರದಲ್ಲಿ ಭಾನುವಾರ ಜಂಟಿ ಸುದ್ದಿಗೋಷ್ಟಿ ನಡೆಸಿದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ದೇವರಾಜ ನಾಯಕ, ಸಮಾಜದ ಹಿರಿಯ ಮುಖಂಡ ಜನಾರ್ಧನ ರಾಠೋಡ, ನಗರಸಭೆ ಮಾಜಿ ಸದಸ್ಯ ಶಂಕರ ರಾಠೋಡ, ‘ಬಂಜಾರ ಭವನ ನಿರ್ಮಾಣವಾಗಿ ಮೂರು ವರ್ಷ ಕಳೆದರೂ ಉದ್ಘಾಟನೆ ಮಾಡಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಮುಖ್ಯಮಂತ್ರಿ ಅವರು ಜೂನ್ 14ರಂದು ವಿವಿಧ ಕಾಮಗಾರಿಗಳಿಗೆ ಅಡಿಗಲ್ಲು ಮತ್ತು ಉದ್ಘಾಟನೆ ಮಾಡಲಿದ್ದಾರೆ. ಅದೇ ವೇಳೆ ಬಂಜಾರ ಭವನವನ್ನೂ ಉದ್ಘಾಟಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಸಿದ್ದರಾಮಯ್ಯ ಅವರು ಈ ಹಿಂದಿನ ತಮ್ಮ ಅವಧಿಯಲ್ಲಿ ಬಂಜಾರ ಭವನ ನಿರ್ಮಾಣ ಮತ್ತು ಇತರೆ ಕಾಮಗಾರಿಗಳಿಗೆ 3 ಎಕರೆ 20 ಗುಂಟೆ ಜಮೀನು ಮಂಜೂರು ಮಾಡಿದ್ದರು. ನಂತರ ಯಡಿಯೂರಪ್ಪ ಅವರ ಅವಧಿಯಲ್ಲಿ ನೀಡಿದ್ದ ₹3.5 ಕೋಟಿ ಅನುದಾನದಲ್ಲಿ ಭವನ ನಿರ್ಮಾಣವಾಗಿದೆ. ಆದರೆ, ಉದ್ಘಾಟಿಸದಿರುವುದು ನಮ್ಮ ಸಮಾಜದ ಬಗ್ಗೆ ನಿರ್ಲಕ್ಷ್ಯವೆಂದು ಭಾವಿಸಬೇಕಾಗುತ್ತದೆ’ ಎಂದರು.

ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಯಂಕಪ್ಪ, ನಿವೃತ್ತ ಎಎಸ್‌ಐ ಮೇಘನಾಥ ಚವ್ಹಾಣ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.